ADVERTISEMENT

ಪೌರಕಾರ್ಮಿಕರ ಕಾಯಂ: ಅವ್ಯವಹಾರ ಆರೋಪ

ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಕೆ; ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಮೇ 2018, 9:47 IST
Last Updated 29 ಮೇ 2018, 9:47 IST

ತುಮಕೂರು: ಪೌರಕಾರ್ಮಿಕರನ್ನು ಕಾಯಂ ಮಾಡುವ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಸೋಮವಾರ ಪೌರಕಾರ್ಮಿಕರು ನಗರದ ಟೌನ್‌ಹಾಲ್ ವೃತ್ತದಲ್ಲಿ ಪ್ರತಿಭಟಿಸಿದರು. ಅಶೋಕ ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿದರು.

ಸುಮಾರು 20 ವರ್ಷಗಳಿಂದ ಪೌರಕಾರ್ಮಿಕರಾಗಿ ಕೆಲವರು ದುಡಿಯುತ್ತಿದ್ದಾರೆ. ಆದರೆ ಅವರ ಈ ಹಿಂದಿನ ಸೇವಾ ಅವಧಿಯನ್ನು ಪರಿಗಣನೆಗೆ ತೆಗೆದುಕೊಳ್ಳದೆ 2009ರಿಂದ ಮುಂದಿನ ಅವಧಿಯ ಸೇವೆಯನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗಿದೆ. ಇದರಿಂದ ಕಾರ್ಮಿಕರು ಸೌಲಭ್ಯಗಳನ್ನು ಪಡೆಯಲು ಹಿನ್ನಡೆಯಾಗುತ್ತದೆ ಎಂದು ಪ್ರತಿಭಟನಾಕಾರರು ದೂರಿದರು.

ಹಿರಿಯ ಕಾರ್ಮಿಕರ ಪಿಎಫ್ ಮತ್ತು ಇಎಸ್ಐ ಹಾಗೂ ಕಾರ್ಮಿಕ ಇಲಾಖೆ ತಪಾಸಣೆ ನಡೆಸಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಪಟ್ಟಿಯನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ತುಮಕೂರು ಪೌರಕಾರ್ಮಿಕರ ಸಂಘವು  17 ವರ್ಷಗಳಿಂದ ನ್ಯಾಯಾಲಯದಲ್ಲಿ ಹೋರಾಟ ನಡೆಸಿದ ಫಲವಾಗಿ 250 ಮಂದಿ ಕಾರ್ಮಿಕರನ್ನು ಕಾಯಂಗೊಳಿಸುವಂತೆ ನ್ಯಾಯಾಲಯ ಆದೇಶಿಸಿದೆ. ಆದೇಶ ಹೊರಡಿಸಿ 6 ತಿಂಗಳು ಕಳೆದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಇದು ನ್ಯಾಯಾಂಗ ನಿಂದನೆ ಆಗುತ್ತದೆ. ಈ ಸಂಬಂಧ ಸಂಘವು ಕಾನೂನು ಹೋರಾಟಕ್ಕೆ ಮುಂದಾಗಿದೆ.

ADVERTISEMENT

ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ನಗರಾಭಿವೃದ್ಧಿ ಕೋಶದ ನಿರ್ದೇಶಕಿ ಅನುಪಮಾ, ‘ಮಹಾನಗರ ಪಾಲಿಕೆ ಅಧಿಕಾರಿಗಳು ನೀಡಿರುವ ಮಾಹಿತಿ ಆಧಾರದಲ್ಲಿ ಕಾಯಂ ಆದ ಕಾರ್ಮಿಕರ ಪಟ್ಟಿ ಬಿಡುಗಡೆ ಮಾಡಲಾಗಿದೆ. ನೀವು ನೀಡಿರುವ ಮನವಿ ಪರಿಶೀಲಿಸಲಾಗುವುದು’ ಎಂದು ತಿಳಿಸಿದರು.

ಪೌರಕಾರ್ಮಿಕರ ಸೇವೆಯನ್ನು ಪೂರ್ಣವಾಗಿ ಪರಿಗಣನೆಗೆ ತೆಗೆದು ಕೊಳ್ಳದಿದ್ದರೆ ದಲಿತ ಸಂಘಟನೆಗಳು ಮತ್ತು ಜನಪರ ಸಂಘಟನೆಗಳು ಬೆಂಬಲ ದಲ್ಲಿ  ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪೌರಕಾರ್ಮಿಕ ಸಂಘದ ಕಾರ್ಯದರ್ಶಿ ಎನ್.ಕೆ.ಸುಬ್ರಹ್ಮಣ್ಯ ಗೋವಿಂದರಾಜು, ರಾಮಕ್ಕ, ಕೆಂಪಣ್ಣ, ಸಿದ್ದಲಿಂಗು, ನಟರಾಜು, ದೇವರಾಜು, ವೆಂಕಟೇಶ್, ಮಂಜು, ಮಂಜುನಾಥ್, ಡಿ.ನರಸಿಂಹಮೂರ್ತಿ, ನರಸಮ್ಮ, ಶಿವು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

**
 ಪೌರಕಾರ್ಮಿಕರಿಗೆ ಆಗಿರುವ ಲೋಪದೋಷಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ನಡೆಸಿ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು
– ವಿಶಾಲ್, ಜಿಲ್ಲಾಧಿಕಾರಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.