ಶಿರಾ ತಾಲ್ಲೂಕಿನಲ್ಲಿ 2013ನೇ ಇಸವಿಯಲ್ಲಿ ತಿರುಗಿದ ಕಾಲಚಕ್ರವ ಒಮ್ಮೆ ಅವಲೋಕಿಸಿದರೆ; ಅದೇ ಬರ, ಮಿತಿ ಮೀರಿದ ಮರಳು ದಂಧೆ, ಇತಿಹಾಸ ಬದಲಿಸಿದ ವಿಧಾನಸಭಾ ಚುನಾವಣೆ, ಮಠದ ವಿವಾದ, ಕೋಮುಗಲಭೆ, ಮಾಜಿ ಶಾಸಕರಿಬ್ಬರ ಸಾವು, ನಿಲ್ಲದ ರೈತರ ಆತ್ಮಹತ್ಯೆ ನಡುವೆ ವರ್ಷದ ಅಂತ್ಯಕ್ಕೆ ಪ್ರಾಂಶುಪಾಲರೊಬ್ಬರು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ನಾಪತ್ತೆಯಾದ ಪ್ರಕರಣ ಪ್ರಮುಖವಾಗಿವೆ.
ಬರ ತಾಲ್ಲೂಕಿಗೆ ಶಾಪವಾಗಿ ಕಾಡುತ್ತಿದ್ದರೂ ರಾಜಕಾರಣಿಗಳಿಗೆ ಮಾತ್ರ ಅದೇ ವರವಾಗಿದೆ. ಈ ವರ್ಷವೂ ತಾಲ್ಲೂಕಿನಲ್ಲಿ ಬರ ಘೋಷಣೆಯಾಗಿದೆ. ಆದರೆ ಅಲ್ಪ-ಸ್ವಲ್ಪ ಬೆಳೆದ ಶೇಂಗಾಗೂ ಉತ್ತಮ ಬೆಲೆ ಸಿಗಲಿಲ್ಲ ಎಂಬ ಕೊರಗು ರೈತರದ್ದು.
ವಿಧಾನಸಭೆ ಚುನಾವಣೆಯಲ್ಲಿ ಮರಳು ದಂಧೆ ಚರ್ಚೆಯ ವಿಷಯವಾದರೂ ಮತದಾರ ಅದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಸರ್ಕಾರದ ಕೆಲಸಕ್ಕಾಗಿ ಎಂಬ ನಾಮ ಫಲಕ ಹೊತ್ತ ವಾಹನಗಳು ಮದಲೂರು ಕೆರೆಯಲ್ಲಿ ಅಕ್ರಮ ಗಣಿಗಾರಿಕೆ ಮೂಲಕ ಕೋಟ್ಯಂತರ ರೂಪಾಯಿ ಮೌಲ್ಯದ ಮರಳು ಲೂಟಿ ಮಾಡಿದವು. ಮಾಜಿ ಸಚಿವ ಬಿ.ಸತ್ಯನಾರಾಯಣ ಕೆರೆಯಲ್ಲೇ ಧರಣಿ ನಡೆಸಿದರೂ ಪ್ರಯೋಜನವಾಗಲಿಲ್ಲ.
ಕ್ಷೇತ್ರದಲ್ಲಿ ಒಮ್ಮೆ ಗೆದ್ದವರು ಮತ್ತೆ ಗೆಲ್ಲುವುದಿಲ್ಲ ಎಂಬ ಪ್ರತೀತಿ ಮುರಿದು ಟಿ.ಬಿ.ಜಯಚಂದ್ರ ಶಾಸಕರಾಗಿ ಆಯ್ಕೆಯಾಗಿದ್ದು ಐತಿಹಾಸಿಕ ದಾಖಲೆ. ಜತೆಗೆ ಸರ್ಕಾರದಲ್ಲಿ ಮಹತ್ವದ ಸ್ಥಾನ ಸಿಕ್ಕಿರುವುದು ಕ್ಷೇತ್ರದ ಜನತೆಗೆ ಖುಷಿ.
ಏಳು ತಲೆಮಾರಿನ ಐತಿಹ್ಯವಿರುವ ಪಟ್ಟನಾಯಕನಹಳ್ಳಿ ನಂಜಪ್ಪಯ್ಯನ ಮಠದ ಆವರಣದಲ್ಲಿ ಜನಾಂಗವೊಂದರ ಸಂಘಟನೆ ಮೂಲಕ ಶವ ಸಂಸ್ಕಾರಕ್ಕೆ ನಡೆಸಿದ ಯತ್ನ ವಿವಾದ ಸ್ವರೂಪ ಪಡೆದಿದ್ದು, ಈ ವರ್ಷದ ಪ್ರಮುಖ ಘಟನಾವಳಿಗಳಲ್ಲಿ ಒಂದು.
ಐಬಿ ಸರ್ಕಲ್‌ನಲ್ಲಿ ನಿರ್ಮಿಸಿರುವ ಮಳಿಗೆಗಳ ವಿವಾದ ನ್ಯಾಯಾಲಯದ ಮೆಟ್ಟಿಲೇರಿ ಕೋಮುವಾದಿಗಳ ಕುಮ್ಮಕ್ಕಿನಿಂದ ಶಿರಾ ನಗರ ಕೋಮುಗಲಭೆಯ ತಲ್ಲಣ ಅನುಭವಿಸಿದರೂ; ಗಲಭೆ ತೀವ್ರ ವಿಕೋಪಕ್ಕೆ ತಿರುಗದೆ ಶೀಘ್ರವೇ ಶಾಂತಿ ನೆಲೆಸಿದ್ದು ತಾಲ್ಲೂಕಿನ ಕೋಮುಸೌರ್ಹಾದತೆಗೆ ಮತ್ತಷ್ಟು ಪುಷ್ಟಿ ತಂದಿತು.
ಮಾಜಿ ಶಾಕಸ, ಹನುಮಾನ್ ಬಸ್ ಮಾಲೀಕರೂ ಆಗಿದ್ದ ಪಿ.ಎಂ.ರಂಗನಾಥಪ್ಪ ಇದೇ ವರ್ಷ ನಿಧನರಾದರು. ನನಗೆ ಮಂತ್ರಿಗಿರಿ ಬೇಡ; ನಮ್ಮ ಜನರಿಗೆ ಹೇಮಾವತಿ ನೀರು ಕೊಡಿ... ಎಂದು ನಮ್ಮ ಕೆರೆಗೆ ರಂಗನಾಥಪ್ಪ ನೀರು ತಂದರಂತೆ ಎಂದು ಜನಸಾಮನ್ಯರು ಕಂಬನಿ ಮಿಡಿದ ದೃಶ್ಯ ಅವರ ಸೇವೆಗೆ ಸಂದ ಗೌರವವಾಗಿತ್ತು. ಮತ್ತೊಬ್ಬ ಮಾಜಿ ಶಾಸಕ ಪುಟ್ಟಕಾಮಣ್ಣ ಕೂಡ ನಿಧನರಾದರು.
ಮೂರು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಶಾಗದಡು ಬೊಮ್ಮಣ್ಣ ಸಹ ಇದೇ ವರ್ಷ ನಿಧನರಾದರು. ತಾಲ್ಲೂಕಿನಲ್ಲಿ ನೆಲೆಯೇ ಇಲ್ಲದ ಬಿಜೆಪಿಯಿಂದ ಬುಕ್ಕಾಪಟ್ಟಣ ಕ್ಷೇತ್ರದಿಂದ ಸತತ ಸ್ಪರ್ಧಿಸಿ ಮತದಾರರೊಂದಿಗೆ ಇದ್ದ ಅವರ ಬಾಂಧವ್ಯದಿಂದಲ್ಲೇ ಚುನಾಯಿತರಾಗುತಿದ್ದ ರೀತಿ ವಿಶೇಷವಾಗಿತ್ತು. ಜನಪ್ರತಿನಿಧಿ ಎಂಬ ಬಿಗುಮಾನ ಒಂದಿಷ್ಟು ಇಲ್ಲದೆ; ಕಚೇರಿಯಿಂದ ಕಚೇರಿಗೆ ಕಾಲಿನಲ್ಲೇ ಅಲೆದು ಜನರಿಗೆ ಕೆಲಸ ಮಾಡಿಕೊಡುತ್ತಿದ್ದ ಬೊಮ್ಮಜ್ಜರ ನಿಜ ರಾಜಕಾರಣ ತಾಲ್ಲೂಕಿನ ಯುವ ಜನ ಪ್ರತಿನಿಧಿಗಳಿಗೆ ಮಾದರಿಯಾಗಬೇಕಿದೆ.
ರೈತರ ಆತ್ಮಹತ್ಯೆ ಮುಂದುವರೆದಿದೆಯಾದರೂ ಕಳೆದ ವರ್ಷಕ್ಕೆ ಹೋಲಿಸಿದರೆ ಸಂಖ್ಯೆ ಕಡಿಮೆ. ಆದರೆ ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ ಶೀಘ್ರವೇ ಪರಿಹಾರ ಸಿಕ್ಕಿದೆ.
ಪ್ರಥಮ ಪಿಯುಸಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ ಕೂಡಲೇ ತಲೆತಪ್ಪಿಸಿಕೊಂಡ ಪಟ್ಟನಾಯಕನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಬಿ.ಪಿ.ಪಾಂಡುರಂಗಯ್ಯ ಪ್ರಕರಣ ತಾಲ್ಲೂಕಿನ ಶೈಕ್ಷಣಿಕ ವಲಯಕ್ಕೆ ಕಪ್ಪುಚುಕ್ಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.