ADVERTISEMENT

ಪತ್ತೆಯಾದರೂ ತಾಯಿ ಮಡಿಲು ಸೇರದ ಶಿಶು!

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 10:30 IST
Last Updated 4 ಸೆಪ್ಟೆಂಬರ್ 2013, 10:30 IST

ಗೌರಿಬಿದನೂರು: ಪಟ್ಟಣದ ಸರ್ಕಾರಿ ಆಸ್ಪತ್ರೆಯಿಂದ ಐದು (ಆಗಸ್ಟ್ 29) ದಿನಗಳ ಹಿಂದೆ ಅಪಹರಣಗೊಂಡಿದ್ದ ನವಜಾತ ಹೆಣ್ಣು ಶಿಶು ಸೋಮವಾರ ಬೆಂಗಳೂರಿನಲ್ಲಿ ಪತ್ತೆಯಾಗಿದೆ.

ಆದರೆ. ಸರ್ಕಾರದ ನಿಯಮಾವಳಿಯಿಂದಾಗಿ ಶಿಶು ಇನ್ನೂ ತಾಯಿ ಮಡಿಲು ಸೇರಲು ಸಾಧ್ಯವಾಗಿಲ್ಲ. ಪೋಷಕರೊಂದಿಗೆ ಪೊಲೀಸರು ಮತ್ತು ವೈದ್ಯರು ಬೆಂಗಳೂರಿಗೆ ತೆರಳಿದ್ದರೂ ಅವರಿಗೆ ಶಿಶುಗೆ ನೋಡಲು ಮಾತ್ರವೇ ಸಾಧ್ಯವಾಯಿತೇ ಹೊರತು ಕರೆತರಲು ಆಗಲಿಲ್ಲ.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಶಿಶು ಅಭಿವೃದ್ಧಿ ಅಧಿಕಾರಿಯಿಂದಲೇ ಶಿಶು ಪಡೆದುಕೊಳ್ಳಬೇಕೆಂದು ಸೂಚಿಸಿದ ಹಿನ್ನೆಲೆಯಲ್ಲಿ ಎಲ್ಲರೂ ಬರೀ ಕೈಯಲ್ಲಿ ತಾಲ್ಲೂಕಿಗೆ ಮರಳಿದರು.

ದೊಡ್ಡಬಳ್ಳಾಪುರ ತಾಲ್ಲೂಕಿನ ಜೋಗಿಹಳ್ಳಿ ಗ್ರಾಮದ ಶಿವಕುಮಾರ್ ಎಂಬುವರನ್ನು ವಿವಾಹವಾದ ಗೌರಿಬಿದನೂರು ತಾಲ್ಲೂಕಿನ ಹಾಲಗಾನಹಳ್ಳಿ ಗ್ರಾಮದ ನಿವಾಸಿ ಮಮತಾ ಅವರು ಮೊದಲ ಹೆರಿಗೆಗಾಗಿ ತವರೂರಿಗೆ ಆಗಮಿಸಿದ್ದರು. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾದ ಅವರು ಆಗಸ್ಟ್ 29ಕ್ಕೆ ಶಿಶುವಿಗೆ ಜನ್ಮ ನೀಡಿದರು. ಆದರೆ ಅದೇ ರಾತ್ರಿಯಿಂದ ಅಪರಿಚಿತ ಮಹಿಳೆಯರೊಬ್ಬರು ಶಿಶುವನ್ನು ಅಪಹರಿಸಿ ಅಲ್ಲಿಂದ ಪರಾರಿಯಾಗಿದ್ದರು. ಇಡೀ ಪಟ್ಟಣ ಮತ್ತು ತಾಲ್ಲೂಕಿನಾದ್ಯಂತ ಹುಡುಕಾಟ ನಡೆಸಿದರೂ ಶಿಶು ಪತ್ತೆಯಾಗಲಿಲ್ಲ.

ಬೆಂಗಳೂರಿನಲ್ಲಿ ಸೋಮವಾರ ಕೆ.ಆರ್.ಮಾರುಕಟ್ಟೆಯಿಂದ ಜಗಜೀವನರಾಮನಗರಕ್ಕೆ ಹೋಗುವ ಬಿಎಂಟಿಸಿ ಬಸ್‌ನಲ್ಲಿ ಅಪರಿಚಿತ ಮಹಿಳೆ ಶಿಶುವನ್ನು ಹೊತ್ತೊಯ್ಯುತ್ತಿದ್ದಳು. ಆದರೆ ಬಸ್‌ನಲ್ಲಿ ಜನದಟ್ಟಣೆ ಹೆಚ್ಚಿದ್ದ ಕಾರಣ ಲಕ್ಷ್ಮಿ ಎಂಬುವರ ಕೈಯಲ್ಲಿ ಶಿಶುವನ್ನು ಕೊಟ್ಟು ಪರಾರಿಯಾದಳು.

ಇದರಿಂದ ಗೊಂದಲಕ್ಕೀಡಾದ ಲಕ್ಷ್ಮಿ ಜಗಜೀವನರಾಮನಗರ ಪೊಲೀಸ್ ಠಾಣೆಗೆ ಹೋಗಿ ಶಿಶುವನ್ನು ನೀಡಿದರು. ಆ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ರಮೇಶ್ ಗೌರಿಬಿದನೂರು ಸರ್ಕಲ್ ಇನ್ಸ್‌ಪೆಕ್ಟರ್ ವಿ.ಲಕ್ಷ್ಮಯ್ಯಗೆ ವಿಷಯ ತಿಳಿಸಿದರು. ಆಗ ಶಿಶು ಪತ್ತೆಯಾಗಿರುವುದು ಖಚಿತವಾಯಿತು ಎಂದು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಶ್ಯಾಮಸುಂದರ್ `ಪ್ರಜಾವಾಣಿ'ಗೆ ತಿಳಿಸಿದರು.

ಶಿಶು ಈಗ ಸದ್ಯಕ್ಕೆ ಬೆಂಗಳೂರಿನ ಚಾಮರಾಜಪೇಟೆ ಶಿಶುವಿಹಾರ ಕೇಂದ್ರದ ಅಧಿಕಾರಿಗಳ ವಶದಲ್ಲಿದೆ. ತಾಯಿ ಮಮತಾ, ಅಜ್ಜಿ ಶಾಂತಮ್ಮ, ಶುಶ್ರೂಷಕಿ ಶಿವಮ್ಮ ಮತ್ತು ಪೊಲೀಸರು ಶಿಶುವನ್ನು ಗುರುತಿಸಿದ್ದಾರೆ.

ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಶಿಶು ಆರೋಗ್ಯವಾಗಿದೆ. ಸರ್ಕಾರದ ನಿಯಮಾವಳಿಗಳ ಪ್ರಕಾರ, ಶಿಶು ಹಿಂದಿರುಗಿಸಲಾಗುವುದು. ಚಿಕ್ಕಬಳ್ಳಾಪುರದ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಶಿಶು ಅಭಿವೃದ್ಧಿ ಕೇಂದ್ರದ ಅಧಿಕಾರಿಗಳ ಮೂಲಕ ಪೋಷಕರು ಶಿಶು ಪಡೆಯಬಹುದು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.