ADVERTISEMENT

ಪಟ್ಟಣ ಬ್ಯಾಂಕ್ ಮುಖ್ಯಸ್ಥರಿಗೆ ಘೇರಾವ್

​ಪ್ರಜಾವಾಣಿ ವಾರ್ತೆ
Published 4 ಜೂನ್ 2011, 9:00 IST
Last Updated 4 ಜೂನ್ 2011, 9:00 IST

ತುರುವೇಕೆರೆ: ಪಟ್ಟಣದ ಪ್ರಮುಖ ವಾಣಿಜ್ಯ ಕೇಂದ್ರವಾದ ಪಟ್ಟಣ ಬ್ಯಾಂಕ್ ಸಂಕೀರ್ಣದ 38 ಅಂಗಡಿಗಳು ಕಳೆದ 4 ದಿನಗಳಿಂದ ಕತ್ತಲಿನಲ್ಲಿ ಮುಳುಗಿದ್ದು, ಈ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿ  ಬಾಡಿಗೆದಾರರು ಬ್ಯಾಂಕಿನ ವ್ಯವಸ್ಥಾಪಕರನ್ನು ಘೇರಾವ್ ಮಾಡಿದ ಘಟನೆ ಶುಕ್ರವಾರ ನಡೆಯಿತು.

ಕಳೆದ ನಾಲ್ಕು ದಿನಗಳಿಂದ ಸಂಕೀರ್ಣದ ಅಂಗಡಿಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಸಂಕೀರ್ಣ ಬಹುಮಹಡಿ ಕಟ್ಟಡ ಎಂದು ಪರಿಗಣನೆಗೆ ಬಂದಿರುವುದರಿಂದ ನೂತನ  ಕ್ರಮಬದ್ಧ ಸಂಪರ್ಕ ಪಡೆಯುವ ದೃಷ್ಟಿಯಿಂದ ಹಾಲಿ ಸಂಪರ್ಕ ಕಡಿತಗೊಳಿಸಲಾಗಿದೆ. ಒಂದೆರಡು ದಿನಗಳಲ್ಲಿ ಸಂಪರ್ಕ ಕಲ್ಪಿಸಿಕೊಡಲಾಗುವುದು ಎಂದು ಭರವಸೆ ನೀಡಲಾಗಿತ್ತು.

ಆದರೆ ಮೂರು ದಿನ ಕಳೆದರೂ ವಿದ್ಯುತ್ ಸಂಪರ್ಕ ಕಲ್ಪಿಸದ ಕಾರಣ ಆಕ್ರೋಶಗೊಂಡ ಬಾಡಿಗೆದಾರರು ಪ.ಪಂ. ಸದಸ್ಯ ಟಿ.ಎನ್.ಶಿವರಾಜ್ ನೇತೃತ್ವದಲ್ಲಿ ಬ್ಯಾಂಕಿನ ಕಚೇರಿಯಲ್ಲಿ ವ್ಯವಸ್ಥಾಪಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ನಿರ್ದೇಶಕರ ಸಭಾ ನಡವಳಿಕೆ ಪುಸ್ತಕದಲ್ಲಿ ದಿನಾಂಕ, ವಾರ, ಹಾಜರಿ ಸಂಖ್ಯೆ, ನಿರ್ದೇಶಕರ ಸಹಿ ಎಲ್ಲವನ್ನೂ ಕಾಲಿಬಿಟ್ಟು ಬ್ಯಾಂಕಿನ ನಿಬಂಧನೆಗೆ ಬಾಡಿಗೆದಾರರನ್ನು ಒಳಪಡಿಸಲು, ಸ್ವತಃ ಬ್ಯಾಂಕ್ ಆಡಳಿತವೇ ವಿದ್ಯುತ್ ಸಂಪರ್ಕ ಕಿತ್ತು ಹಾಕಿಸುವ ತೀರ್ಮಾನ ದಾಖಲಿಸಿರುವುದು ಬೆಳಕಿಗೆ ಬಂತು. 

ಇದರಿಂದ ಸಿಟ್ಟಿಗೆದ್ದ ಬಾಡಿಗೆ ದಾರರು ವ್ಯವಸ್ಥಾಪಕರ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. ಬೆಸ್ಕಾಂ ಅಧಿಕಾರಿಗಳು ಸಹ ಬ್ಯಾಂಕ್‌ನ ಆಡಳಿತ ಮಂಡಳಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಮನವಿ ಸಲ್ಲಿಸಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

ಶನಿವಾರ ಬೆಳಿಗ್ಗೆ 11 ಗಂಟೆಯೊಳಗೆ ಅಂಗಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡದಿದ್ದರೆ ಬ್ಯಾಂಕ್ ಮುಂದೆ ಧರಣಿ ನಡೆಸಲಾಗುವುದು ಎಂದು ಬಾಡಿಗೆದಾರರು ಎಚ್ಚರಿಸಿದ್ದಾರೆ.

ರೈತರ ವಶಕ್ಕೆ ಟ್ರ್ಯಾಕ್ಟರ್
ಕರ್ನಾಟಕ ಬ್ಯಾಂಕ್ ಜಪ್ತಿ ಮಾಡಿದ್ದ ಚಂದ್ರಯ್ಯ ಎಂಬ ರೈತರ ಟ್ರ್ಯಾಕ್ಟರನ್ನು ಬಿಡುಗಡೆಗೊಳಿಸುವಂತೆ ಆದೇಶ ಬಂದಿದೆ ಎಂದು ರೈತ ಮುಖಂಡ ರಾಮಕೃಷ್ಣಯ್ಯ ಹಾಗೂ ಮೂರ್ತಿ ತಿಳಿಸಿದ್ದಾರೆ.

ಬ್ಯಾಂಕಿನ ವ್ಯವಸ್ಥಾಪಕರು ಕೂಡ ಮೇಲಧಿಕಾರಿಗಳಿಂದ ಈ ಸಂಬಂಧ ಅನುಮತಿ ಸಿಕ್ಕಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಇದು ರೈತ ಹೋರಾಟಕ್ಕೆ ಸಂದ ಜಯ ಎಂದು ರೈತ ಮುಖಂಡರು ಸಂತಸ ವ್ಯಕ್ತಪಡಿಸಿದ್ದಾರೆ.

ನಗರಸಭೆ ವಿಶೇಷ ಸಭೆ ಇಂದು
ತಿಪಟೂರು: ನಗರಸಭಾ ಅಧ್ಯಕ್ಷೆ ಸಿ.ಎಂ.ಸರಸ್ವತಿ ಅಧ್ಯಕ್ಷತೆಯಲ್ಲಿ ಜೂನ್ 4ರಂದು ಶನಿವಾರ ಬೆಳಿಗ್ಗೆ 11ಕ್ಕೆ ನಗರಸಭಾ ಸದಸ್ಯರ ವಿಶೇಷ ಸಭೆ ಕಚೇರಿ ಸಭಾಗಂಣದಲ್ಲಿ ಜರುಗಲಿದೆ.

ನಗರದ ಘನತ್ಯಾಜ್ಯ ವಸ್ತುಗಳ ನಿರ್ವಹಣೆ ಯೋಜನೆ ಅನುಷ್ಠಾನಗೊಳಿಸುವ ಬಗ್ಗೆ ಲೋಕ್‌ಅದಾಲತ್‌ಗೆ ಪ್ರಮಾಣ ಪತ್ರವನ್ನು ನಗರಸಭೆ ಸಲ್ಲಿಸಬೇಕಿರುವುದರ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಈ ವಿಶೇಷ ಸಭೆ ಕರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.