ADVERTISEMENT

ನೆಮ್ಮದಿ ಕೇಂದ್ರದ ಅವಾಂತರ

​ಪ್ರಜಾವಾಣಿ ವಾರ್ತೆ
Published 18 ಜುಲೈ 2012, 6:55 IST
Last Updated 18 ಜುಲೈ 2012, 6:55 IST

ತುಮಕೂರು: ನಗರದ ನೆಮ್ಮದಿ ಕೇಂದ್ರದಲ್ಲಿ ಆದಾಯ ಪ್ರಮಾಣ ಪತ್ರ ಪಡೆಯಬೇಕಾದರೆ ರೂ.200ರಿಂದ 300 ಲಂಚ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ನಾಗರಿಕರು ದಿಢೀರನೇ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಪಡಿತರ ಚೀಟಿ ಪಡೆಯಲು ಆದಾಯ ಪ್ರಮಾಣ ಪತ್ರ ನೀಡಬೇಕಾಗಿದೆ. ಶಾಲಾ-ಕಾಲೇಜು ಮಕ್ಕಳ ಪ್ರವೇಶಕ್ಕೂ ಜಾತಿ, ಆದಾಯ ಪ್ರಮಾಣ ಪತ್ರ ತುರ್ತಾಗಿ ಬೇಕಿದೆ. ಆದರೆ ನೆಮ್ಮದಿ ಕೇಂದ್ರದಲ್ಲಿ ಪ್ರಮಾಣ ಪತ್ರ ಪಡೆಯಲು ಬಂದರೆ ಸಿಗುತ್ತಿಲ್ಲ. ಟೋಕನ್ ಜಾರಿಗೊಳಿಸಿದ್ದರೂ ಮಧ್ಯವರ್ತಿಗಳಿಗೆ 20ರಿಂದ 30 ಟೋಕನ್ ನೀಡಿ ಜನರಿಗೆ ಟೋಕನ್ ಮುಗಿದಿವೆ ಎನ್ನುತ್ತಾರೆ. ಮಧ್ಯವರ್ತಿಗಳಿಗೆ ಹಣ ನೀಡಿದರೆ  ಟೋಕನ್ ಸಿಗುತ್ತದೆ ಎಂದು ಆರೋಪಿಸಿದರು.

ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಸ್ಥಳಕ್ಕೆ ಬಂದ ತಹಶೀಲ್ದಾರ್ ಅಹೋಬಳಯ್ಯ ವಿರುದ್ಧವು ಆಕ್ರೋಶ ವ್ಯಕ್ತವಾಯಿತು. ಜಾತಿ, ಆದಾಯ ಪ್ರಮಾಣ ಪತ್ರ ನೀಡಲು ತಾಲ್ಲೂಕು ಕಚೇರಿಯಲ್ಲಿ 2 ಕೌಂಟರ್ ತೆರೆಯಲಾಗಿದೆ. ಈಗ ಶಾಲಾ-ಕಾಲೇಜು ಪ್ರವೇಶ ನಡೆಯುತ್ತಿರುವುದು ಸ್ವಲ್ಪ ನೂಕುನುಗ್ಗಲು ಹೆಚ್ಚಿರುತ್ತದೆ ಎಂದು ತಹಶೀಲ್ದಾರ್ ಸಮರ್ಥನೆ ಜನರನ್ನು ಮತ್ತಷ್ಟು ರೊಚ್ಚಿಗೆಬ್ಬಿಸಿತು.

ಜನರ ಒತ್ತಾಯದ ಕಾರಣ ನೆಮ್ಮದಿ ಕೇಂದ್ರಕ್ಕೆ ಭೇಟಿ ನೀಡಿದ ಅಹೋಬಳಯ್ಯ ಅಲ್ಲಿನ ವ್ಯವಸ್ಥೆ ಪರಿಶೀಲಿಸಿದರು. ಪ್ರತಿ ದಿನ 300 ಟೋಕನ್ ನೀಡಲಾಗುವುದು. ಆನಂತರ ಟೋಕನ್ ನೀಡಲಾಗುವುದಿಲ್ಲ. ಟೋಕನ್ ಪಡೆದವರು ವಾರ ಬಿಟ್ಟು ಪ್ರಮಾಣ ಪತ್ರ ಪಡೆಯುವ ವ್ಯವಸ್ಥೆ ಮಾಡಿದರು. ಸ್ಥಳದಲ್ಲಿದ್ದವರಿಗೆ ಅಹೋಬಳಯ್ಯ ಮುಂದೆ ನಿಂತು ಟೋಕನ್ ಹಂಚಿ ಸಮಾಧಾನಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.