ADVERTISEMENT

ನಾಟಿ ಕೋಳಿ ತಿಂದು ನಾಪತ್ತೆಯಾದ ಚಿರತೆ!

ತುಂಬಾಡಿ ಗ್ರಾಮದ ಹೊರವಲಯದ ಕೋಳಿಫಾರಂಗೆ ನುಗ್ಗಿದ ವ್ಯಾಘ್ರ

​ಪ್ರಜಾವಾಣಿ ವಾರ್ತೆ
Published 17 ಜೂನ್ 2018, 9:43 IST
Last Updated 17 ಜೂನ್ 2018, 9:43 IST

ಕೊರಟಗೆರೆ: ತಾಲ್ಲೂಕಿನ ತುಂಬಾಡಿ ಗ್ರಾಮದ ಬಳಿ ಚಂದ್ರಣ್ಣ ಎಂಬುವರ ಕೋಳಿ ಫಾರಂ ಟಿನ್ ಶೆಡ್‌ ಮೇಲಿಂದ ಒಳಗಡೆ ಬಿದ್ದ ಚಿರತೆ ಕೋಳಿಗಳನ್ನು ತಿಂದು ತೇಗಿತು. ಅಲ್ಲದೇ, ಹಿಡಿಯಲು ಬಂದವರ ಕೈಗೂ ಸಿಗದೇ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದೆ!

ಕೋಳಿ ಫಾರಂನಲ್ಲಿ ಚಿರತೆ ಇರುವುದು ಬೆಳಿಗ್ಗೆ 6 ಗಂಟೆ ಹೊತ್ತಿಗೆ ಗೊತ್ತಾದರೂ ಅರಣ್ಯ ಇಲಾಖೆ ಅಧಿಕಾರಿಗಳು, ಅರಿವಳಿಕೆ ತಜ್ಞರು ಮಧ್ಯಾಹ್ನ 1.30ರ ಹೊತ್ತಿಗೆ ಬಂದರು. ಅಲ್ಲಿಯವರೆಗೂ ಫಾರಂ ಒಳಗಡೆಯೇ ಚಿರತೆ ಆರ್ಭಟಿಸುತ್ತಿತ್ತು. ಹೊರಗಡೆಯಿಂದ ಈ ಚಿರತೆ ನೋಡಲು ಗ್ರಾಮಸ್ಥರು ತಂಡೋಪ ತಂಡವಾಗಿ ಬಂದಿದ್ದರು. ಇವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

ಅರಣ್ಯ ಅಧಿಕಾರಿ, ಸಿಬ್ಬಂದಿ, ಅರವಳಿಕೆ ತಜ್ಞರು ಏನೆಲ್ಲ ಸರ್ಕಸ್ ಮಾಡಿ ಚಿರತೆ ಹಿಡಿಯಬೇಕೆನ್ನುವಷ್ಟರಲ್ಲಿ ಚಿರತೆ ಫಾರಂನಿಂದ ಮಾಯವಾಗಿತ್ತು! ಹೀಗೆ ಕಂಡ ಚಿರತೆ ಮತ್ತೆಲ್ಲಿ ಹೋಯಿತು ಎಂದು ದಿಗಿಲುಗೊಂಡ ಕಾರ್ಯಾಚರಣೆಯ ತಂಡ ಫಾರಂ ಹೊರಗಡೆಯಿಂದಲೇ ಫಾರಂ ಒಳಗಡೆ ಚಿರತೆ ಹುಡುಕಾಟ ನಡೆಸಿದರು.

ADVERTISEMENT

ಹೊರಗಡೆಯಿಂದ ಚಿರತೆ ಕಾಣಿಸದೇ ಇದ್ದಾಗ, ಧೈರ್ಯ ಮಾಡಿ ಫಾರಂ ಬಾಗಿಲು ತೆರೆದು ಹೊಳ ಹೋದ ತಂಡಕ್ಕೆ ಅಚ್ಚರಿ ಕಾದಿತ್ತು!. ಫಾರಂ ಒಳಗಿನ ಸಂದಿಗೊಂದಿಯಲ್ಲಿ ಹುಡುಕಾಡಿದರೂ ಚಿರತೆ ಇಲ್ಲ!. ಬರೀ ಸತ್ತು ಬಿದ್ದ ನಾಟಿ ಕೋಳಿಗಳು, ಭಯದಲ್ಲಿ ಓಡಾಡುತ್ತಿದ್ದ ಕೋಳಿಗಳು ಮಾತ್ರ.

ಎಲ್ಲಿ ಹೋಯ್ತು.. ಹೇಗೆ ಹೋಯ್ತು?

ಅಯ್ಯೊ ಚಿರತೆ ಎಲ್ಲಿ ಹೊಯ್ತು? ಹೇಗೆ ಹೋಯ್ತು ಎಂದು ತಲೆಕೆಡಿಸಿಕೊಂಡು ಹುಡುಕಿದಾಗ ಫಾರಂ ಒಳಗಡೆಯ ಒಂದು ಮೂಲೆಯಲ್ಲಿ ಸಣ್ಣ ಕಿಂಡಿ ಕಂಡಿತು. ಅದರಲ್ಲಿ ತೂರಿಕೊಂಡು ಚಿರತೆ ಪರಾರಿಯಾಗಿದ್ದು ಪತ್ತೆಯಾಯಿತು.

ಫಾರಂ ಹೊರಗಡೆ ಬಂದು ಈ ವಿಷಯ ಹೇಳುತ್ತಿದ್ದಂತೆಯೇ ಚಿರತೆ ನೋಡಲು ಬಂದವರು ದಿಕ್ಕಾಪಾಲಾಗಿ ಓಡಿದರು. ಚಿರತೆ ಎಲ್ಲಿ ಹೋಯ್ತು? ನಮ್ಮೂರೊಳಗೆ ಬಂದರೆ ಹೇಗೆ?  ಅದನ್ನು ಹಿಡಿಯಲೇಬೇಕಿತ್ತು. ಒಳಗಿದ್ದ ಚಿರತೆ ಹಿಡಿಯಲಿಲ್ಲ ಎಂದರೆ ಹೇಗೆ? ಎಂದು ತುಂಬಾಡಿ ಗ್ರಾಮದ ಜನರು ಆತಂಕದಲ್ಲಿಯೇ ಚರ್ಚೆಯಲ್ಲಿ ಮುಳುಗಿದರು.

ಅರಣ್ಯಾಧಿಕಾರಿ ಕೆ.ಎಸ್. ಸತೀಶ್ಚಂದ್ರ, ಹಾಸನದ ಅರವಳಿಕೆ ತಜ್ಞ ಡಾ.ಎಚ್.ಡಿ.ಮುರಳೀಧರ್, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮಲಿಂಗೇಗೌಡ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ನಾಗರಾಜು, ಸಿಪಿಐ ಬಿ.ಮಹೇಶ್, ಸಬ್ ಇನ್‌ಸ್ಪೆಕ್ಟರ್ ಬಿ.ಸಿ.ಮಂಜುನಾಥ್  ಕಾರ್ಯಾಚರಣೆಯಲ್ಲಿದ್ದರು.

ಮೇವು ಹಾಕಲು ಬಂದಾಗ ಕಂಡ ಚಿರತೆ

‘ಬೆಳಿಗ್ಗೆ ಕೋಳಿಗಳಿಗೆ ಮೇವು ಹಾಕಲು ಶೆಡ್ ಬಾಗಿಲು ತೆರೆದಾಗ ಚಿರತೆ ಇರುವುದು ಕಾಣಿಸಿತು. ಗಾಬರಿಯಿಂದ ಹೊರ ಬಂದು ಬಾಗಿಲು ಹಾಕಿ ಕಿಟಕಿಯಿಂದ ಚಿರತೆ ಇರುವುದನ್ನು ಮೊಬೈಲಿನಲ್ಲಿ ವಿಡಿಯೋ ಮಾಡಿದೆ. ಆನಂತರ ಅರಣ್ಯಾಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದೆ. ಚಿರತೆ ದಾಳಿಯಿಂದ ಸುಮಾರು 150ಕ್ಕೂ ಹೆಚ್ಚು ಕೋಳಿಗಳು ಸತ್ತಿವೆ’ ಎಂದು ಕೋಳಿ ಫಾರಂ ಮಾಲೀಕ ಚಂದ್ರಣ್ಣ ಅವರ ಮಗ ಮಾರುತಿ ತಿಳಿಸಿದರು.

ಗ್ರಾಮಸ್ಥರಲ್ಲಿ ಆವರಿಸಿದ ಭಯ

‘ಗ್ರಾಮದ ಸಮೀಪದಲ್ಲಿಯೇ ಚಿರತೆ ಕಂಡು ಬಂದಿರುವುದು ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದೆ. ಚಿರತೆಯನ್ನು ಹಿಡಿದಿದ್ದರೆ ಜನರಲ್ಲಿ ಆತಂಕ ದೂರವಾಗಿ ಧೈರ್ಯದಿಂದ ಇರುತ್ತಿದ್ದರು. ಈಗ ಕಣ್ಣೆದುರಿಗಿದ್ದ ಚಿ

ಜನರು ಆತಂಕ ಪಡುವ ಅಗತ್ಯವಿಲ್ಲ

‘ಚಿರತೆಯು ಜನರ ಮೇಲೆ ಏಕಾಏಕಿ ದಾಳಿ ಮಾಡುವುದಿಲ್ಲ. ಅಚಾನಕ್ಕಾಗಿ ವಸತಿ ಪ್ರದೇಶಕ್ಕೆ ಬಂದಿದೆ. ಜನರು ಆತಂಕ ಪಡುವ ಅಗತ್ಯವಿಲ್ಲ. ತಮ್ಮ ಸಾಕು ಪ್ರಾಣಿಗಳನ್ನು ಸುರಕ್ಷಿತವಾದ ಜಾಗದಲ್ಲಿ ಇರುವಂತೆ ನೋಡಿಕೊಳ್ಳಬೇಕು’ ಎಂದು ತಾಲ್ಲೂಕು ಅರಣ್ಯಾಧಿಕಾರಿ ಕೆ.ಎಸ್. ಸತೀಶ್ಚಂದ್ರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.