ADVERTISEMENT

ಬಿ.ಎಚ್.ರಸ್ತೆ ಕರ್ಮಕಾಂಡ

​ಪ್ರಜಾವಾಣಿ ವಾರ್ತೆ
Published 9 ಜೂನ್ 2011, 7:20 IST
Last Updated 9 ಜೂನ್ 2011, 7:20 IST

ತುಮಕೂರು: ಬಿ.ಎಚ್.ರಸ್ತೆ ಗುಣಮಟ್ಟ, ಹೆದ್ದಾರಿ ನಿಯಮ ಪಾಲನೆ ಮಾಡದಿದ್ದ ಪಕ್ಷದಲ್ಲಿ ಜಿಲ್ಲಾಡಳಿತ, ನಗರಾಡಳಿತ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ  ವಿರುದ್ಧ  ಲೋಕಾಯುಕ್ತಕ್ಕೆ ದೂರು ಸಲ್ಲಿಸುವಂತೆ ಅಭಿವೃದ್ಧಿ ರೆವ್ಯಲೂಷನರಿ ಫೋರಂ ಶಾಸಕ ಎಸ್. ಶಿವಣ್ಣ ಅವರಿಗೆ ಸಲಹೆ ನೀಡಿದೆ.

`ಬಿ.ಎಚ್. ರಸ್ತೆ~ ಕುರಿತು `ಪ್ರಜಾವಾಣಿ~ಯಲ್ಲಿ ಬುಧವಾರ ಪ್ರಕಟಗೊಂಡ ವರದಿಗೆ ಪ್ರತಿಕ್ರಿಯಿಸಿ ರಾಷ್ಟ್ರೀಯ ಹೆದ್ದಾರಿ -206ರಲ್ಲಿ ಒಪ್ಪಂದದ ಪ್ರಕಾರ ತೆರವುಗೊಳಿಸಿರುವ 100 ಅಡಿ ಜಾಗದಲ್ಲಿ ಏನೇನು ಮಾಡಬಹುದು ಅದನ್ನು ಮಾಡುತ್ತೇವೆ ಎಂದಿರುವ ಶಾಸಕರ ಮಾತಿಗೆ ಕಿಡಿಕಾರಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 100 ಅಡಿ ರಸ್ತೆ ಮಧ್ಯ ಭಾಗದಲ್ಲಿ ಮೀಡಿಯನ್, ನಂತರ ಎರಡೂ ಕಡೆ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಬೇಕಿತ್ತು. ಎರಡೂ ಕಡೆ 14 ಅಡಿ ಸರ್ವೀಸ್ ರಸ್ತೆಗಾಗಿ ಜಾಗ ಮೀಸಲಿಡಬೇಕಿತ್ತು, ಆದರೆ ಈ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸದೇ ಇರುವ ಅಧಿಕಾರಿಗಳ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಕಟಣೆಯಲ್ಲಿ ಪ್ರಶ್ನಿಸಿದೆ.

ಆಗಿರುವ ತಪ್ಪು ಸರಿಪಡಿಸಿ ಕಾಮಗಾರಿ ಪೂರ್ಣಗೊಳಿಸಲು ಜಿಲ್ಲಾಡಳಿತ, ನಗರಾಡಳಿತ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಸೂಚನೆ ಕೊಡಬೇಕು. ಸೂಚನೆ ಪಾಲಿಸದಿದ್ದ ಪಕ್ಷದಲ್ಲಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕಾಗಿ ನ್ಯಾಯಾಲಯ ಮತ್ತು ಲೋಕಾಯುಕ್ತರ ಮೊರೆ ಹೋಗೋಣ. ಶಾಸಕರಾದ ನೀವು ಇದರ ನೇತೃತ್ವ ವಹಿಸಬೇಕು ಎಂದು ಒತ್ತಾಯಿಸಿದೆ.

ಕಾನೂನು ಬದ್ಧವಾಗಿ ರಸ್ತೆ ವಿಸ್ತರಣೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕು. ಜನರು ನ್ಯಾಯಾಲಯಕ್ಕೆ ಹೋದಲ್ಲಿ ಅದು ಕಾನೂನು ಪ್ರಕಾರವೇ ನಿರ್ಧಾರವಾಗಲಿ. ತಿಪಟೂರಿನಲ್ಲಿ ರಸ್ತೆ ವಿಸ್ತರಣೆ ವೇಳೆ ನ್ಯಾಯಾಲಯದ ಮೆಟ್ಟಿಲು ಹತ್ತಿ ನಂತರ ಕಾನೂನು ಪ್ರಕಾರವೇ ರಸ್ತೆ ವಿಸ್ತರಣೆ ಆಗಿದ ಉದಾಹರಣೆ ಇದೆ. ಹೀಗಾಗಿ ಹೇಗೆ ಬೇಕೆ ಹಾಗೆ ರಸ್ತೆ ಕಾಮಗಾರಿ ನಡೆಸದೇ ನ್ಯಾಯಾಲಯದ ತೀರ್ಮಾನದ ಪ್ರಕಾರವೇ ಕಾನೂನು ಬದ್ಧವಾಗಿ ರಸ್ತೆ ನಿರ್ಮಿಸುವುದು ಸೂಕ್ತ ಎಂದಿದೆ.

ಸಂಸದ ಜಿ.ಎಸ್.ಬಸವರಾಜ್  ಕಾಮಗಾರಿ ಬಗ್ಗೆ ಸ್ಪಷ್ಟ ಮಾಹಿತಿಗಳನ್ನು ಸೋಶಿಯಲ್ ಆಡಿಟ್ ಮೂಲಕ ಬಹಿರಂಗಗೊಳಿಸುವಂತೆ ಡಿಸಿ, ನಗರಪಾಲಿಕೆ ಆಯುಕ್ತ, ಟೂಡಾ ಆಯುಕ್ತ, ರಾಷ್ಟ್ರೀಯ ಹೆದ್ದಾರಿ ಎಇಇ ಅವರಿಗೆ ಪತ್ರ ಬರೆದು ವಾರ ಕಳೆದರೂ ಉತ್ತರಿಸಿಯೇ ಇಲ್ಲ. ಇದೊಂದು ನಾಚಿಗೇಡಿನ ವಿಷಯ. ಶಾಸಕರ ಮಾತು ಕೇಳದಿದ್ದ ಪಕ್ಷದಲ್ಲಿ ನ್ಯಾಯಾಲಯ ಹೋರಾಟಕ್ಕೆ ಸಿದ್ಧರಾಗೋಣ. ನಾವೆಲ್ಲರು ನಿಮ್ಮಂದಿಗೆ ಕೈಜೋಡಿಸುತ್ತೇವೆ ಎಂದು ಸಲಹೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.