ತುಮಕೂರು: ಕಾಂಗ್ರೆಸ್, ಬಿಜೆಪಿ ಪಕ್ಷಗಳಿಗೆ ಯುವಜನರ ಸಮಸ್ಯೆಗಳ ಬಗ್ಗೆ ಕಾಳಜಿಯಿಲ್ಲ ಎಂದು ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಿ.ರಾಜಶೇಖರಮೂರ್ತಿ ಆರೋಪಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ‘ನಾವೆಲ್ಲಾ ಚೆನ್ನಾಗಿರಲು, ಮೂವತ್ತು ನಿಮಿಷ ಮೀಸಲಿಡಿ ಪ್ಲೀಸ್’ ಪುಸ್ತಕ ಬಿಡುಗೊಡೆಗೊಳಿಸಿ ಮಾತನಾಡಿ, ಭಾರತ ಗೆಲ್ಲಿಸಿ, ಕೈ ಬಲಗೊಳಿಸಿ ಎನ್ನುತ್ತಿರುವ ಪಕ್ಷಗಳು ನಿರುದ್ಯೋಗಕ್ಕೆ ಕಾರಣವಾಗಿರುವ ಹೊರಗುತ್ತಿಗೆ ಬಗ್ಗೆ ಮಾತನಾಡುವುದಿಲ್ಲವೇಕೆ ಎಂದು ಪ್ರಶ್ನಿಸಿದರು.
ಗುಜರಾತ್‌ನಲ್ಲಿ ಅಭಿವೃದ್ಧಿ ಆಗಿರುವುದು ಕಾರ್ಪೋರೇಟ್ ಸಂಸ್ಕೃತಿ. ಶೇ 48ರಷ್ಟು ದಲಿತ, ಹಿಂದುಳಿದ ವರ್ಗದ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಶೇ 42ರಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂಬುದು ಆರ್‌ಟಿಐ ಮಾಹಿತಿಯಿಂದ ಬಹಿರಂಗಗೊಂಡಿದೆ. ಕಾಂಗ್ರೆಸ್ ಪಕ್ಷ ಕಳೆದ ಹತ್ತು ವರ್ಷಗಳಲ್ಲಿ ಮಾಡಿರುವ ಹಗರಣಗಳ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸಲು ಡಿವೈಎಫ್‌ಐ ಯುವ ಜನಾಂದೋಲನವನ್ನು ರಾಜ್ಯದಲ್ಲಿ ಆರಂಭಿಸಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಉದ್ಯೋಗಾವಕಾಶ ಸೃಷ್ಟಿಯಾಗಬೇಕಿದ್ದರೆ, ಪರಮಶಿವಯ್ಯ ವರದಿ ಜಾರಿಯಾಗಬೇಕು. ಕೃಷಿ ಕೈಗಾರಿಕೆಗಳು, ಉತ್ಪಾದನಾ ವಲಯಕ್ಕೆ ಮೀಸಲಾದ ಕೈಗಾರಿಕೆಗಳು ಆರಂಭವಾಗಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಿವೈಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ರಾಘವೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಆರ್.ನಾಗರಾಜು, ಎಂ.ಜಿ.ಮಂಜುನಾಥ್ ಇತರರಿದ್ದರು.
ಚುನಾವಣಾ ಕಣಕ್ಕೆ ಸಿಪಿಐ
ತುಮಕೂರು: ಲೋಕಸಭೆ ಚುನಾವಣೆಯಲ್ಲಿ ಸಿಪಿಐ ಪಕ್ಷದಿಂದ ವಿ.ಚಿನ್ನಪ್ಪ ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ಮುಖಂಡ ಶಿವಣ್ಣ ತಿಳಿಸಿದರು.
ಚಿನ್ನಪ್ಪ ಮಾ. 25ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಸಿಪಿಐ ಪಕ್ಷ ಸ್ಪರ್ಧಿಸದ ಕಡೆ ಜೆಡಿಯು, ಆಮ್ ಆದ್ಮಿ ಪಕ್ಷಕ್ಕೆ ಬೆಂಬಲ ನೀಡಲಿದೆ ಎಂದರು.
ಸಿಪಿಐ ನಿಯೋಜಿತ ಅಭ್ಯರ್ಥಿ ವಿ.ಚಿನ್ನಪ್ಪ ಮಾತನಾಡಿ ಪರಮಶಿವಯ್ಯ ವರದಿ ಜಾರಿ, ತೆಂಗು ಬೆಳೆಗಾರರ ಸಮಸ್ಯೆ ಬಗ್ಗೆ ಹೋರಾಟ ನಡೆಸುವುದಾಗಿ ತಿಳಿಸಿದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಂಬೇಗೌಡ, ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ, ಗೀರೀಶ್, ವಾಸುದೇವಾ ಕುಮಾರ್ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.