ADVERTISEMENT

ನಾಗವಲ್ಲಿ, ಹೊನ್ನುಡಿಕೆ ಆಸ್ಪತ್ರೆ 24 ಗಂಟೆ ಸೇವೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 5:35 IST
Last Updated 17 ಫೆಬ್ರುವರಿ 2012, 5:35 IST

ತುಮಕೂರು: ಹೊನ್ನುಡಿಕೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೀಗ ಹಾಕಿದ್ದರಿಂದ ಬುಧವಾರ ಗರ್ಭಿಣಿಗೆ ಆಸ್ಪತ್ರೆ ಮುಂಭಾಗದಲ್ಲೇ ಗ್ರಾಮದ ಮಹಿಳೆಯರೇ ಹೆರಿಗೆ ಮಾಡಿಸಿದ ಘಟನೆ ಹಿನ್ನೆಲೆಯಲ್ಲಿ ಗುರುವಾರ ಶಾಸಕರು, ಮಾಜಿ ಶಾಸಕರು ಸೇರಿದಂತೆ ಆರೋಗ್ಯ ಇಲಾಖೆ ಆಯುಕ್ತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.

ಘಟನೆ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ಆಸ್ಪತ್ರೆ ಮುಂದೆ ಜಮಾಯಿಸಿದ ಜನರು ಆಸ್ಪತ್ರೆಗೆ ಬೀಗ ಜಡಿದು ಧರಣಿ ಕುಳಿತಿದ್ದರು. ಆಸ್ಪತ್ರೆ ಮುಂದೆಯೇ ಹೆರಿಗೆಯಾದ ಸುದ್ದಿ ಮಾಧ್ಯಮಗಳಲ್ಲಿ ಬಂದಿದ್ದರೂ ಜಿಲ್ಲಾ ಆರೋಗ್ಯಾಧಿಕಾರಿ ಕನಿಷ್ಠ ಪಕ್ಷ ಆಸ್ಪತ್ರೆಗೆ ಭೇಟಿ ನೀಡುವ ಸೌಜನ್ಯ ತೋರಿರಲಿಲ್ಲ. ಧರಣಿ ಕುಳಿತ ಜನರು ಆಕ್ರೋಶ ಹೆಚ್ಚುತ್ತಿದ್ದಂತೆ ಅಲ್ಲಿಗೆ ಆಗಮಿಸಿದ ಮಾಜಿ ಶಾಸಕ ಎಚ್.ನಿಂಗಪ್ಪ ಅವರು ಜಿಲ್ಲಾ ಆರೋಗ್ಯಾಧಿಕಾರಿಗೆ ಕರೆ ಮಾಡಿ ಪರಿಸ್ಥಿತಿಯನ್ನು ವಿವರಿಸಿದರು.

ಆನಂತರ ಆಸ್ಪತ್ರೆಗೆ ಬಂದ ಜಿಲ್ಲಾ ಆರೋಗ್ಯಾಧಿ ಕಾರಿ ಡಾ.ಚನ್ನಮಲ್ಲಯ್ಯ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು. ಚನ್ನಮಲ್ಲಯ್ಯ ಮತ್ತು ಜನರ ನಡುವೆ ವಾಗ್ವಾದ ಕೂಡ ನಡೆಯಿತು. ಆಸ್ಪತ್ರೆಯಲ್ಲಿ ವೈದ್ಯರ ಸಮಸ್ಯೆ ಇದ್ದರೂ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದರು.

 ಸ್ಥಳದಲ್ಲೇ ಇದ್ದ ವೈದ್ಯರನ್ನು ಕೂಡ ಜನರು ತರಾಟೆಗೆ ತೆಗೆದುಕೊಂಡರು. ಹೊನ್ನುಡಿಕೆಯಲ್ಲಿ ಬಾಡಿಗೆ ಮನೆ ಹುಡುಕುತ್ತಿದ್ದೇನೆ. ಮನೆ ಸಿಕ್ಕ ತಕ್ಷಣ ಗ್ರಾಮದಲ್ಲೇ ವಾಸ್ತವ್ಯ ಮಾಡುವುದಾಗಿ ವೈದ್ಯರು ಹೇಳಿದರೂ ಜನರು ಕಿವಿಗೊಡಲಿಲ್ಲ. ನಿವೃತ್ತ ಶಿಕ್ಷಕರೊಬ್ಬರು ಮನೆ ನಿರ್ಮಿಸುತ್ತಿದ್ದು, ಆ ಮನೆ ಬಾಡಿಗೆಗೆ ನೀಡಲಿದ್ದಾರೆ. ಆ ಮನೆ ಸಂಪೂರ್ಣವಾಗುವವರೆಗೂ ಆಸ್ಪತ್ರೆಯಲ್ಲೇ ತಂಗುವುದಾಗಿ ವೈದ್ಯರು ಭರವಸೆ ನೀಡಿದ ನಂತರ ಜನರು ಧರಣಿ ವಾಪಸ್ ಪಡೆದರು.

ಧರಣಿ ನೇತೃತ್ವವನ್ನು ತಾಲ್ಲೂಕು ಪಂಚಾಯತ್ ಸದಸ್ಯ ಆರ್.ಮಂಜುನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ ಇತರರು ವಹಿಸಿದ್ದರು.

ಶಾಸಕರ ಭೇಟಿ: ಇದಾದ ನಂತರ ಶಾಸಕ ಬಿ.ಸುರೇಶಗೌಡ ಆರೋಗ್ಯ ಇಲಾಖೆ ಆಯುಕ್ತ ರಾಮಪ್ರಸಾದ್ ಅವರೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿ ಸಭೆ ನಡೆಸಿದರು.

ಈ ಹಿಂದೆ ಈ ಆಸ್ಪತ್ರೆ 24-7 ಆಸ್ಪತ್ರೆ ಯಾಗಿತ್ತು. ಆದರೆ ತಿಂಗಳಿಗೆ 6 ಹೆರಿಗೆ ಮಾಡಿಸದ ಕಾರಣ ಸೌಲಭ್ಯ ವಾಪಸ್ ಪಡೆಯಲಾಗಿತ್ತು. ಇದಕ್ಕೆ ಈ ಹಿಂದಿನ ವೈದ್ಯಾಧಿಕಾರಿ ಕಾರಣ ಎಂದು ಆಯುಕ್ತರಿಗೆ ಮನವರಿಕೆ ಮಾಡಿಕೊಟ್ಟರು.

ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಪೋಲಿಯೊ ಪೂರ್ವಭಾವಿ ಸಭೆಗೆ ವೈದ್ಯರು ಹೋಗಿದ್ದು, ಆ ಸಮಯದಲ್ಲಿ ಆಸ್ಪತ್ರೆ ಬಾಗಿಲು ಮುಚ್ಚಿ ಹೊರಗೋಗಿದ್ದ ಆರೋಪದ ಮೇಲೆ ಡಿ ದರ್ಜೆ ನೌಕರರನ್ನು ಅಮಾನತು ಮಾಡಲು ಆಯುಕ್ತರು ಆದೇಶಿಸಿದರು.

ಹೊನ್ನುಡಿಕೆ ಆಸ್ಪತ್ರೆ ಭೇಟಿಯ ಬಳಿಕ ನಾಗವಲ್ಲಿ ಆಸ್ಪತ್ರೆಗೂ ಶಾಸಕರು, ಆಯುಕ್ತರು ಭೇಟಿ ನೀಡಿ ಪರಿಶೀಲಿಸಿದರು. ಹೊನ್ನುಡಿಕೆ, ನಾಗವಲ್ಲಿ ಆಸ್ಪತ್ರೆಗಳನ್ನು 24-7 ಆಸ್ಪತ್ರೆಯಾಗಿ ಮಾಡಬೇಕೆಂಬ ಶಾಸಕರ ಬೇಡಿಕೆ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಶೀಘ್ರವೇ 24 ಗಂಟೆ ಸೇವೆ ನೀಡುವ ಭರವಸೆಯನ್ನು ಆಯುಕ್ತರು ನೀಡಿದರು. ಈ ಎರಡು ಆಸ್ಪತ್ರೆಗಳಿಗೂ ಬೇಕಾದ ಸೌಲಭ್ಯ, ಸಿಬ್ಬಂದಿ ಒದಗಿಸುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.