ತುಮಕೂರು: ಲೋಕಸಭೆ ಕ್ಷೇತ್ರದ ಅಭ್ಯರ್ಥಿಯನ್ನು ಎಲ್ಲರಿಗಿಂತ ಮೊದಲೇ ಪ್ರಕಟಿಸಲಾಗುವುದು ಎಂದು ಹೇಳುತ್ತಲೇ ಬಂದಿದ್ದ ಬಿಜೆಪಿ, ತುಮಕೂರು ಕ್ಷೇತ್ರದಲ್ಲಿ ತನ್ನ ‘ಹೋರಾಟಗಾರ’ ಯಾರು ಎಂಬುದನ್ನು ಹೇಳಲು ಸಾಧ್ಯವಾಗಿಲ್ಲ. ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದರೂ ಗೊಂದಲ ಮುಂದುವರಿದಿದೆ.
ಕಾಂಗ್ರೆಸ್‌ನಿಂದ ಎಸ್.ಪಿ.ಮುದ್ದಹನುಮೇಗೌಡ, ಜೆಡಿಎಸ್‌ನಿಂದ ಆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎ.ಕೃಷ್ಣಪ್ಪ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದಾರೆ. ಈ ಎರಡು ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿ ಅಖಾಡಕ್ಕೆ ವೇದಿಕೆ ಸಿದ್ಧಪಡಿಸಿಕೊಂಡಿವೆ.
ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲು ಒಂದು ವಾರವಷ್ಟೇ ಬಾಕಿ ಉಳಿದಿದ್ದು ಅಭ್ಯರ್ಥಿ ಆಯ್ಕೆಗೆ ಬಿಜೆಪಿ ಮುಖಂಡರು ಕಸರತ್ತು ನಡೆಸಿದ್ದಾರೆ. ಪಕ್ಷದ ವರಿಷ್ಠರಿಗೆ ತುಮಕೂರು ಕ್ಷೇತ್ರ ತಲೆನೋವಾಗಿ ಪರಿಣಮಿಸಿದೆ. ಯಾರಿಗೆ ಟಿಕೆಟ್ ನೀಡಬೇಕು ಎಂಬ ಗೊಂದಲದಲ್ಲಿ ಇದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿಯ ಒತ್ತಡ ಹಾಕುತ್ತಿರುವುದು ಬಿಡಿಸಲಾಗದ ಕಗ್ಗಂಟಾಗಿದೆ.
ಬಿಜೆಪಿ ಸಂಸದ ಜಿ.ಎಸ್.ಬಸವರಾಜು ಅವರಿಗೆ ಟಿಕೆಟ್ ಕೊಡಿಸಲು ಬಿ.ಎಸ್.ಯಡಿಯೂರಪ್ಪ ತೀವ್ರ ಪ್ರಯತ್ನದಲ್ಲಿ ತೊಡಗಿದ್ದಾರೆ. ಬಸವರಾಜು ಅವರಿಗೆ ಟಿಕೆಟ್ ನೀಡುವುದಕ್ಕೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ, ಮುಖಂಡ ಅನಂತ ಕುಮಾರ್ ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಸ್ಥಳೀಯವಾಗಿಯೂ ವಿರೋಧ ವ್ಯಕ್ತವಾಗಿತ್ತು.
ದಿನಗಳು ಕಳೆದಂತೆ ಈ ವಿರೋಧ ಶಮನಗೊಂಡಿದ್ದು, ಅನಂತಕುಮಾರ್ ಸೇರಿದಂತೆ ರಾಜ್ಯ ನಾಯಕರು ಒಲವು ತೋರುತ್ತಿರುವುದು ಬಸವರಾಜು ಅವರಿಗೆ ಆಶಾವಾದ ಮೂಡಿಸಿದೆ. ಇತ್ತೀಚಿನ ಬೆಳವಣಿಗೆ ಗಮನಿಸಿದರೆ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆಗಳು ಗೋಚರಿಸುತ್ತಿವೆ.
ಮೊನ್ನೆ ಬೆಂಗಳೂರಿಗೆ ಬಂದಿದ್ದ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರನ್ನು ಯಡಿಯೂರಪ್ಪ ಭೇಟಿ ಮಾಡಿ ಬಸವರಾಜು ಅವರಿಗೆ ಟಿಕೆಟ್ ನೀಡುವಂತೆ ಕೋರಿದ್ದಾರೆ. ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜತೆಗೆ ಜಿಲ್ಲಾ ಘಟಕದ ಅಧ್ಯಕ್ಷ, ಶಾಸಕ ಬಿ.ಸುರೇಶ್‌ಗೌಡ ಅವರನ್ನೂ ಕರೆದುಕೊಂಡು ಹೋಗಿ ಟಿಕೆಟ್ ಕೊಡುವಂತೆ ಕೇಳಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಂತರ ಬಸವರಾಜು ಅಮಾನತು ಆದೇಶವನ್ನು ಹಿಂಪಡೆದು, ಟಿಕೆಟ್ ನೀಡಲಾಗುತ್ತದೆ. ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಬಿ.ನಂದೀಶ್ ಆರ್ಎಸ್ಎಸ್ ಮುಖಂಡರ ಮೂಲಕ ಟಿಕೆಟ್ ಪಡೆಯಲು ಒತ್ತಡ ಹಾಕುತ್ತಿದ್ದಾರೆ. ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರೊಬ್ಬರನ್ನು ಹೊರತುಪಡಿಸಿದರೆ ಪಕ್ಷದ ಉಳಿದ ನಾಯಕರು ಬಸವರಾಜು ಅವರಿಗೆ ಟಿಕೆಟ್ ನೀಡಲು ವಿರೋಧ ವ್ಯಕ್ತಪಡಿಸುತ್ತಿಲ್ಲ. ಹಾಗಾಗಿ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿವೆ. ಮುಂದಿನ ಪಟ್ಟಿಯಲ್ಲಿ ಬಸವರಾಜು ಹೆಸರು ಸೇರ್ಪಡೆಯಾಗಲಿದೆ. ಮಾಜಿ ಸಚಿವ ಎಸ್.ಶಿವಣ್ಣ ಪ್ರಯತ್ನಿಸಿದರೂ ಪಕ್ಷದ ಮುಖಂಡರು ಒಲವು ತೋರಿಲ್ಲ ಎಂದು ಹೇಳಲಾಗುತ್ತಿದೆ.
ಮತ್ತೆ ಎದುರಾಳಿ
ಕಳೆದ ಬಾರಿ ಬಸವರಾಜು ಎದುರು ಪರಾಭವಗೊಂಡಿದ್ದ ಮುದ್ದಹನುಮೇಗೌಡ ಮತ್ತೊಮ್ಮೆ ಎದುರಾಳಿಯಾಗಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮುದ್ದಹನುಮೇಗೌಡ ಈ ಸಲ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಸೋತ ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕುಣಿಗಲ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದರು. ಜೆಡಿಎಸ್ ಬಿ ಫಾರಂ ಕೊಟ್ಟು ಕೊನೆ ಗಳಿಗೆಯಲ್ಲಿ ಸಿ ಫಾರಂ ನೀಡುವ ಮೂಲಕ ಟಿಕೆಟ್ ತಪ್ಪಿಸಿತ್ತು. ಇದರಿಂದ ಜೆಡಿಎಸ್ ತೊರೆದು ಮರಳಿ ಕಾಂಗ್ರೆಸ್ ಸೇರಿದ್ದರು. ಗೌಡರ ಜತೆಗೆ ಸಚಿವ ಟಿ.ಬಿ.ಜಯಚಂದ್ರ ಪುತ್ರ ಸಂತೋಷ್ ಜಯಚಂದ್ರ ಹಾಗೂ ಶಾಸಕ ರಾಜಣ್ಣ ಪುತ್ರ ಕೆ.ಎನ್.ರಾಜೇಂದ್ರ ಟಿಕೆಟ್‌ಗೆ ಪ್ರಯತ್ನ ನಡೆಸಿದ್ದರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಪ್ರಯತ್ನದ ಫಲವಾಗಿ ಮುದ್ದಹನುಮೇಗೌಡರಿಗೆ ಟಿಕೆಟ್ ಸಿಕ್ಕಿದೆ.
ಜೆಡಿಎಸ್‌ಗೆ ಹೊಸಬರು
ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎ.ಕೃಷ್ಣಪ್ಪ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದಾರೆ. ಜೆಡಿಎಸ್‌ನಲ್ಲಿ ಸಾಕಷ್ಟು ಹೆಸರು ಹರಿದಾಡಿದರೂ ಕೊನೆಗೆ ಕೃಷ್ಣಪ್ಪ ಹೆಸರು ಅಂತಿಮಗೊಂಡಿದೆ.ಜಿಲ್ಲೆಗೆ ಹೊಸಬರಾಗಿದ್ದು, ಇಲ್ಲಿನ ರಾಜಕೀಯ ವ್ಯವಸ್ಥೆಗೆ ಹೊಂದಿಕೊಂಡು ಚುನಾವಣೆ ಎದುರಿಸಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.