ADVERTISEMENT

ಪತ್ನಿ ಆಸೆ ಈಡೇರಿಸಿದ ಬರಗೂರು

ಮುಖ್ಯಮಂತ್ರಿ ಗ್ರಾಮ ವಿಕಾಸ್ ಯೋಜನೆಗೆ ಮಧುಗಿರಿ ತಾಲ್ಲೂಕಿನ ಸಿದ್ದನಹಳ್ಳಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 22 ಮೇ 2018, 9:19 IST
Last Updated 22 ಮೇ 2018, 9:19 IST

ತುಮಕೂರು: ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರಿಗೆ ಸ್ವಗ್ರಾಮ ಶಿರಾ ತಾಲ್ಲೂಕಿನ ಬರಗೂರಿನ ಮೇಲೆ ಪ್ರೀತಿ ಹೆಚ್ಚು. ಹುಟ್ಟಿದೂರಿನ ಮೇಲಿನ ಅಭಿಮಾನದ ಕಾರಣಕ್ಕೆ ಗ್ರಾಮಕ್ಕೆ ಹಾಸ್ಟೆಲ್, ಆಸ್ಪತ್ರೆ ಕಟ್ಟಡ, ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಸಾಂಸ್ಕೃತಿಕ ಭವನ ನಿರ್ಮಾಣದಂತಹ ಪ್ರಮುಖ ಕೆಲಸಗಳನ್ನು ಮಾಡಿದ್ದಾರೆ.

ಈಗ ಮತ್ತೊಂದು ಹೆಜ್ಜೆ ಇಟ್ಟು ತಮ್ಮ ಪತ್ನಿ ದಿವಂಗತ ರಾಜಲಕ್ಷ್ಮಿ ಅವರು ಹುಟ್ಟೂರು ಮಧುಗಿರಿ ತಾಲ್ಲೂಕಿನ ಸಿದ್ದನಹಳ್ಳಿಯನ್ನು ‘ಮುಖ್ಯಮಂತ್ರಿ ಗ್ರಾಮ ವಿಕಾಸ್ ಯೋಜನೆ’ಗೆ ಆಯ್ಕೆಯಾಗುವಂತೆ ಮಾಡಿದ್ದಾರೆ. ರಾಮಚಂದ್ರಪ್ಪ ಅವರ ಕೋರಿಕೆ ಮೇರೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಿದ್ದನಹಳ್ಳಿಯನ್ನು ಈ ಯೋಜನೆಯಡಿ ಅಭಿವೃದ್ಧಿಗೆ ಆಯ್ಕೆ ಮಾಡಿದೆ.

2017– 18ನೇ ಸಾಲಿನಿಂದ ‘ಮುಖ್ಯಮಂತ್ರಿ ಗ್ರಾಮ ವಿಕಾಸ್ ಯೋಜನೆ’ ಜಾರಿಗೆ ಬಂದಿದ್ದು ಆಯ್ಕೆಯಾದ ಪ್ರತಿ ಗ್ರಾಮಕ್ಕೆ ಗರಿಷ್ಠ ₹ 100 ಕೋಟಿ ಅನುದಾನ ನೀಡಲಾಗುತ್ತದೆ. ಈಗಾಗಲೇ ಸರ್ಕಾರ ಒಂದು ಸಾವಿರ ಗ್ರಾಮಗಳನ್ನು ಆಯ್ಕೆ ಮಾಡಿದೆ. ಸಿದ್ದನಹಳ್ಳಿ ತಾಲ್ಲೂಕು ಕೇಂದ್ರದಿಂದ 8 ಕಿಲೋಮೀಟರ್ ದೂರದಲ್ಲಿ ಇದೆ. ಗ್ರಾಮದಲ್ಲಿ ಬಡವರ ಸಂಖ್ಯೆ ಹೆಚ್ಚಿದೆ.

ADVERTISEMENT

‘ಪ್ರೊ.ಬರಗೂರು ರಾಮಚಂದ್ರಪ್ಪ ಅವರು ಸೂಚಿಸಿದ ಸಿದ್ದನಹಳ್ಳಿ ಗ್ರಾಮವನ್ನು ‌ಮುಖ್ಯಮಂತ್ರಿ ಗ್ರಾಮ ವಿಕಾಸ್ ಯೋಜನೆಯಡಿ ಅಭಿವೃದ್ಧಿಪಡಿಸಲು ಸರ್ಕಾರ ತೀರ್ಮಾನಿಸಿದೆ. ಅವರು ಈ ಗ್ರಾಮವನ್ನು ಆಯ್ಕೆ ಮಾಡಲು
ಕೋರಿದ ಗಣ್ಯರಾಗಿದ್ದಾರೆ’ ಎಂದು ಪಂಚಾಯತ್ ರಾಜ್ ಇಲಾಖೆ ಆದೇಶದಲ್ಲಿ ತಿಳಿಸಿದೆ.

ಮತ್ತಷ್ಟು ಸೌಲಭ್ಯಕ್ಕೆ ಪ್ರಯತ್ನ

ನನ್ನ ಹುಟ್ಟೂರಿಗೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿದ್ದು ಪತ್ನಿ ರಾಜಲಕ್ಷ್ಮಿಗೂ ತಿಳಿದಿತ್ತು. ಆಕೆ ಅನಾರೋಗ್ಯದಲ್ಲಿ ಇದ್ದಾಗ ‘ನಿಮ್ಮ ಹುಟ್ಟೂರಿಗೆ ಅನೇಕ ಅನುಕೂಲ ಮಾಡಿದ್ದೀರಿ. ನನ್ನ ಹುಟ್ಟೂರಿಗೂ ಏನಾದರೂ ಮಾಡಿ’ ಎಂದಳು. ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ಮಾದರಿ ಗ್ರಾಮವನ್ನಾಗಿ ಮಾಡಲು ಕೋರಿದ್ದೆ ಎಂದು ನೆನಪಿಸಿಕೊಳ್ಳುವರು ಬರಗೂರು ರಾಮಚಂದ್ರಪ್ಪ.

‘ಮಾರ್ಚ್‌ನಲ್ಲಿ ಸರ್ಕಾರ ನನ್ನ ಮನವಿ ಪುರಸ್ಕರಿಸಿದೆ. ₹ 1 ಕೋಟಿ ಸಹ ಬಿಡುಗಡೆ ಮಾಡಿದೆ. ನನ್ನ ಪತ್ನಿ ಬದುಕಿಲ್ಲ. ಆದರೆ ಆಕೆಯ ಸಣ್ಣ ಆಸೆ ಈಡೇರಿಸಿದ್ದೇನೆ ಎನ್ನುವ ಸಮಾಧಾನ ಇದೆ. ಸಿದ್ದನಹಳ್ಳಿ ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ. ಅಲ್ಲಿನ ಶಾಸಕ ಡಾ.ಜಿ.ಪರಮೇಶ್ವರ ಅವರ ಜತೆ ಮಾತನಾಡಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಶ್ರಮಿಸುವೆ. ನನ್ನ ಪ್ರಯತ್ನ ಪತ್ನಿಗೆ ಅರ್ಪಿಸುವ ಕರ್ತವ್ಯವೂ ಹೌದು. ಹಳ್ಳಿ ಜನರ ಸೇವೆಯೂ ಹೌದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.