ADVERTISEMENT

ಬಾಣಂತಿ, ಗರ್ಭಿಣಿಯರ ಸರದಿ ಸಾವು

​ಪ್ರಜಾವಾಣಿ ವಾರ್ತೆ
Published 8 ಜನವರಿ 2011, 8:30 IST
Last Updated 8 ಜನವರಿ 2011, 8:30 IST

ತಿಪಟೂರು: ಕೇವಲ 55 ಮನೆಗಳಿರುವ ಈ ಊರಿನ ದಲಿತರ ಕಾಲೊನಿಯಲ್ಲಿ ಒಂದೂವರೆ ವರ್ಷದಿಂದ ಮೂವರು ಬಾಣಂತಿಯರು, ಇಬ್ಬರು ಗರ್ಭಿಣಿಯರು ಮೃತಪಟ್ಟಿದ್ದಾರೆ. ಆತಂಕಗೊಂಡ ಗ್ರಾಮಸ್ಥರು ಗ್ರಾಮದೇವಿಗೆ ಮೊರೆ ಇಟ್ಟಿದ್ದಾರೆ. ಗರ್ಭಿಣಿ, ಬಾಣಂತಿಯರ ಯೋಗಕ್ಷೇಮಕ್ಕೆ ಸರ್ಕಾರ ಏನೆಲ್ಲಾ ಯೋಜನೆ ಜಾರಿಗೆ ತಂದಿದ್ದರೂ ಸಾವು ಮಾತ್ರ ನಿಂತಿಲ್ಲ. ತಾಲ್ಲೂಕಿನ ಶೆಟ್ಟಿಹಳ್ಳಿ ಕಾಲೋನಿಯಲ್ಲಿ ಬಾಣಂತಿಯರು, ಗರ್ಭಿಣಿಯರ ವಿಷಯದಲ್ಲಿ ಇಂದಿಗೂ ಆತಂಕ ಮನೆ ಮಾಡಿದ್ದು, ಗ್ರಾಮದೇವತೆ ಕಲ್ಲಾಳಮ್ಮನನ್ನು ಕರೆತಂದು ಶುಕ್ರವಾರ ಬಲಿ ಪೂಜೆ ಸಲ್ಲಿಸಿದರು.

ಶೆಟ್ಟಿಹಳ್ಳಿ ಕಾಲೊನಿಯ ಬಸವರಾಜು ಎಂಬುವರ ಮಗಳು ನೇತ್ರಾವತಿಯನ್ನು (22) ಆದಿನಾಯ್ಕನಹಳ್ಳಿಯ ಅಶೋಕ್ ಎಂಬುವರಿಗೆ ಕೊಟ್ಟು ಮೂರು ವರ್ಷದ ಹಿಂದೆ ಮದುವೆ ಮಾಡಲಾಗಿತ್ತು. ತವರಿನಲ್ಲಿ 2ನೇ ಹೆರಿಗೆಯಾದ ಆಕೆ 15 ದಿನದ ನಂತರ ಮನೆಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಆಸ್ಪತ್ರೆಗೆ ದಾಖಲಿಸಿದರೂ 15 ದಿನದ ಗಂಡು ಮಗು, 3 ವರ್ಷದ ಮಗಳನ್ನು ತೊರೆದು ಕಳೆದ ಅಕ್ಟೋಬರ್‌ನಲ್ಲಿ ಮೃತಪಟ್ಟಿದ್ದಾರೆ.

ಇದೇ ಗ್ರಾಮದ ಮಲ್ಲಿಕಯ್ಯ ಎಂಬುವರ ಮಗಳು ಲತಾಳನ್ನು ಗಿಣಕಿಕೆರೆಯ ಸಿದ್ದಪ್ಪ ಎಂಬುವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಒಂದೂವರೆ ವರ್ಷದ ನಂತರ ಈಕೆಗೆ ಹೆರಿಗೆಯಾಗಿತ್ತು. ಮನೆಯಲ್ಲಿ ತಲೆ ಸುತ್ತಿ ಬಿದ್ದವರು ಮತ್ತೆ ಚೇತರಿಸಿಕೊಳ್ಳದೆ 15 ದಿನದ ಮಗು ಬಿಟ್ಟು 2009ರ ಡಿಸೆಂಬರ್‌ನಲ್ಲಿ ಮೃತಪಟ್ಟಿದ್ದಾರೆ. ನಂತರ ಮಗು ಕೂಡ ಅಸು ನೀಗಿದೆ. ರಂಗಯ್ಯ ಎಂಬುವರ ಮಗಳು ಸಾವಿತ್ರಮ್ಮ ಹೊಸಹಳ್ಳಿಯ ರಂಗಯ್ಯ ಎಂಬುವರಿಗೆ ಕೊಟ್ಟು ಐದು ವರ್ಷದ ಹಿಂದೆ ಮದುವೆ ನಡೆದಿತ್ತು. 2ನೇ ಹೆರಿಗೆಗೆ ತವರಿಗೆ ಬಂದಿದ್ದ ಈಕೆ 20 ದಿನದ ಮಗುವನ್ನು ತೊರೆದು 2009ರ ಜೂನ್‌ನಲ್ಲಿ ಮೃತಪಟ್ಟಿದ್ದಾರೆ. ಒಂದೂವರೆ ವರ್ಷ ಗಂಡು ಹಾಗೂ ಹೆಣ್ಣು ಮಗು ಅಮ್ಮನ ಪ್ರೀತಿಯಿಂದ ವಂಚಿತವಾಗಿದೆ.

ಮೂರು ವರ್ಷದ ಹಿಂದೆ ಮಲ್ಲಿಕಯ್ಯ ಎಂಬುವರ ಮಗಳು ಮಮತಾಳನ್ನು ಬೆಳಗೀಹಳ್ಳಿಯ ಸತೀಶ್‌ಗೆ ಕೊಟ್ಟು ಮದುವೆ ಮಾಡಲಾಗಿತ್ತು. ಮೊದಲ ಹೆರಿಗೆ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಮಗು ಸಹಿತ ಮೃತಪಟ್ಟಿದ್ದಾರೆ. ಇದೇ ಗ್ರಾಮದ ಬಸವರಾಜು ಎಂಬುವರ ಪತ್ನಿ ಆಶಾರಾಣಿ ಮೊದಲ ಹೆರಿಗೆ ಸಂದರ್ಭದಲ್ಲಿ ಮಗು ಗರ್ಭದಲ್ಲಿದ್ದಾಗಲೇ ಕಳೆದ ಜೂನ್‌ನಲ್ಲಿ ಮೃತಪಟ್ಟಿದ್ದಾರೆ. ಇಷ್ಟೇ ಅಲ್ಲದೆ ಇದೇ ಗ್ರಾಮದ ಶಿವಲಿಂಗಮ್ಮ ಎಂಬ ಗೃಹಿಣಿ ವರ್ಷದ ಹಿಂದೆ ಕ್ಯಾನ್ಸರ್‌ನಿಂದ, ಐದು ತಿಂಗಳ ಹಿಂದೆ ಈ ಕಾಲೋನಿಯ ವ್ಯಕ್ತಿಯೊಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇಷ್ಟೆಲ್ಲಾ ಅವಘಡದಿಂದ ಗ್ರಾಮಸ್ಥರು ದಿಗಿಲುಗೊಂಡಿದ್ದಾರೆ.

ಈಗ ಸೊಸೆಯನ್ನಾಗಲೀ, ಮಗಳನ್ನಾಗಲಿ ಹೆರಿಗೆಗೆಂದು ಇಲ್ಲಿಗೆ ಕರೆತರಲು ಗ್ರಾಮಸ್ಥರು ಹೆದರುತ್ತಿದ್ದಾರೆ. ಯಾವುದೋ ಕಾಟ ಇರಬಹುದೆಂದು ತಿಳಿದು ಗ್ರಾಮದೇವತೆಗೆ ವಿಶೇಷ ಪೂಜೆ ಮಾಡಿಸಿದ್ದಾರೆ. ಬಾಣಂತಿಯರು, ಗರ್ಭಿಣಿಯರ ಸಾವಿಗೆ ವೈದ್ಯರು ಸ್ಪಷ್ಟ ಕಾರಣ ನೀಡುತ್ತಿಲ್ಲ. ಹಾಗಾಗಿ ದೇವಿ ಮೊರೆ ಹೋಗಿದ್ದೇವೆ ಎನ್ನುತ್ತಾರೆ ಗ್ರಾಮಸ್ಥರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.