ADVERTISEMENT

ಪರಿಸರ ಸಂರಕ್ಷಣೆಗೆ ಸಂಶೋಧನೆ: ಸದಾಶಿವಯ್ಯ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 8:30 IST
Last Updated 17 ಫೆಬ್ರುವರಿ 2011, 8:30 IST

ತುಮಕೂರು:  ಪರಿಸರ ಪ್ರಜ್ಞೆಯ ಕೊರತೆ, ಜಾಗೃತಿ ಇಲ್ಲದೆ ದಿನದಿಂದ ದಿನಕ್ಕೆ ಪರಿಸರ ಹಾಳಾಗುತ್ತಿದೆ. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳು, ಶಿಕ್ಷಕರು ಸೇರಿ ಸಂಶೋಧನೆ ಕೈಗೊಂಡಾಗ ಮಾತ್ರ ಪರಿಸರ ಕಾಪಾಡಲು ಸಾಧ್ಯ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಎ.ಎಸ್.ಸದಾಶಿವಯ್ಯ ತಿಳಿಸಿದರು.

ಸಿದ್ದಗಂಗಾ ಶಿಕ್ಷಣ ಸಂಸ್ಥೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ನಗರದ ಸಿದ್ದಗಂಗಾ ಪದವಿ ಕಾಲೇಜಿನಲ್ಲಿ ಬುಧವಾರ ‘ಶಿಕ್ಷಣ ಸಂಸ್ಥೆಗಳಲ್ಲಿ ಹಸಿರು ಆವರಣ ನಿರ್ಮಾಣ’ ಕುರಿತು ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.

ತುಮಕೂರಿನಲ್ಲಿಯೇ ಹಲವು ಕೆರೆಗಳು ವಿನಾಶದಂಚಿನಲ್ಲಿವೆ. ಇವುಗಳ ಜೀರ್ಣೊದ್ಧಾರಕ್ಕೆ ಪರಿಸರವಾದಿಗಳು ಹಾಗೂ ವಿದ್ಯಾರ್ಥಿಗಳು ಚಿಂತಿಸಿ, ಪರಿಹಾರ ಕಂಡುಹಿಡಿಯಬೇಕು ಎಂದು ಹೇಳಿದರು.ಕಾಲೇಜು ಆವರಣದಲ್ಲಿ ಗಿಡ-ಮರಗಳನ್ನು ಬೆಳೆಸುವುದರ ಮೂಲಕ ಪರಿಸರ ಕಾಪಾಡುವ ಶಿಕ್ಷಣ ಸಂಸ್ಥೆಗಳಿಗೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು.

ಪ್ರತಿ ವರ್ಷ ಪರಿಸರ ದಿನಾಚರಣೆ ಸಂದರ್ಭದಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಜಿಲ್ಲಾಮಟ್ಟದ ಪ್ರಶಸ್ತಿ ನೀಡಲು ಚಿಂತಿಸಲಾಗಿದೆ. ಈ ನಿಟ್ಟಿನಲ್ಲಿ ಈಗಿನಿಂದಲೇ ಶಿಕ್ಷಣ ಸಂಸ್ಥೆಗಳು ತಯಾರಿ ನಡೆಸುವಂತೆ ಸಲಹೆ ನೀಡಿದ ಅವರು, ನೈಸರ್ಗಿಕ ಸಂಪನ್ಮೂಲಗಳಾದ ಅರಣ್ಯ, ನೀರು, ಗಾಳಿಯಲ್ಲಿ ಕಲ್ಮಶ ಸೇರಿದೆ. ಮುಂದಿನ ದಿನಗಳಲ್ಲಿ ಭವಿಷ್ಯ ಅಪಾಯದಂಚಿನಲ್ಲಿದೆ ಎಂದು ವಿಷಾದಿಸಿದರು.

ಪ್ರತಿಯೊಂದು ಶಿಕ್ಷಣ ಸಂಸ್ಥೆಗಳು ಹಸಿರು ಆವರಣದ ನಿರ್ಮಾಣದ ಕಡೆಗೆ ಗಮನ ಕೊಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.‘ಶಿಕ್ಷಣ ಸಂಸ್ಥೆಗಳಲ್ಲಿ ಹಸಿರು ಆವರಣ ನಿರ್ಮಾಣದ’ ಕಲ್ಪನೆ ಕುರಿತು ಮಾತನಾಡಿದ ಕಾಲೇಜು ಪ್ರಾಂಶುಪಾಲ ಡಾ.ಎಚ್.ಎಸ್.ನಿರಂಜನಾರಾಧ್ಯ, ಜಾಗತಿಕ ತಾಪಮಾನದಿಂದ ದ್ವೀಪಗಳು ಮುಳುಗುತ್ತಿವೆ, ಹಿಮಗಡ್ಡೆಗಳು ಕರಗುತ್ತಿವೆ. ಈ ನಿಟ್ಟಿನಲ್ಲಿ ಕಾಡು ಬೆಳೆಸಬೇಕಾದ ಹೊಣೆ ಪ್ರತಿಯೊಬ್ಬರದ್ದಾಗಿದೆ ಎಂದರು.

ಶಾಲಾ ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಬೆಳೆಸಿದರೆ ಭವಿಷ್ಯದಲ್ಲಿ ಹಲವು ಉಪಯೋಗಗಳಿವೆ. ಈ ದೆಸೆಯಲ್ಲಿ ಶಿಕ್ಷಕರು ಶ್ರಮಿಸಬೇಕಾಗಿದೆ. ಪ್ಲಾಸ್ಟಿಕ್ ಬಳಕೆ ನಿಲ್ಲಬೇಕಾಗಿದೆ. ಪರಿಸರಕ್ಕೆ ಪೂರಕವಾದ ವಸ್ತುಗಳ ಉಪಯೋಗ ನಮ್ಮೆಲ್ಲರ ಜವಾಬ್ದಾರಿ ಎಂದು ಕಿವಿಮಾತು ಹೇಳಿದರು.

ಚೆನ್ನೈ ಸಿಪಿಆರ್ ಫೌಂಡೇಶನ್ ಅಧಿಕಾರಿ ಯು.ಟಿ.ಅರಸ್ ಹಸಿರು ಆವರಣದ ಮಾದರಿಗಳ ಕುರಿತು ಮಾತನಾಡಿದರು. ಜಲ ನಿರ್ವಹಣೆ, ಮಳೆ ಕೊಯ್ಲು ಕುರಿತು ಶಿವಕುಮಾರ, ಹಸಿರು ಆವರಣದ ಬಗ್ಗೆ ಪಾಲಿಸಬೇಕಾದ ಕ್ರಮಗಳ ಕುರಿತು ಡಾ.ಮುದಕವಿ ಮಾತನಾಡಿದರು. ಎಸ್‌ಐಟಿ ಸಂಸ್ಥೆ ನಿರ್ದೇಶಕ ಡಾ.ಎಂ.ಎನ್.ಚನ್ನಬಸಪ್ಪ ಮಾತನಾಡಿ ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.