ADVERTISEMENT

ನಿಮ್ಜಗೆ 15 ಸಾವಿರ ಕೋಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2012, 5:10 IST
Last Updated 15 ನವೆಂಬರ್ 2012, 5:10 IST

ತುಮಕೂರು: ಜಿಲ್ಲೆಯ ಚಿತ್ರಣವನ್ನೇ ಬದಲು ಮಾಡಲಿದೆ ಎಂದು ಹೇಳಲಾದ, ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಹಾಗೂ ಶಿರಾ ತಾಲ್ಲೂಕಿನ ಮುದಿಗೆರೆ ಕಾವಲ್‌ನಲ್ಲಿ ಸ್ಥಾಪಿಸಲಾಗುವ ಬಹುನಿರೀಕ್ಷಿತ ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯಕ್ಕೆ (ನಿಮ್ಜ) ಮೂಲ ಸೌಕರ್ಯಕ್ಕಾಗಿ ಮೊದಲ ಹಂತದಲ್ಲಿ ಕೇಂದ್ರ ಸರ್ಕಾರ ಜಿಲ್ಲೆಗೆ ರೂ. 15 ಸಾವಿರ ಕೋಟಿ ಬಿಡುಗಡೆ ಮಾಡಿದೆ.

ಬುಧವಾರ ಇಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಹಣ ಬಿಡುಗಡೆಯ ಕುರಿತು ಮಾಹಿತಿ ನೀಡಿದ ಸಂಸದ ಜಿ.ಎಸ್.ಬಸವರಾಜ್, ದಕ್ಷಿಣ ಭಾರತದಲ್ಲಿ ಈ ಯೋಜನೆಗೆ ಸೇರಿದ ಏಕೈಕ ಜಿಲ್ಲೆ ಇದಾಗಿದೆ. ಇದೊಂದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದೆ.  ಯೋಜನೆಗಾಗಿ ಕೇಂದ್ರ ಸರ್ಕಾರ ಒಟ್ಟು ರೂ. 25 ಕೋಟಿ ಸಾವಿರ ಹಣ ನೀಡಲಿದೆ ಎಂದರು.

ಬಿದರೆಹಳ್ಳ ಕಾವಲ್, ಮುದಿಗೆರೆ ಕಾವಲ್ ಗೋಮಾಳ ಅಲ್ಲ ಎಂದು ಸ್ಪಷ್ಟಪಡಿಸಿದ ಅವರು ಈಗಾಗಲೇ ಸರ್ಕಾರ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ ಎಂದರು.

ಯೋಜನೆಯಿಂದಾಗಿ ಮೊದಲ ಹಂತದಲ್ಲಿ 80 ಸಾವಿರ ಹಾಗೂ ಎರಡನೇ ಹಂತದಲ್ಲಿ 1.60 ಲಕ್ಷ  ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ. ತುಮಕೂರಿನ ಹಿರೇಹಳ್ಳಿ ಗುಬ್ಬಿಯ ಬಿದರೆಹಳ್ಳ ಕಾವಲ್, ಕುಂದರನಹಳ್ಳಿ, ಸಾಗರನಹಳ್ಳಿ, ಸೋಪನಹಳ್ಳಿ, ತಿಪಟೂರಿನ ಮಡೇನೂರು, ಕುಣಿಗಲ್‌ನ ಗೊಟ್ಟಿಗೆರೆ, ಶಿರಾದ ಮುದಿಗೆರೆ ಕಾವಲ್, ಚಿಕ್ಕನಾಯಕನಹಳ್ಳಿಯ ಆಲದಕಟ್ಟೆ, ಸಾಲುಕಟ್ಟೆ ತೊನ್ನಲಾಪುರ ಗ್ರಾಮಗಳ ವ್ಯಾಪ್ತಿಯಲ್ಲಿ 12,500 ಎಕರೆ ಭೂಮಿಯನ್ನು ಯೋಜನೆಗಾಗಿ ರಾಜ್ಯ ಸರ್ಕಾರ ವಶಪಡಿಸಿಕೊಂಡಿದೆ ಎಂದು ತಿಳಿಸಿದರು.

ಈ ಯೋಜನೆ ಕೈಗೊಳ್ಳುವುದರಿಂದ ಗುಡಿ ಕೈಗಾರಿಕೆ, ದೇಸಿ ಕುಲಕಸುಬುದಾರರು, ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆದಾರರ ಉತ್ಪನ್ನಗಳಿಗೆ, ರೈತರ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ, ವೈಜ್ಞಾನಿಕ ಬೆಲೆ ದೊರೆಯಲಿದೆ. ಜೊತೆಗೆ ಹಳ್ಳಿಗಳ ಜೀವನವೂ ಸುಧಾರಣೆಯಾಗಲಿದೆ.

ಕೃಷಿ ಜಮೀನಿನಲ್ಲಿ  ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆ ಆರಂಭಿಸಲು ರೈತರು ಮುಂದೆ ಬಂದರೆ ಚಟುವಟಿಕೆ ಆರಂಭಿಸಲು ಅನುಮತಿ ನೀಡಲು ಕ್ರಮ ಕೈಗೊಳ್ಳಬಹುದು ಎಂದರು.

ಸಕ್ಕಿಂಗ್- ಜಟ್ಟಿಂಗ್ ಯಂತ್ರ ಬಳಕೆಗೆ ಸೂಚನೆ

ತುಮಕೂರು: ನಗರದಲ್ಲಿ ಮಲಹೊರುವ ಪದ್ಧತಿಯನ್ನು ನಿಷೇಧಿಸಿರುವುದರಿಂದ ಶೌಚಾಲಯ ಟ್ಯಾಂಕ್ ಖಾಲಿ ಮಾಡಲು ಸಕ್ಕಿಂಗ್ ಮತ್ತು ಜಟ್ಟಿಂಗ್ ಯಂತ್ರವನ್ನು ಬಳಸುವಂತೆ ನಗರಸಭೆ ಆಯುಕ್ತರು ಸೂಚಿಸಿದ್ದಾರೆ. ನಗರಸಭೆಯಿಂದ ಒಂದು ಬಾರಿಗೆ ರೂ. 1000ದಂತೆ ಬಾಡಿಗೆಗೆ ಕೊಡಲಾಗುವುದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.