ADVERTISEMENT

ಪರಿಸರ ಹಾನಿ: ಗಣಿ ತಂಡ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 9:45 IST
Last Updated 10 ಅಕ್ಟೋಬರ್ 2011, 9:45 IST

ತುಮಕೂರು: ಗಣಿಗಾರಿಕೆಯಿಂದ ಪರಿಸರದ ಮೇಲೆ ಆಗಿರುವ ಹಾನಿಯ ಅಂದಾಜು ಮಾಡಲು ಹಾಗೂ ಪರಿಹಾರ ಸೂಚಿಸಲು ಸುಪ್ರೀಂಕೋರ್ಟ್ ನೇಮಿಸಿರುವ 16 ಜನರ ತಜ್ಞರ ತಂಡ ಭಾನುವಾರ ಗಣಿಗಾರಿಕೆ ನಡೆದಿರುವ ಚಿಕ್ಕನಾಯಕನಹಳ್ಳಿ, ತಿಪಟೂರು ಮತ್ತು ಗುಬ್ಬಿ ತಾಲ್ಲೂಕಿನ ವಿವಿಧ ಭಾಗಗಳಿಗೆ ಭೇಟಿನೀಡಿ ಅಧ್ಯಯನ ನಡೆಸಿತು.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 8, ತಿಪಟೂರು ತಾಲ್ಲೂಕಿನಲ್ಲಿ 2 ಗಣಿಗಳನ್ನು ಪರಿಶೀಲಿಸಿದ ತಂಡ ಗುಬ್ಬಿ ತಾಲ್ಲೂಕಿನ ಗಣಿಗಳನ್ನು ಪರಿಶೀಲಿಸಿ ನಗರಕ್ಕೆ ಹಿಂದಿರುಗಿತು.

ಗಣಿಗಾರಿಕೆ ನಡೆದ ಪ್ರದೇಶದ ಪರಿಸರದ ಪುನರುಜ್ಜೀವನಕ್ಕೆ ಹಲವು ಕ್ರಮಗಳನ್ನು ತಂಡ ಸೂಚಿಸಲಿದೆ. ಈ ಕುರಿತು ಜಿಲ್ಲಾ ಆಡಳಿತದಿಂದಲೂ ಪೂರಕ ಪ್ರಸ್ತಾವನೆಯನ್ನು ಕೋರಿದೆ. ಸೋಮವಾರ ಮುಂಜಾನೆ 10.30ಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಭೆಯನ್ನು ತಂಡ ನಡೆಸಲಿದೆ.

`ಗಣಿಗಾರಿಕೆಯಿಂದ ಸ್ಥಳೀಯ ಪರಿಸರದ ಮೇಲೆ ಆಗಿರುವ ದೌರ್ಜನ್ಯ, ಹಿಂದೆ ಈ ನೆಲ ಇದ್ದ ರೀತಿ, ಗಣಿಗಾರಿಕೆಯ ನಂತರ ಆಗಿರುವ ಪರಿವರ್ತನೆಯ ಬಗ್ಗೆ ತನಿಖಾ ತಂಡ ಹೆಚ್ಚು ಗಮನಿಸುತ್ತಿದೆ. ಅನೇಕ ಸ್ಥಳಗಳಲ್ಲಿ ಸ್ಥಳೀಯ ಅಧಿಕಾರಿಗಳಿಗೆ ಹುಲ್ಲು ಹಾಸು ಹಾಕಿಸುವಂತೆ, ಹುಲ್ಲು ಬೀಜ ಬಿತ್ತುವಂತೆ, ಗಿಡಗಳನ್ನು ನೆಡುವಂತೆ ಸೂಚಿಸಿತು.

ಸಾಕಷ್ಟು ಪೂರ್ವ ಸಿದ್ಧತೆಯೊಂದಿಗೆ ತಂಡ ಆಗಮಿಸಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ, ಪ್ರಶ್ನಿಸಿ ಮಾಹಿತಿ ಪಡೆದುಕೊಳ್ಳುವುದಕ್ಕಿಂತ, ಸೂಕ್ಷ್ಮ ಅವಲೋಕನಕ್ಕೆ ಹೆಚ್ಚು ಒತ್ತು ನೀಡಿದೆ~ ಎಂದು ಗಣಿ ತಂಡದ ಜೊತೆಗಿದ್ದ ಅಧಿಕಾರಿಯೊಬ್ಬರು ತಿಳಿಸಿದರು.

ಡೆಹ್ರಾಡೂನ್‌ನ ಭಾರತ ಅರಣ್ಯ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ವಿ.ಕೆ.ಬಹುಗುಣ ನೇತೃತ್ವದ ತಂಡದಲ್ಲಿ ಪರಿಸರ ಶಾಸ್ತ್ರ, ಮರಮುಟ್ಟು, ಸಸ್ಯಶಾಸ್ತ್ರದಲ್ಲಿ ಪರಿಣಿತರಾದ ಎಸ್.ಸಿ.ಜೋಶಿ, ಡಾ.ಧರ್ಮೇಂದ್ರ ವರ್ಮಾ, ಡಾ.ಸಿ.ವಿ.ಸಿ.ರಾವ್, ಡಾ.ರಾಮ್‌ಟೇಕೆ, ಅಸೀಮ್ ಶ್ರೀವಾಸ್ತವ, ಡಾ.ಎಂ.ಎಲ್.ಶ್ರೀವಾಸ್ತವ, ಸುಧೀರ್‌ಕುಮಾರ್, ಡಾ.ಸಿ.ಎಸ್.ಝಾ, ಡಾ.ಎನ್.ರಾಮರಾವ್, ಡಾ.ಎಚ್.ಬಿ.ವಸಿಷ್ಟ, ರಿಶಾ ದ್ವಿವೇದಿ, ಆರ್.ಎ.ಸೋಮಶೇಖರ್, ಬಿ.ಕೆ.ಸಿನ್ಹಾ, ರಾಮ್‌ಮೋಹನ್, ಆರ್.ಎನ್.ಸೆಲ್ವಂ ಇದ್ದಾರೆ.

ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜಂಟಿ ನಿರ್ದೇಶಕ ಸುರೇಶ್‌ಬಾಬು, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀರಾಮರೆಡ್ಡಿ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಪ್ರಸಾದ್, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಮಧುಸೂಧನ್ ತಂಡಕ್ಕೆ ಅಗತ್ಯ ಮಾಹಿತಿ ನೀಡಿದರು.

ಭಾನುವಾರ ಮುಂಜಾನೆ 9.30ಕ್ಕೆ ತನಿಖಾ ತಂಡ ಖಾಸಗಿ ಹೊಟೆಲ್‌ನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆಗೆ ಸಭೆ ನಡೆಸಿತು. ಸಭೆಯ ನಂತರ ಜಿಲ್ಲಾಡಳಿತದಿಂದ ಗಣಿಗಾರಿಕೆ ಪ್ರದೇಶದ ಸ್ಥಿತಿಗತಿಯನ್ನು ಬಿಂಬಿಸುವ ಪವರ್ ಪಾಯಿಂಟ್ ಪ್ರೆಸೆಂಟೇಷನ್ ನೀಡಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುರೇಶ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಚನ್ನಮಲ್ಲಯ್ಯ, ಭೂ ಮಾಪನ ಇಲಾಖೆಯ ರೆಡ್ಡಿ, ತಹಶೀಲ್ದಾರ್ ಆರ್.ಉಮೇಶ್‌ಚಂದ್ರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.