ADVERTISEMENT

ಪುಸ್ತಕವೇನೋ ಸೆಕೆಂಡ್ ಹ್ಯಾಂಡ್, ಅದರೊಳಗಿನ ಜ್ಞಾನ..

ಮಂಜುನಾಥ ಆರ್.ಗೌಡರ
Published 29 ಸೆಪ್ಟೆಂಬರ್ 2014, 9:41 IST
Last Updated 29 ಸೆಪ್ಟೆಂಬರ್ 2014, 9:41 IST

ತುಮಕೂರು: ಮಳೆ ಬಿದ್ದಾಗ ಮಣ್ಣಿನ ಘಮ ಮೂಗಿಗೆ ಅಡರುವಂತೆ ಹಳೆ ಪುಸ್ತಕಗಳ ವಾಸನೆ ಮಸ್ತಕಕ್ಕೆ ತಾಗುತ್ತಿತ್ತು. ಓದುವ ಆಯ್ಕೆ ಇಲ್ಲದವರಿಗೆ ಮಾರ್ಗದರ್ಶಕನಂತೆಯೂ, ಅದೇ ರೀತಿ ಇಂಥದೇ ಪುಸ್ತಕ ಬೇಕು ಎನ್ನುವವರಿಗೆ ‘ಅಲ್ಲಾವುದ್ದೀನ್‌ನ ಅದ್ಭುತ ದೀಪ’ದಂತೆ ಗೋಣಿಚೀಲವೊಂದರಿಂದ ಪುಸ್ತಕ ಹೊರತೆಗೆದು ಕೊಡುತ್ತಿದ್ದ ಆತ ತುಂಬ ಓದಿಕೊಂಡಂತಿರಲಿಲ್ಲ. ಆದರೆ ಅಲ್ಲಿಗೆ ಬರುವವರ ಆಸಕ್ತಿ–ಇಷ್ಟಗಳಿಗೆ ಸ್ಪಂದಿಸುವ ಸೂಕ್ಷ್ಮ ಸಂವೇದನೆ ಎದ್ದು­ಕಾಣುತ್ತಿತ್ತು.

ನಗರದ ಎಂ.ಜಿ.ರಸ್ತೆ ಹಾಗೂ ಅದರ ಪಕ್ಕದ ರಸ್ತೆ, ಚಿಕ್ಕಪೇಟೆ ಸುತ್ತ–ಮುತ್ತ, ಕೆ.ಆರ್.­ಬಡಾ­ವಣೆ, ಬನಶಂಕರಿ, ಸಾರಿಗೆ ಬಸ್‌ ನಿಲ್ದಾಣದ ಪಾದಚಾರಿ ಮಾರ್ಗ, ಸೋಮೇಶ್ವರ­ಪುರಂ...­ಹೀಗೆ ಹಲವೆಡೆ ಇಂಥ ‘ಸೆಕೆಂಡ್ ಹ್ಯಾಂಡ್’ ಪುಸ್ತಕ ಮಾರಾಟ ಇತ್ತೀಚೆಗೆ ಹೆಚ್ಚು ಕಂಡು­ಬರುತ್ತಿದೆ.

ಕಾಯಂ ಗ್ರಾಹಕರು, ಹೊಟ್ಟೆ ತಣ್ಣಗಿರು­ವಷ್ಟು ಆದಾಯ. ಯುವಕರು, ಮಹಿಳೆಯರು, ಹಿರಿಯರು ಕೂಡ ಹಳೆ ಪುಸ್ತಕ ಮಾರಾಟದಲ್ಲಿ ತೊಡಗಿದ್ದಾರೆ. ಹಳೆ ಪುಸ್ತಕ ಮಾರಾಟ ಮಳಿಗೆಯ ಲಕ್ಷ್ಮೀ ಅವರಿಗೆ ಮಗ ಕೂಡಾ ಕೈಜೋಡಿಸಿದ್ದಾನೆ.

‘ಸುಮಾರು ೧೮ ವರ್ಷ­ದಿಂದ ವೃತ್ತಿಯಲ್ಲಿ ತೊಡಗಿಸಿ­ಕೊಂಡಿ­ದ್ದೇವೆ. ಹೊಟ್ಟೆ, ಬಟ್ಟೆಗೆ ಕಡಿಮೆ ಆಗಿಲ್ಲ. ಐದು ವರ್ಷದಿಂದ ಸಾರಿಗೆ ಬಸ್‌ ನಿಲ್ದಾಣದ ಪಾದಚಾರಿ ಮಾರ್ಗವೇ ನಮಗೆ ಅನ್ನ ನೀಡು­ತ್ತಿದೆ’ ಎಂದು ಲಕ್ಷ್ಮಿ ಭಾವುಕರಾಗಿ ಹೇಳಿದರು.

ಇಲ್ಲೂ ವರ್ಗೀಕರಣ ಇದೆ. ಪಠ್ಯಪುಸ್ತಕ­ಗಳನ್ನು ಮಾರುವವರು, ಇಂಗ್ಲಿಷ್ ಕ್ಲಾಸಿಕ್, ಚಂದಮಾಮ, ಬಾಲಮಿತ್ರ ವಗೈರೆ ಮಾರಾಟಕ್ಕಿಟ್ಟಿವರು, ಹಳೆ ಪಂಚಾಂಗ, ಸ್ಫಟಿಕ ವ್ರತರತ್ನಮಾಲಾ, ಜ್ಯೋತಿಷ ಕಲಿಕೆ ಪುಸ್ತಕಗಳನ್ನು ಜೋಡಿಸಿಟ್ಟವರು, ನ್ಯಾಷನಲ್ ಜಿಯಾಗ್ರಾಫಿಕ್, ವಿಸ್ಡಮ್‌, ರೀಡರ್ಸ್‌ ಡೈಜೆಸ್ಟ್ ಹೀಗೆ ಹಲ ಬಗೆಯ ಗ್ರಾಹಕರ ಬೇಡಿಕೆಗೆ ಪುಸ್ತಕ ಪೂರೈಕೆ ಮಾಡುತ್ತಾರೆ.

ಸೆಕೆಂಡ್ ಹ್ಯಾಂಡ್ ಪುಸ್ತಕ ಹೊಂದಿಸಿಕೊಳ್ಳು­ವುದೇನೂ ಸಲೀಸಲ್ಲ. ನಗರ, ಕೆಲವೊಮ್ಮೆ ಬೆಂಗಳೂರಿನ ಹಳೆ ಪತ್ರಿಕೆ– ಪುಸ್ತಕ ಖರೀದಿದಾರರಿಂದಲೂ ಆಯ್ಕೆ ನಡೆಯುತ್ತದೆ. ಅನುಭವಸ್ಥ ‘ಸೆಕೆಂಡ್ ಹ್ಯಾಂಡ್ ಪುಸ್ತಕ ಮಾರಾಟಗಾರ’ನಿಗೆ ಯಾವ ಲೇಖಕರ ‘ಬೆಲೆ’ ಎಷ್ಟು ಎಂಬುದು ಓದುಗರಿಗಿಂತಲೂ ಹೆಚ್ಚು ತಿಳಿದಿರುತ್ತದೆ. ‘ಬೆಸ್ಟ್ ಸೆಲ್ಲರ್’, ನಿಷೇಧ ಹೇರಿದ ಪುಸ್ತಕಗಳು, ಮಾರುಕಟ್ಟೆಯಲ್ಲಿ ಸಿಗದ ಅದೆಷ್ಟೋ ಪುಸ್ತಕಗಳು ಇವರ ಬಳಿ ದೊರೆಯುತ್ತವೆ.

‘ಬೆಂಗಳೂರಿನಲ್ಲಿ ದೊಡ್ಡ ಅಂಗಡಿಗಳಲ್ಲೇ ಸೆಕೆಂಡ್ ಹ್ಯಾಂಡ್ ಪುಸ್ತಕಗಳನ್ನು ಮಾರು­ತ್ತಾರೆ. ಜತೆಗೆ ಅಲ್ಲಿನ ಕೆಲವು ರಸ್ತೆಗಳಲ್ಲಿ ಹಳೇ ಪುಸ್ತಕಗಳು ಸಿಗುತ್ತವೆ ಎಂಬುದು ಜಾಹೀರಾ­ಗಿದೆ. ಆದರೆ ಇಲ್ಲಿ ಆ ಮಟ್ಟದ ವ್ಯವಹಾರ ಇಲ್ಲ. ವಿದ್ಯಾರ್ಥಿಗಳು ಅದರಲ್ಲೂ ವಿಜ್ಞಾನ, ಎಂಜಿನಿಯರಿಂಗ್, ವೈದ್ಯಕೀಯ, ಚಾರ್ಟರ್ಡ್ ಅಕೌಂಟೆಂಟ್, ವಕೀಲಿಕೆ ಕಲಿಯುವವರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಕೆಲವು ಸಲ ಅವರು ಕೇಳಿದ ಪುಸ್ತಕ ಸಿಗೋದಿಲ್ಲ. ಅಂಥ ಸಮಯದಲ್ಲಿ ಒಂದು ವಾರ ಸಮಯ ಕೇಳಿ, ಎಲ್ಲಾದರೂ ಹೊಂದಿಸುತ್ತೇನೆ. ಇಲ್ಲದಿದ್ದರೆ ಬೇರೆಲ್ಲಾದರೂ ಪ್ರಯತ್ನಿಸಿ ಎನ್ನುತ್ತೇನೆ’ ಎಂದು ಹೇಳಿದರು ರಾಜು.

‘ಇತ್ತೀಚೆಗೆ ಇ–ಪುಸ್ತಕಗಳ ಮಾರಾಟ ನಿಧಾನಕ್ಕೆ ಹೆಚ್ಚುತ್ತಿದೆ. ಅದರ ಬೆಲೆ ಮಾಮೂಲು ಪುಸ್ತಕದ ಅರ್ಧದಷ್ಟಿರುತ್ತದೆ. 5 ಡಿವೈಸ್‌ಗೆ ಅದನ್ನು ಹಾಕಿಕೊಳ್ಳಬಹುದು. ಒಂದು ರೀತಿಯಲ್ಲಿ 5 ಜನ ಓದಬಹುದು. ಮೊಬೈಲ್, ಟ್ಯಾಬ್ಲೆಟ್ ಯಾವುದರಲ್ಲಾದರೂ ಹಾಕಿಕೊಂಡರೆ ಎಲ್ಲಿಗೆ ಹೋದರೂ ತೆಗೆದುಕೊಂಡು ಹೋಗಬಹುದು. ಮುಂಚೆ ಸೆಕೆಂಡ್ ಹ್ಯಾಂಡ್ ಪುಸ್ತಕಗಳನ್ನು ಹುಡುಕಿ­ಕೊಂಡು ಹೋಗ್ತಿದ್ದೆ. ಈಗ ಅದು ಕಡಿಮೆಯಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.