ADVERTISEMENT

ಫಿಲ್ಟರ್ ಮರಳು ಗಣಿಗಾರಿಕೆ: ತಹಶೀಲ್ದಾರ್‌ಗೆ ನೋಟಿಸ್; ಇಂದು ಡಿಸಿ ಭೇಟಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2012, 4:40 IST
Last Updated 17 ನವೆಂಬರ್ 2012, 4:40 IST

ತುಮಕೂರು: ತಾಲ್ಲೂಕಿನ ಮಸ್ಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮದೇವರ ಗುಡ್ಡದಲ್ಲಿ ನಡೆಯುತ್ತಿರುವ ಫಿಲ್ಟರ್ ಮರಳು ಗಣಿಗಾರಿಕೆ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಅಹೋಬಳಯ್ಯ ಅವರಿಗೆ ಜಿಲ್ಲಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.

ಇಲ್ಲಿ ನಡೆಯುವ ಮರಳು ಗಣಿಗಾರಿಕೆ ಕುರಿತು `ರಾಮದೇವರ ಗುಡ್ಡದಲ್ಲಿ ಮರಳು ರೌದ್ರಾವತಾರ~ ಎಂಬ ವರದಿ ಗುರುವಾರದ `ಪ್ರಜಾವಾಣಿ~ ಸಂಚಿಕೆಯಲ್ಲಿ ವರದಿಯಾಗಿತ್ತು.

`ಪ್ರಜಾವಾಣಿ~ಯಲ್ಲಿ ಬಂದ ವರದಿ ಹಿನ್ನೆಲೆಯಲ್ಲಿ ತಹಶೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಇಡೀ ಪ್ರಕರಣ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿರುವುದಾಗಿ ಜಿಲ್ಲಾಧಿಕಾರಿ ಆರ್.ಕೆ.ರಾಜು ಶುಕ್ರವಾರ ತಿಳಿಸಿದರು.

ಮೂರು ವರ್ಷಗಳಿಂದ ಮರುಳು ಗಣಿಗಾರಿಕೆ ನಡೆಯುತ್ತಿದ್ದರೂ ಅದನ್ನು ಗಮನಕ್ಕೆ ತಾರದ ಅಲ್ಲಿನ ಗ್ರಾಮ ಸಹಾಯಕ, ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಶನಿವಾರ ಗಣಿಗಾರಿಕೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜತೆ ಭೇಟಿ ನೀಡುತ್ತಿರುವುದಾಗಿ ಹೇಳಿದರು.

ಜಿಲ್ಲೆಯಲ್ಲಿ ನಡೆಯುತ್ತಿರುವ ಫಿಲ್ಟರ್ ಮರಳು ಗಣಿಗಾರಿಕೆ ತಡೆಯುವ ನಿಟ್ಟಿನಲ್ಲಿ ಪೊಲೀಸ್, ಅರಣ್ಯ, ಭೂ ವಿಜ್ಞಾನ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಶೀಘ್ರವೇ ಸಭೆ ನಡೆಸಲಾಗುವುದು. ಯಾವ ಭಾಗದಲ್ಲೂ ಫಿಲ್ಟರ್ ಮರಳು ಗಣಿಗಾರಿಕೆ ನಡೆಸದಂತೆ ಕ್ರಮ ಕೈಗೊಳ್ಳಲಾಗುವುದು. ಫಿಲ್ಟರ್ ಮರಳು ಸಾಗಿಸುವವರಿಗೆ ದಂಡ ವಿಧಿಸಲಾಗುವುದು ಎಂದು ಮಾಹಿತಿ ನೀಡಿದರು.

ರಾಮಗುಡ್ಡದ ಮರಳು ಗಣಿಗಾರಿಕೆಯ ಕುರಿತು ಶಾಸಕ ಬಿ.ಸುರೇಶ್‌ಗೌಡ ಅವರು ಜಿಲ್ಲಾಧಿಕಾರಿ ಜತೆ ಮಾತನಾಡಿ ಕೂಡಲೇ ಮರುಳು ಗಣಿಗಾರಿಕೆ ನಿಲ್ಲಿಸುವಂತೆ ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.