ADVERTISEMENT

ನೆಲೆ ಇಲ್ಲದ ನೈಟ್ ಕ್ಯಾಂಟೀನ್

​ಪ್ರಜಾವಾಣಿ ವಾರ್ತೆ
Published 24 ಜನವರಿ 2011, 10:55 IST
Last Updated 24 ಜನವರಿ 2011, 10:55 IST

ತುಮಕೂರು: ನಿತ್ಯವೂ ಸಾವಿರಕ್ಕೂ ಅಧಿಕ ಜನರಿಗೆ ಕಡಿಮೆ ದರದಲ್ಲಿ ‘ಊಟ’ ನೀಡುವ ರಸ್ತೆ ಬದಿಯ ನೈಟ್ ಕ್ಯಾಂಟೀನ್‌ಗಳು, ಸೂಕ್ತ ನೆಲೆ ಇಲ್ಲದ ಕಾರಣ ನೆಲ ಕಚ್ಚುವ ಭೀತಿ ಎದುರಿಸುತ್ತಿವೆ.

ಕಳೆದ ಕೆಲ ವರ್ಷಗಳಿಂದ ಕುವೆಂಪು ನಗರಕ್ಕೆ ತೆರಳುವ ರಸ್ತೆ ಬದಿಯ ಒಂದು ಕಡೆ ಭದ್ರ ನೆಲೆಯೂರಿ; ತಮ್ಮ ಬದುಕು ಕಂಡುಕೊಂಡಿದ್ದ ನೈಟ್ ಕ್ಯಾಂಟೀನ್‌ಗಳ ಮಾಲೀಕರು ಅಲ್ಲಿಂದ ಸ್ಥಳಾಂತರಗೊಂಡ ನಂತರ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿದ್ದರೆ; ಇತ್ತ ರಾತ್ರಿ ಊಟಕ್ಕಾಗಿ ಮಧ್ಯಮ ವರ್ಗದ ಜನರು ಅಲೆದಾಡುತ್ತಿದ್ದಾರೆ.

ಕುವೆಂಪು ರಸ್ತೆಯ ಒಂದು ಬದಿಯಲ್ಲಿ ಯಾರಿಗೂ ತೊಂದರೆಯಾಗದ ರೀತಿ ನೈಟ್ ಕ್ಯಾಂಟೀನ್ ವ್ಯಾಪಾರ ಕೆಲ ವರ್ಷಗಳಿಂದ ಬಿರುಸಿನಿಂದ ನಡೆಯುತ್ತಿತ್ತು. ಒಂದೇ ಕಡೆ ವಿಭಿನ್ನ ಬಗೆಯ ರುಚಿಕಟ್ಟಾದ ಆಹಾರ ದೊರಕುತ್ತಿತ್ತು. ಇಡ್ಲಿ, ದೋಸೆ, ಚಿತ್ರಾನ್ನ, ವಿವಿಧ ಬಗೆಯ ರೈಸ್‌ಬಾತ್, ಚುರುಮುರಿ, ಪಾನಿಪೂರಿ, ಐಸ್‌ಕ್ರೀಂ ಪಾರ್ಲರ್, ಬಜ್ಜಿ ಅಂಗಡಿ ಇದ್ದವು.

ಸಸ್ಯಹಾರದ ಜತೆ ಮಾಂಸಾಹಾರಿ ಊಟವೂ ಇಲ್ಲಿ ಸಿಗುತ್ತಿತ್ತು. ಹತ್ತರಿಂದ ಹದಿನೈದು ಕ್ಯಾಂಟೀನ್‌ಗಳು ವಿವಿಧ ಬಗೆಯ ಭೋಜನ ನೀಡುತ್ತಿದ್ದವು. ಅದು ಹೋಟೆಲ್ ದರಕ್ಕಿಂತ ಕಡಿಮೆ ದರದಲ್ಲಿ. ನಿತ್ಯವೂ ಸಾವಿರಕ್ಕೂ ಅಧಿಕ ಜನ ಇಲ್ಲಿ ಜಮಾಯಿಸಿ ರಾತ್ರಿ ಭೋಜನ ಮಾಡುತ್ತಿದ್ದರು.ನಿತ್ಯವೂ ಸಂಜೆ ಆರರಿಂದ ಹತ್ತು ಗಂಟೆವರೆಗೆ ಶ್ರಮಿಸಿದರೆ ನೈಟ್ ಕ್ಯಾಂಟೀನ್ ಮಾಲೀಕರು ಸಾವಿರಾರು ರೂಪಾಯಿ ಆದಾಯ ನೋಡುತ್ತಿದ್ದರು. ಬೆಳಿಗ್ಗೆ ಎದ್ದು ಕೆಲಸದ ನಿಮಿತ್ತ ಅತ್ತಿಂದಿತ್ತ ಸಂಚರಿಸುತ್ತಿದ್ದ ಮಧ್ಯಮ ವರ್ಗದ ಜನತೆಯೂ ಈ ನೈಟ್ ಕ್ಯಾಂಟೀನ್‌ಗಳಲ್ಲಿ ರಾತ್ರಿ ನೆಮ್ಮದಿಯ ಊಟ ಮಾಡುತ್ತಿದ್ದರು.

ಸಣ್ಣ-ಪುಟ್ಟ ಕಿರಿಕಿರಿ ಹೊರತುಪಡಿಸಿದರೆ ಎಲ್ಲವೂ ಮಾಮೂಲಿಯಾಗಿ ನಡೆದಿತ್ತು. ಆದರೆ ಕಳೆದ ಕೆಲ ತಿಂಗಳಿಂದ ಆ ರಸ್ತೆಯಲ್ಲಿ ವಿವಿಧ ಕಾರಣಗಳಿಂದ ವ್ಯಾಪಾರ ನಡೆಸದಂತೆ ನಿರ್ಬಂಧ ಹೇರಿದ ಮೇಲೆ ಎಲ್ಲವೂ ಅಯೋಮಯವಾಗಿದೆ ಎನ್ನುತ್ತಾರೆ ಕ್ಯಾಂಟೀನ್‌ಗಳ ಮಾಲೀಕರು.ಅಲ್ಲಿಂದ ಎತ್ತಂಗಡಿ ಆಗುತ್ತಿದ್ದಂತೆ ಟಿಜಿಎಂಸಿ ಬ್ಯಾಂಕಿನ ಎದುರು ಭಾಗ ರಾಷ್ಟ್ರೀಯ ಹೆದ್ದಾರಿ ಬದಿ ಕ್ಯಾಂಟೀನ್ ನಡೆಸುತ್ತಿದ್ದೇವೆ. ಈ ಹಿಂದೆ ನಡೆಯುತ್ತಿದ್ದ ವ್ಯಾಪಾರ ಇಲ್ಲಿ ನಡೆಯುತ್ತಿಲ್ಲ. ನಿತ್ಯವೂ ನಷ್ಟ ಅನುಭವಿಸುತ್ತಿದ್ದೇವೆ. ವಿಧಿ ಇಲ್ಲ.

ಬೇರೆ ಏನೂ ಮಾಡಲು ಆಗದೆ ಇದನ್ನೇ ಮುಂದುವರಿಸುತ್ತಿದ್ದೇವೆ. ಇಲ್ಲಿಂದ ಯಾವಾಗ ಯಾವ ಕಡೆ ಎತ್ತಂಗಡಿ ಮಾಡುತ್ತಾರೋ ಗೊತ್ತಿಲ್ಲ. ಯಾರಾದರೂ ಸುಳ್ಳು ದೂರು ನೀಡಿದರೂ ನಮ್ಮಿಂದ ತೊಂದರೆ ಆಗುತ್ತಿದೆ ಎಂದು ಎತ್ತಂಗಡಿ ಮಾಡುತ್ತಾರೆ. ನಮಗೆ ನಿರ್ದಿಷ್ಟ ನೆಲೆ ಇಲ್ಲ. ಒಂದು ಕಡೆ ನೆಲೆ ಕಲ್ಪಿಸಿ ಎಂದು ಜನಪ್ರತಿನಿಧಿಗಳ ಬಳಿ ಗೋಗರೆದಿದ್ದೇವೆ. ಎಲ್ಲರೂ ಭರವಸೆ ನೀಡಿದ್ದಾರೆ. ಆದರೆ ನಮಗೆ, ನಮ್ಮ ಕುಟುಂಬಗಳಿಗೆ ಸದಾ ಕಗ್ಗತ್ತಲೇ ಕವಿದಂತಾಗಿದೆ. ಯಾವ ಕ್ಷಣದಲ್ಲೂ ಬೇಕಾದರೂ ಇಲ್ಲಿಂದ ಎತ್ತಂಗಡಿ ಮಾಡಿಸುವ ಆತಂಕ ಸದಾ ಕಾಡುತ್ತಲೆ ಇದೆ ಎನ್ನುತ್ತಾರೆ.

‘ರಾತ್ರಿ ವೇಳೆ ಊಟಕ್ಕಾಗಿ ಅಲೆಯುವ ಸಮಸ್ಯೆ ಇರಲಿಲ್ಲ. ಎಲ್ಲ ಕೆಲಸ ಪೂರೈಸಿ ನೈಟ್ ಕ್ಯಾಂಟೀನ್‌ಗಳತ್ತ ಹೆಜ್ಜೆ ಹಾಕಿದ್ದರೆ ಸಾಕಿತ್ತು. ವಿಭಿನ್ನ ಬಗೆಯ ಊಟ-ಉಪಾಹಾರ ದೊರಕುತ್ತಿತ್ತು. ಹೋಟೆಲ್‌ಗಳ ದರಕ್ಕಿಂತ ಕಡಿಮೆ ದರದಲ್ಲಿ ರುಚಿಕಟ್ಟಾದ ಊಟ ಮಾಡಿ ನೆಮ್ಮದಿಯಿಂದ ರೂಮು, ಮನೆಗಳಿಗೆ ಹೋಗುತ್ತಿದ್ದೇವು. ಈಗ ಕೆಲ ದಿನಗಳಿಂದ ನೈಟ್ ಕ್ಯಾಂಟೀನ್‌ಗಳನ್ನು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಎಂಬಂತೆ ಎತ್ತಂಗಡಿ ಮಾಡುತ್ತಿದ್ದಾರೆ. ಇದರಿಂದ ಒಂದೇ ಕಡೆ ಊಟ ದೊರೆಯದಾಗಿದೆ. ಕೆಲವರ ಸ್ವಾರ್ಥಕ್ಕಾಗಿ, ಲಾಭಕೋರತನಕ್ಕಾಗಿ ಇದೆಲ್ಲ ನಡೆಯುತ್ತಿದೆ’ ಎಂದು ಕಾರ್ಮಿಕ ಅಶೋಕ್ ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.