ತಿಪಟೂರು: ಪತ್ರಿಕೆಗಳು ಪ್ರಭಾವಕ್ಕೆ ಒಳಗಾಗದೆ ಸಮಾಜಮುಖಿಯಾಗಿ ಸಾಗಬೇಕು ಎಂದು ಪ್ರಜಾವಾಣಿ ಸುದ್ದಿ ಸಂಪಾದಕ ಗಂಗಾಧರ ಮೊದಲಿಯಾರ್ ಸಲಹೆ ನೀಡಿದರು.
ನಗರದಲ್ಲಿ ಈಚೆಗೆ ನಡೆದ ಬಯಲು ಸೀಮೆ ಸಾಂಸ್ಕೃತಿಕ ಸಂಘದ 9ನೇ ವಾರ್ಷಿಕೋತ್ಸವ, ವಿಶೇಷ ಸಂಚಿಕೆ ಬಿಡುಗಡೆ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಪತ್ರಿಕೆ ಅಥವಾ ಪತ್ರಕರ್ತ ಪ್ರತಿಷ್ಠೆ ಮತ್ತು ಪ್ರಲೋಭನೆ ಬೆಳೆಸಿಕೊಂಡರೆ ಸಮಾಜಕ್ಕೆ ಕಂಟಕವಾಗುತ್ತದೆ. ಉತ್ತಮ ಆಚಾರ, ವಿಚಾರ, ನಡೆ, ನುಡಿಗಳು ಮಾತ್ರ ಸಮಾಜವನ್ನು ಸ್ವಾಸ್ಥ್ಯವಾಗಿ ಇಡುತ್ತವೆ. ಸಾಂಸ್ಕೃತಿಕ ಶ್ರೀಮಂತಿಕೆಯೇ ಸಮಾಜದ ಜೀವಂತಿಕೆ ಎಂದರು.
ಭಾರತೀಯ ಪತ್ರಿಕಾ ಅಕಾಡೆಮಿ ರಿಜಿಸ್ಟ್ರಾರ್ ಚೆನ್ನೈ ನ ಡಾ. ವೈ.ಸಿ.ಪಾಟೀಲ್ ಮಾತನಾಡಿ, ಶಕ್ತಿಯುತ ಅಸ್ತ್ರವಾದ ಭಾಷೆ ಮತ್ತು ಬರವಣಿಗೆಯ ದುರ್ಬಳಕೆ ಸಲ್ಲ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಇಂದ್ರಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಗಂಗಾಧರ್ ಮೊದಲಿಯಾರ್, ಬಿ.ವಿ. ಮಲ್ಲಿಕಾರ್ಜುನಯ್ಯ, ವೈ.ಸಿ. ಪಾಟೀಲ್, ಡಾ. ಲಕ್ಷ್ಮಣದಾಸ್, ಮಿಮಿಕ್ರಿ ದಯಾನಂದ್, ಡಾ. ವೆಂಕಟೇಶಯ್ಯ, ಜಿ. ಕುಮಾರಸ್ವಾಮಿ, ಟಿ.ಎಚ್.ಹೇಮಲತಾ ಅವರನ್ನು ಶಾಸಕ ಬಿ.ಸಿ. ನಾಗೇಶ್ ಸನ್ಮಾನಿಸಿದರು.
ತಹಶೀಲ್ದಾರ್ ವಿಜಯಕುಮಾರ್, ಸಿಪಿಐ ಎ.ಕೆ. ತಿಮ್ಮಯ್ಯ, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಕೆ.ಎಂ. ರಾಜಣ್ಣ, ಸಂಘದ ಅಧ್ಯಕ್ಷ ಎಚ್.ಡಿ. ನಾಗರಾಜ್, ಉಪಾಧ್ಯಕ್ಷ ಗೌರಮ್ಮ ಮತ್ತಿತರರು ಇದ್ದರು. ಮಿಮಿಕ್ರಿ ದಯಾನಂದ ಹಾಸ್ಯ, ಮಧುಸೂದನ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.ಸಂಘದ ಕಾರ್ಯದರ್ಶಿ ಎನ್. ಭಾನುಪ್ರಶಾಂತ್ ಪ್ರಾಸ್ತಾವಿಕ ಮಾತನಾಡಿದರು. ರೇಣುಕಯ್ಯ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.