ಶಿರಾ: ನೆಮ್ಮದಿ ಕೇಂದ್ರದಲ್ಲಿ ಸಕಾಲದಲ್ಲಿ ದಾಖಲೆ ಸಿಗದೆ ಸಿಟ್ಟಿಗೆದ್ದ ರೈತರು ಮಂಗಳವಾರ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಹಣಿ ವೃದ್ಧಾಪ್ಯ ವೇತನ, ಅಂಗವಿಕಲರ ಮಾಸಾಶನ ಸೇರಿದಂತೆ ವಿವಿಧ ಸೌಲಭ್ಯ ವಿತರಿಸುವಲ್ಲಿ ತಾಲ್ಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ರೈತರು ಆರೋಪಿಸಿದರು. ಕೇಂದ್ರ ಸರ್ಕಾರದ ಬೆಳೆವಿಮೆ ನೀತಿಯಡಿ, ಬೆಳೆ ವಿಮೆ ಪಡೆಯಲು ಈ ತಿಂಗಳ 30 ಕೊನೆ ದಿನ ಎಂದು ಪ್ರಕಟಣೆಯಾದ ಕಾರಣ, ಸೋಮವಾರದಿಂದಲೇ ಪ್ರತಿದಿನ ಬೆಳಿಗ್ಗೆ ತಾಲ್ಲೂಕು ಕಚೇರಿ ಮುಂದೆ ಸಾಲುಗಟ್ಟಿ ನಿಲ್ಲುವ ರೈತರ ಪಾಡು ಕೇಳುವವರಿಲ್ಲದಂತಾಗಿದೆ. ಹಳ್ಳಿಗಳಿಂದ ಮುಂಜಾನೆಯೇ ಬಂದು ಸಾಲಿನಲ್ಲಿ ನಿಂತರೂ ಪಹಣಿ ಪತ್ರದ ಸ್ಟಾಕ್ ಇಲ್ಲ, ಇದ್ದರೂ ಅದಕ್ಕೆ ಸ್ಟಿಕ್ಕರ್ ಇಲ್ಲ ಎಂಬ ಸಿಬ್ಬಂದಿ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ತಹಶೀಲ್ದಾರ್ ಜಿ.ಎಚ್.ನಾಗಹನುಮಯ್ಯ ಮಾತನಾಡಿ, ಸಂಜೆ ವೇಳೆಗೆ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಲಿದ್ದಾರೆ. ಅವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಾಸ್ ಪಡೆದರು.ಪ್ರತಿಭಟನೆಯಲ್ಲಿ ತಾಲ್ಲೂಕು ರಕ್ಷಣಾ ವೇದಿಕೆ ಅಧ್ಯಕ್ಷ ಡೇರಿ ಕುಮಾರ್, ದಲಿತ ಮುಖಂಡ ಲಕ್ಷ್ಮೀಕಾಂತ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.