ADVERTISEMENT

ನಿವೇಶನ ಹಕ್ಕು ಪತ್ರಕ್ಕಾಗಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2011, 7:00 IST
Last Updated 19 ಜನವರಿ 2011, 7:00 IST

ತುರುವೇಕೆರೆ: ತಾಲ್ಲೂಕು ಮುನಿಯೂರು ಸಮೀಪದ ವಿವೇಕಾನಂದನಗರ ಆಶ್ರಯ ಯೋಜನೆ ಫಲಾನುಭವಿಗಳು ತಮ್ಮ ನಿವೇಶನಗಳನ್ನು ಸ್ವಾಧೀನಕ್ಕೆ ಕೊಡಿಸಬೇಕೆಂದು ಆಗ್ರಹಿಸಿ ಮಂಗಳವಾರ ಧರಣಿ ನಡೆಸಿದರು

ವಿವೇಕಾನಂದ ನಗರ ಮಜರೆ ಗ್ರಾಮದ ಸರ್ವೆ ನಂ.34ರಲ್ಲಿ 20 ವರ್ಷದ ಹಿಂದೆ 16 ಜನ ಹಿಂದುಳಿದ ವರ್ಗದ ಫಲಾನುಭವಿಗಳಿಗೆ 35*25 ಅಡಿ ವಿಸ್ತೀರ್ಣ ನಿವೇಶನಗಳನ್ನು ನೀಡಿ ಹಕ್ಕುಪತ್ರ ವಿತರಿಸಲಾಗಿತ್ತು. ನಂತರ ಫಲಾನುಭವಿಗಳಿಗೆ ನಿವೇಶನಗಳನ್ನು ಸ್ವಾಧೀನಕ್ಕೆ ಕೊಡಲಿಲ್ಲ.

ರಾಜಕೀಯ ಒತ್ತಡಗಳಿಗೆ ಮಣಿದ ಅಧಿಕಾರಿಗಳು ತಮ್ಮ ಹೆಸರಿಗೆ ಖಾತೆ ಮಾಡಿಕೊಡಲಿಲ್ಲ. ನಿವೇಶನ ಸ್ವಾಧೀನಕ್ಕೆ ಪಡೆಯಲು ಹೋದವರನ್ನು ಹೆದರಿಸಿ ಕೆಲವರ ಮೇಲೆ ಹಲ್ಲೆ ನಡೆಸಲಾಯಿತು. ಹೀಗಾಗಿ ನಾವು ಇಷ್ಟು ವರ್ಷ ಭಯದ ನೆರಳಲ್ಲೇ ಬದುಕಿ ಮನೆಯ ಆಸೆಯನ್ನೇ ಕೈಬಿಟ್ಟೆವು ಎಂದು ಪ್ರತಿಭಟನಾಕಾರರು ಆರೋಪಿಸಿದರು.

ನಿವೇಶನಗಳಿಗೆ ಬೇಲಿ ಹಾಕಿ ಒತ್ತುವರಿ ಮಾಡಿಕೊಂಡಿದ್ದವರು ಮಂಗಳವಾರ ಅಗೆದು ಗುಂಡಿಮಾಡಿ ಮಣ್ಣನ್ನೆಲ್ಲ ಪಕ್ಕದ ತಮ್ಮ ತೋಟಕ್ಕೆ ಹೊಡೆಸಿಕೊಂಡಿದ್ದು, ಒತ್ತುವರಿ ತೆರವುಗೊಳಿಸಿ ನಿವೇಶನಗಳನ್ನು ತಮ್ಮ ಹೆಸರಿಗೆ ಖಾತೆ ಮಾಡಿಕೊಡಬೇಕು. ಗೋವಿಂದಪ್ಪ ಎನ್ನುವವರು ಅತಿಕ್ರಮಣ ನಡೆಸಿ ನಿವೇಶನದಲ್ಲಿ ತೆಂಗು ಬೆಳೆದಿದ್ದಾರೆ. ಸುತ್ತಾ ತಂತಿಬೇಲಿ ಹಾಕಿದ್ದಾರೆ ಎಂದು ದೂರಿದರು. ಪ್ರತಿಭಟನೆಯಲ್ಲಿ ನಿವೇಶನ ವಂಚಿತರಾದ ರಮೇಶ್, ಎಂ.ದಾಸಪ್ಪ, ಸಣ್ಣಮ್ಮ, ಜಯಮ್ಮ, ಲಿಂಗಣ್ಣ, ಮಹದೇವಮ್ಮ ಜೊತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.