ADVERTISEMENT

ಬಲವಂತ ಸಾಲ ವಸೂಲಿ ಬೇಡ: ಸಿಇಒ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2012, 10:44 IST
Last Updated 11 ಡಿಸೆಂಬರ್ 2012, 10:44 IST

ತುಮಕೂರು: ಜಿಲ್ಲೆ ರೈತರು ಬರಕ್ಕೆ ಸಿಲುಕಿದ್ದು, ಬ್ಯಾಂಕುಗಳು ಬಲವಂತದಿಂದ ಸಾಲ ವಸೂಲಿ ಮಾಡದಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯಾನಿರ್ವಹಣಾಧಿಕಾರಿ ಗೋವಿಂದರಾಜು ಇಲ್ಲಿ ಸೋಮವಾರ ಬ್ಯಾಂಕ್‌ಗಳಿಗೆ ಸೂಚಿಸಿದರು.ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸೋಮವಾರ ಜಿಲ್ಲಾ ಕೃಷಿ ಇಲಾಖೆ ಹಾಗೂ ಅಪ್ನಾದೇಶ್ ಅಸೋಸಿಯೇಷನ್ ಸಹಯೋಗದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೈತ ಶಕ್ತಿ ಗುಂಪುಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಗ್ರಾಮಾಂತರ ಪ್ರದೇಶದಲ್ಲಿ ರೈತರು ಮಳೆಯನ್ನೇ ನಂಬಿ ವ್ಯವಸಾಯದಲ್ಲಿ ತೊಡಗುತ್ತಿದ್ದವರು, ಇಂದು ಬರದ ಕೆನ್ನಾಲಿಗೆಗೆ ಸಿಲುಕಿದ್ದಾರೆ. ಜಾನುವಾರುಗಳನ್ನು ಮಾರಾಟ ಮಾಡಬೇಕಾದ ಸ್ಥಿತಿ ಬಂದಿದೆ. ಬರದಿಂದ ತತ್ತರಿಸಿದ್ದು, ಸಾಲ ನೀಡಿರುವ ಬ್ಯಾಂಕ್‌ಗಳು ಹಿಂಸಾತ್ಮಕವಾಗಿ ವಸೂಲಿ ಮಾಡಬಾರದು ಎಂದು ಹೇಳಿದರು.

ರೈತರಿಗೆ ಬೇಕಿರುವುದು ಭಾಷಣಗಳಲ್ಲ, ಒಣ ಪ್ರತಿಷ್ಠೆಯಾಗಿಯೇ ಉಳಿದುಕೊಳ್ಳುವ ಭರವಸೆಗಳು ಬೇಕಾಗಿಲ್ಲ. ನೀರು, ವಿದ್ಯುತ್, ಕೃಷಿಗೆ ಬೇಕಾಗುವ ಸಲಕರಣೆಗಳು, ಅಗತ್ಯ ನೆರವಿನ ಸಾಲವಷ್ಟೇ ಬೇಕಿದೆ. ಇಂಥ ಸಮಯದಲ್ಲಿ ರೈತರು ಇರುವ ನೀರನ್ನು ಬಳಸಿಕೊಂಡು ತೋಟಗಾರಿಕೆ ಬೆಳೆ ಬೆಳೆಯಲು ಮುಂದಾಗುವುದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.

ಸರ್ಕಾರದ ಜಲಾನಯನ ಕಾರ್ಯಕ್ರಮಗಳನ್ನು ಬಳಕೆ ಮಾಡಿಕೊಳ್ಳಬೇಕು. ಅಂತರ್ಜಲ ಬಳಕೆ ಮಿತವಾಗಿ ಬಳಸಿಕೊಳ್ಳಬೇಕು. ಜಿಲ್ಲೆಯ 223 ಗ್ರಾಮಗಳ ಜನರು ಫ್ಲೋರೈಡ್ ನೀರು ಕುಡಿದು ಬಳಲುತ್ತಿದ್ದಾರೆ. ಜಿಲ್ಲೆಯಲ್ಲಿ 5.5 ಲಕ್ಷ ಕುಟುಂಬಗಳಿದ್ದು, 3 ಲಕ್ಷ ಕುಟುಂಬಗಳಿಗೆ ಶೌಚಾಲಯಗಳಿಲ್ಲ. ಎಂತಹ ಕುಟುಂಬಕ್ಕೂ ಶೌಚಾಲಯ ನಿರ್ಮಿಸಿಕೊಳ್ಳಲಾಗದ ಸ್ಥಿತಿ ಉದ್ಭವಿಸಿರುವುದಿಲ್ಲ, ಹಾಗಾಗಿ ಎಲ್ಲರೂ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಸಲಹೆ ಮಾಡಿದರು.

ಅಪ್ನಾದೇಶ್ ಸಂಸ್ಥೆ ಕಾರ್ಯದರ್ಶಿ ಈ.ಬಸವರಾಜು ಮಾತನಾಡಿ, ಹಣ ರಹಿತವಾಗಿ ನಗರ, ಗ್ರಾಮಗಳ ಅಭಿವೃದ್ಧಿಗೆ ಸದಾ ಸಿದ್ಧವಾಗಿದ್ದು, ಅಪ್ನಾದೇಶ್ ಸಂಘಟನೆಯು ರೈತರೊಂದಿಗೆ ಸಂವಾದ ನಡೆಸಿ, ಕೃಷಿ ಅಭಿವೃದ್ಧಿ ವಿಚಾರಗಳನ್ನು ತಿಳಿಸಿಕೊಡುತ್ತಿದೆ ಎಂದರು.
ಅಪ್ನಾದೇಶ್ ಸಂಸ್ಥೆ ಉಪಾಧ್ಯಕ್ಷ ಡಾ.ರಾಜಾನಾಯ್ಕ ಮಾತನಾಡಿ, ದೇಶದ ಪ್ರತಿಯೊಬ್ಬ ಪ್ರಜೆ ಮೇಲೆ ರೂ. 33 ಸಾವಿರ ಸಾಲವಿದೆ. ಇಂತಹ ಸಂದರ್ಭದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಮಾರ್ಗ ತುಳಿಯಬೇಡಿ. ಜೀವನದಲ್ಲಿ ಭರವಸೆ ಕಳೆದುಕೊಳ್ಳಬೇಡಿ ಎಂದು ತಿಳಿಸಿದರು.

ಚಿಂತಕ ಮಹೇಂದ್ರಸಿಂಗ್, ಜಂಟಿ ಕೃಷಿ ನಿರ್ದೇಶಕಿ ಡಾ.ಎಚ್.ಟಿ.ಚಂದ್ರಕಲಾ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ದೊಡ್ಡೇಗೌಡ, ಯೋಜನಾ ನಿರ್ದೇಶಕ ಡಾ.ಪ್ರಕಾಶ್, ಸಹಾಯಕ ಕೃಷಿ ನಿರ್ದೇಶಕರಾದ ಡಾ.ಡಿ.ಉಮೇಶ್, ಡಾ.ಟಿ.ಎನ್.ಅಶೋಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.