ADVERTISEMENT

ಬಿಜೆಪಿ ಭಿನ್ನಮತ ಶಮನಕ್ಕೆ ವರಿಷ್ಠರ ಯತ್ನ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 6:48 IST
Last Updated 19 ಮಾರ್ಚ್ 2014, 6:48 IST

ತುಮಕೂರು: ಬಿಜೆಪಿ ಭಿನ್ನಮತ ಶಮನಕ್ಕೆ ಪಕ್ಷದ ವರಿಷ್ಠರು ಮುಂದಾಗಿದ್ದು, ಎಲ್ಲರನ್ನೂ ಒಗ್ಗೂಡಿಸಲು ರಾಜ್ಯ ನಾಯಕರು ನಗರಕ್ಕೆ ಬರಲಿದ್ದಾರೆ. ಪಕ್ಷದ ಅಭ್ಯರ್ಥಿ ಜಿ.ಎಸ್‌.ಬಸವರಾಜು ಪರ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡು­ವಂತೆ ಮನವೊಲಿಕೆಗೆ ವೇದಿಕೆ ಸಿದ್ಧವಾಗಿದೆ.
ಬಿಜೆಪಿ ರಾಜ್ಯ ಸಂಘಟನಾ ಕಾರ್ಯ­ದರ್ಶಿ ಸಂತೋಷ್‌, ಮಾಜಿ ಮುಖ್ಯ­ಮಂತ್ರಿ ಬಿ.ಎಸ್‌.­ಯಡಿ­ಯೂರಪ್ಪ ಇದೇ ಗುರುವಾರ ನಗರಕ್ಕೆ ಭೇಟಿ ನೀಡ­ಲಿದ್ದು, ಎರಡೂ ಬಣಗಳನ್ನು ಒಟ್ಟಿಗೆ ಸೇರಿಸಿ ಮಾತನಾಡಲಿದ್ದಾರೆಂದು ಪಕ್ಷದ ಮೂಲಗಳು ತಿಳಿಸಿವೆ.

ಜಿ.ಎಸ್.ಬಸವರಾಜು ಅವರಿಗೆ ಟಿಕೆಟ್‌ ನೀಡಲು ಜಿಲ್ಲಾ ಮಟ್ಟದ ಮುಖಂಡರಿಂದ ತೀವ್ರ ವಿರೋಧ ವ್ಯಕ್ತ­ವಾಗಿದ್ದರೂ ಬಿ.ಎಸ್‌. ಯಡಿಯೂರಪ್ಪ ಹಠಕ್ಕೆ ಬಿದ್ದು ಬಸವರಾಜುಗೆ ಟಿಕೆಟ್‌ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಎರಡು ಗುಂಪುಗಳ ನಡುವಿನ ಅಂತರ ಇನ್ನೂ ಕಡಿಮೆ ಆಗಿಲ್ಲ. ಇದನ್ನು ಸರಿಪಡಿಸುವಂತೆ ಬಸವರಾಜು ಅವರು ವರಿಷ್ಠರ ಮೊರೆ ಹೋಗಿದ್ದಾರೆ ಎನ್ನಲಾಗಿದೆ.

ಮಾಜಿ ಶಾಸಕ ಎಸ್‌.ಶಿವಣ್ಣ, ಪ್ರಧಾನ ಕಾರ್ಯದರ್ಶಿ ಎಂ.ಬಿ.­ನಂದೀಶ್‌ ಮತ್ತಿತರರು ಜಿ.ಎಸ್‌.­ಬಸವ­ರಾಜು ವಿರೋಧಿ ಗುಂಪಿನಲ್ಲಿ ಗುರುತಿಸಿ­ಕೊಂಡಿದ್ದರು. ಈಚೆಗೆ ನಡೆದ ಬಿಜೆಪಿ ಹಿಂದುಳಿದ ವರ್ಗದವರ ಸಮಾವೇಶಕ್ಕೂ ಬಸವರಾಜು ಅವರಿಗೆ ಆಹ್ವಾನ ನೀಡಿರ­ಲಿಲ್ಲ. ಬಸವರಾಜು ಸಹ ಸಮಾವೇಶಕ್ಕೆ ಹೋಗಿರಲಿಲ್ಲ. ಅಲ್ಲದೆ ಬಸವರಾಜು ಜೊತೆ ಕೆಜೆಪಿಗೆ ಹೋಗಿದ್ದ ರವಿ ಹೆಬ್ಬಾಕ ಮುಂತಾದವರ ಗುಂಪು ಪ್ರತ್ಯೇಕತೆ ಕಾಯ್ದುಕೊಂಡಿತ್ತು.

ಆದರೆ ಮೂಲ ಬಿಜೆಪಿ ಕಾರ್ಯ­ಕರ್ತರು ಬಸವರಾಜು ಅವರೊಂದಿಗೆ ಕಾಣಿಸಿಕೊಳ್ಳುತ್ತಿಲ್ಲ. ಈ ಒಳಬೇಗುದಿಗೆ ಅಂತ್ಯ ಹಾಡಲು ಪಕ್ಷದ ವರಿಷ್ಠರು ಮುಂದಾಗಿದ್ದಾರೆ. ಮಾಜಿ ಶಾಸಕ ಬಿ.ಸಿ.ನಾಗೇಶ್‌ ಈಗಾಗಲೇ ಜಿ.ಎಸ್‌.­ಬಸವರಾಜು ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ.

‘ಮನೆಗೆ ಹೋಗಿ ಕರೆಯುತ್ತೇನೆ’

ತುಮಕೂರು: ‘ಮಾಜಿ ಶಾಸಕ ಎಸ್‌.ಶಿವಣ್ಣ ಸೇರಿದಂತೆ ಬಿಜೆಪಿ ನಾಯಕರ ಮನೆಗೆ ಹೋಗಿ ಅವರ ಸಹಕಾರ ಕೋರಲು ನಾನು ಸಿದ್ಧನಿದ್ದೇನೆ. ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ’ ಎಂದು ಸಂಸದ ಜಿ.ಎಸ್.ಬಸವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಪಕ್ಷದ ಕಚೇರಿಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರು ಕಾರ್ಯಕರ್ತರ ಸಭೆ ಕರೆಯಲಿದ್ದು, ಅಲ್ಲಿ ಹೋಗಿ ಎಲ್ಲರೊಂದಿಗೆ ಮಾತನಾಡುತ್ತೇನೆ. ಯಾವುದೇ ಸಮಸ್ಯೆ ಇದ್ದರೂ ಬಗೆಹರಿಸಿ­ಕೊಳ್ಳು­ತ್ತೇನೆ. ಎಲ್ಲವೂ ಒಂದೆರಡು ದಿನದಲ್ಲಿ ಬಗೆಹರಿಯ­ಲಿದ್ದು, ಮಾ. 24ರಂದು ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT