ADVERTISEMENT

ಪ್ರಕೃತಿ ಶಾಪವೋ; ಸ್ವಯಂಕೃತ ಅಪರಾಧವೋ?

ಘನಶ್ಯಾಮ ಡಿ.ಎಂ.
Published 3 ಸೆಪ್ಟೆಂಬರ್ 2013, 9:19 IST
Last Updated 3 ಸೆಪ್ಟೆಂಬರ್ 2013, 9:19 IST

ತುಮಕೂರು: ಜಿಲ್ಲೆಯ ಮಧುಗಿರಿ, ಕೊರಟಗೆರೆ, ಪಾವಗಡ, ಶಿರಾ ತಾಲ್ಲೂಕಿನಲ್ಲಿ ಬರಗಾಲಎಂಬುದು `ಪ್ರಕೃತಿಯ ಶಾಪವೇ ಅಥವಾ ಮನುಷ್ಯನ ಸ್ವಯಂಕೃತ ಅಪರಾಧವೇ?' ಎಂಬ ಚರ್ಚೆ ನಡೆಯುತ್ತಿದೆ.

ಈ ತಾಲ್ಲೂಕುಗಳಲ್ಲಿ ಇಂದಿಗೂ ಅಡಿಕೆ ಗಿಡಕ್ಕೆ ಗುಣಿ ತೋಡುವ, ಬತ್ತದ ಗದ್ದೆಗೆ ಭೂಮಿ ಹಸನು ಮಾಡುವ ಕಾರ್ಯ ನಿಂತಿಲ್ಲ. ಹಿಂದೂಪುರ ತಾಲ್ಲೂಕಿಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಬೋರ್‌ವೆಲ್‌ನಿಂದ ನೀರು ತೆಗೆದು ಮುಸುಕಿನಜೋಳ- ಮೆಣಸಿನಕಾಯಿ ಬೆಳೆಯುವ ಹುಮ್ಮಸ್ಸು ರೈತರಲ್ಲಿ ಬತ್ತಿಲ್ಲ.
`ರಾಗಿ ಹೊಲವೇ ನೀರಿಲ್ಲದೆ ನರಳಬೇಕಾದ್ರೆ, ಬತ್ತದ ಗದ್ದೆ- ಅಡಿಕೆ ತೋಟ ಮಾಡೋದು ನ್ಯಾಯಾನಾ?' ಎಂಬ ಗಿರಿಯಪ್ಪನಪಾಳ್ಯದ ರೈತ ಬುಡಜೋಗಣ್ಣ ಮಾತಿಗೆ ಬೆಲೆ ಸಿಕ್ಕಿಲ್ಲ.

ಇದೇ ಗ್ರಾಮದ ಇಕ್ಬಾಲ್ ಸಾಹೇಬರಿಗೆ ಮೂರು ಎಕರೆ ಭೂಮಿ ಇದೆ. `ಗಂಗಾ ಕಲ್ಯಾಣ'ದಲ್ಲಿ ನೀರು ಸಿಕ್ಕ ನಂತರ ಅವರು ಮಾಡಿದ ಮೊದಲ ಕೆಲಸ ಅಡಿಕೆ ನೆಡಿಸಿದ್ದು.

`ತಪ್ಪು ಮಾಡ್ಬಿಟ್ಟೆ ಸಾಮಿ, ಒಂದ್ಕಿತ ಅಡ್ಕೆ ನೆಟ್ರೆ ಮುಗೀತು. ಅದ್ಕಿಂತ ಬೇರೆ ಜೂಜು ಬೇಡ. ಒಂದು ಬೋರ್ ಹೋದ್ರೆ ಮತ್ತೊಂದು, ಅದೂ ಹೋದ್ರೆ ಇನ್ನೊಂದು. ಅಡಿಕೆ ಬೆಳೆದ ಮೇಲೆ ಬೋರ್ ಬತ್ತಿ ಹೋದರೆ ಏನೂ ಮಾಡೋಕೆ ಆಗಲ್ಲ. ಹುಷಾರಿಲ್ಲ ಅಂತ ಆಸ್ಪತ್ರೆಗೆ ಸೇರಿಸಿದ ಮಗನನ್ನು ಸಾಯೋಕೆ ಬಿಡಕ್ಕಾಗುತ್ತಾ? ಅಡಿಕೆ ನೆಟ್ಟ ರೈತರ ಕಥೆಯೂ ಅಷ್ಟೆ' ಎಂದು ಉತ್ತರವಿಲ್ಲದ ಪ್ರಶ್ನೆ ಕೇಳಿ ತಾವು ಮಾಡಿದ್ದು- ಸರಿಯೋ ತಪ್ಪೋ ಎಂಬ ತಮ್ಮ ತೊಳಲಾಟವನ್ನು ಎದುರಿಗಿದ್ದವರಿಗೂ ಹಂಚಿದರು.

ಮಧುಗಿರಿ ತಾಲ್ಲೂಕಿನ ಎಚ್.ಬಸವನಹಳ್ಳಿಯ ರೈತರಲ್ಲಿ ಬತ್ತ ಬೆಳೆಯುವ ಸಾಹಸ ಪ್ರವೃತ್ತಿ ನಿಂತಿಲ್ಲ. ಮುಖ್ಯರಸ್ತೆಯ ಎಡಬದಿಗೆ ಒಣಗುತ್ತಿರುವ ಜೋಳ ಕಾಣಿಸಿದರೆ, ಬಲಕ್ಕೆ ನಳನಳಿಸುವ ಬತ್ತದ ಗದ್ದೆ ಗೋಚರಿಸುತ್ತದೆ. ರಂಟವಳಲು ಸಮೀಪ ವ್ಯಕ್ತಿಯೊಬ್ಬರು ಮೂವರು ಆಳುಗಳೊಂದಿಗೆ ಗದ್ದೆಗೆ ಭೂಮಿ ಸಿದ್ಧಪಡಿಸುತ್ತಿದ್ದುದು ಕಂಡು ಬಂತು.

ಅತಿಯಾಗಿ ನೀರು ಬೇಡುವ ಬತ್ತ- ಅಡಿಕೆಯ ವ್ಯಾಮೋಹವನ್ನೇಕೆ ರೈತರು ತೊರೆಯುತ್ತಿಲ್ಲ? ಈ ಪ್ರಶ್ನೆಗೆ ರಂಗಾಪುರದ ರೈತ ಕಾಮಣ್ಣ ಸೊಗಸಾದ ಉತ್ತರ ಕೊಡುತ್ತಾರೆ.

`ರಾಮ ಚಿನ್ನದ ಜಿಂಕೆ ತರೋಕೆ ಹೋದ; ಆ ಕಡೆ ಚಿನ್ನದ ಜಿಂಕೆಯೂ ಸಿಗ್ಲಿಲ್ಲ- ಈ ಕಡೆ ಸೀತೆಯೂ ಉಳೀಲಿಲ್ಲ. ಅಡಿಕೆ ಹಿಂದೆ ಹೋದವರ ಸ್ಥಿತಿಯೂ ಹೀಗೇ ಆಗಿದೆ. ಹಿಂದಿನಂತೆ ತಗ್ಗು ಪ್ರದೇಶದಲ್ಲಿ ಬಾವಿ ತೋಡಿ ಬೇಸಾಯ ಮಾಡಿಕೊಂಡಿದ್ರೆ ಈ ಸ್ಥಿತಿ ಬರ‌್ತಿರ‌್ಲಿಲ್ಲ. ಮೊದಲು ಬತ್ತ- ಆಮೇಲೆ ಅಡಿಕೆ ಬೆಳೆಯೋಕೆ ಅಂತ ಬೋರ್‌ವೆಲ್ ಬಳಸಿ, ನೀರು ತೆಗೆದು ಎಲ್ಲವೂ ಹಾಳಾಯ್ತು' ಎನ್ನುವುದು ಅವರ ವಾದ.

ಎತ್ತಣ ಸಂಬಂಧ: ಬೇಸಾಯಕ್ಕೂ ಹೈನುಗಾರಿಕೆಗೂ ಸಂಬಂಧವಿಲ್ಲ ಎನ್ನುವ ಪ್ರವೃತ್ತಿಯೂ ಅಲ್ಲಲ್ಲಿ ಗೋಚರಿಸುತ್ತಿದೆ. ತೋವಿನಕೆರೆ ಗ್ರಾಮದ ಕೆಲ ಮಹಿಳೆಯರು ಭೂಮಿ ಇಲ್ಲದಿದ್ದರೂ ಹಸು ಸಾಕುವ ಸಾಹಸ ಮಾಡುತ್ತಿದ್ದಾರೆ. ಮಧುಗಿರಿ ತಾಲ್ಲೂಕಿನ ಗಿರಿಯಪ್ಪನಪಾಳ್ಯದ ಯುವ ರೈತ ಕಾಮರಾಜ್ `ಇದ್ದ ಹಸುಗಳ್ನೆಲ್ಲಾ ಮಾರಿದ್ವಿ' ಎಂದು ಹೇಳುತ್ತಾರೆ.

ಮಧುಗಿರಿ ಪಟ್ಟಣದ ಹೊರವಲಯದ ಜಡೆಗೊಂಡನಹಳ್ಳಿಯಲ್ಲಿ ಜೋಳದ ಬೆಳೆಗೆ ಗೊಬ್ಬರ ಚೆಲ್ಲುತ್ತಿದ್ದ ರೈತ ಮಲ್ಲೇಶಿ, `ತಮ್ಮ ಬಳಿ ಜಾನುವಾರುಗಳೇ ಇಲ್ಲ' ಎಂದರು.

`ಕೊಟ್ಟಿಗೆ ಗೊಬ್ಬರ ಭೂಮಿಗೆ ಬೀಳೋದು ಕಡಿಮೆ ಆಗ್ತಿದೆ. ಸರ್ಕಾರಿ ಗೊಬ್ಬರ ಬಿದ್ದೂಬಿದ್ದೂ ಭೂಮಿಯ ಮೇಲ್ಪದರ ಸಿಮೆಂಟ್‌ನಂತೆ ಆಗಿದೆ. ಹಿಂದೆ ಹೊಲದಲ್ಲಿ (ಗುಂಡಿ ಮಾಡಿ) ಒಂದು ಬಿಂದಿಗೆ ನೀರು ಸುರಿದ್ರೆ 2 ನಿಮಿಷದಲ್ಲಿ ಖಾಲಿ ಆಗ್ತಿತ್ತು. ಈಗ 2 ಗಂಟೆ ಆದ್ರೂ ಇಂಗಲ್ಲ. ಭೂಮಿಗೆ ವಿಪರೀತ ಸರ್ಕಾರಿ ಗೊಬ್ಬರ ಬೀಳುತ್ತಿರುವುದೂ ಬರಕ್ಕೆ ಕಾರಣ' ಎನ್ನುತ್ತಾರೆ ರಂಗಾಪುರದ ಪ್ರಗತಿಪರ ರೈತರಾದ ಕಾಮಣ್ಣ.

ಶಿರಾ ತಾಲ್ಲೂಕಿನ ರೈತರು ಮರಳು ಗಣಿಗಾರಿಕೆಯಿಂದ ಅಂತರ್ಜಲ ಬತ್ತಿ ಬರ ಬಂದಿದೆ ಎಂಬ ಹೊಸ ವಾದ ಮುಂದಿಡುತ್ತಾರೆ. ಜಿಲ್ಲೆಯಲ್ಲಿದ್ದ ಹಸಿರು ಸೆರಗು ಕರಗಿದ್ದು ಬರ ಬೀಳಲು ಮುಖ್ಯ ಕಾರಣ ಎಂಬ ಮತ್ತೊಂದು ವಾದವೂ ಚಾಲ್ತಿಯಲ್ಲಿದೆ.

ಬರದ ನೆನಪು: ತೋವಿನಕೆರೆ ಗೊಲ್ಲರಹಟ್ಟಿಯ ರಂಗಜ್ಜ, 1964-65ರಲ್ಲಿ ಅನುಭವಿಸಿದ್ದ ಬರದ ಕಥೆಗಳನ್ನು ಹೇಳುತ್ತಾರೆ.
`ಆಗ ಬಟಾಣಿ ಬರ ಅಂತ ಬಂದಿತ್ತು. ಆಗ ಸರ್ಕಾರದವರು ಎಲ್ಲಿಂದಲೋ ಬಟಾಣಿಗಳನ್ನು ತರಿಸಿದ್ದರು. ಅಂಗಡಿಗಳಲ್ಲಿ ಬಟಾಣಿ ಯಥೇಚ್ಛವಾಗಿ ಸಿಗ್ತಿತ್ತು. ಜನ ಅದನ್ನೇ ತಿಂದು ನೀರು ಕುಡಿದು ಮಲಗುತ್ತಿದ್ದರು. ಹುಣಸೆ ಬೀಜ ಹುರಿದು ತಿಂದ ನೆನಪೂ ಇದೆ. ಕಾಡಲ್ಲಿದ್ದ ಅರಳಿ- ಆಲ- ಕಲ್ಹತ್ತಿ- ದುಗ್ಗಲಿ ಸೊಪ್ಪು ತಂದು ದನಗಳಿಗೆ ಹಾಕಿದ್ವಿ. ಹುಲ್ಲು ಇಲ್ಲದಿದ್ರು ದನಗಳು ಆರೋಗ್ಯ ಕೆಟ್ಟಿರಲಿಲ್ಲ. ಅಂಥ ಸ್ಥಿತಿಯಲ್ಲೂ ಹಳ್ಳಕೊಳ್ಳ- ಬಾವಿಗಳಲ್ಲಿ ನೀರು ಬತ್ತಿರಲಿಲ್ಲ. ಮೊಳಕಾಲು ಊರಿ ಚಿಲುಮೆ ತೆಗೆದು ನೀರು ಕುಡಿದಿದ್ದೀವಿ. ಇಂದು ಒಂದು ವರ್ಷ ಮಳೆ ಹೋದರೆ ನೀರಿಗೆ ತತ್ವಾರ ಶುರು' ಎಂದು ನೆನಪಿಸಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.