ತೋವಿನಕೆರೆ: ಇಲ್ಲಿಗೆ ಸಮೀಪದ ತುಮಕೂರು ತಾಲ್ಲೂಕು ಕೋರ ಹೋಬಳಿಯ ನಂದಿಹಳ್ಳಿ, ಓದೇಕಾರ್ ಫಾರಂನ ಮಾವಿನ ತೋಟಕ್ಕೆ ಬೆಂಕಿ ಬಿದ್ದು ಸುಮಾರು 15 ಎಕರೆ ಮಾವಿನ ತೋಟ, ಸಪೋಟ ಗಿಡಗಳು ಸುಟ್ಟುಹೋಗಿರುವ ಘಟನೆ ಗುರುವಾರ ಸಂಜೆ ನಡೆದಿದೆ.ಸಂಪೂರ್ಣ ನೈಸರ್ಗಿಕ ಕೃಷಿ ತೋಟವಾಗಿದ್ದು, ಸಪೋಟ ಗಿಡಗಳು ಸಂಪೂರ್ಣ ನಾಶವಾಗಿದ್ದು, ಫಸಲು ಬಿಡುವ ಹೆಚ್ಚಿನ ಮಾವಿನ ಮರಗಳು ಬೆಂಕಿಗೆ ಆಹುತಿಯಾಗಿವೆ.
ಗುರುವಾರ ಸಂಜೆ ತೋಟದ ಮಾಲೀಕರಾದ ಕೆ.ಆರ್.ನೀಲಕಂಠಮೂರ್ತಿ ಬೆಂಕಿಯನ್ನು ಕಂಡು ಕೃಷಿ ಕಾರ್ಮಿಕರ ಜೊತೆ ಸೇರಿ ಬೆಂಕಿ ನಂದಿಸಿದ್ದಾರೆ. ಪಕ್ಕದಲ್ಲೇ ಸುಮಾರು 20 ಎಕರೆಗೂ ಹೆಚ್ಚಿನ ಶೂನ್ಯ ಕೃಷಿಯ ತೆಂಗಿನ ತೋಟವಿದ್ದು, ಅದಕ್ಕೆ ಯಾವುದೇ ಅನಾಹುತ ಆಗಿಲ್ಲ. ಕಳೆದ ಎರಡು ವರ್ಷಗಳ ಹಿಂದೆ ತೆಂಗಿನ ತೋಟಕ್ಕೆ ಬೆಂಕಿ ಬಿದ್ದು, ಹೆಚ್ಚಿನ ನಷ್ಟ ಉಂಟಾಗಿತ್ತು. ಇದೀಗ ಮಾವಿನ ತೋಟ ಬೆಂಕಿಗೆ ಆಹುತಿಯಾಗಿದೆ ಎಂದು ಫಾರಂ ಮಾಲೀಕರು ತಿಳಿಸಿದ್ದಾರೆ.
ತೆಂಗಿನ ತೋಟಕ್ಕೆ ಬೆಂಕಿ
ತಿಪಟೂರು: ತಾಲ್ಲೂಕಿನ ಬೆನ್ನಾಯಕನಹಳ್ಳಿ ಬಂಡೆ ಬಳಿ ಈಚೆಗೆ ತಗುಲಿದ ಆಕಸ್ಮಿಕ ಬೆಂಕಿಗೆ ತೆಂಗಿನ ತೋಟ ಆಹುತಿಯಾಗಿದೆ.ರೈತ ಸಂಘದ ಮುಖಂಡ ಚಿಕ್ಕಮಾರ್ಪನಹಳ್ಳಿ ಮಹಾಲಿಂಗಪ್ಪ ಎಂಬುವರ ತೋಟದಲ್ಲಿ ಫಸಲಿಗೆ ಬಂದಿದ್ದ ಸುಮಾರು 40ಕ್ಕೂ ತೆಂಗಿನ ಮರಗಳು ಬೆಂಕಿಯಿಂದ ಧಕ್ಕೆಯಾಗಿವೆ. ತೋಟದಲ್ಲಿ ಅಳವಡಿಸಿದ್ದ ಹನಿ ನೀರಾವರಿ ಪೈಪ್, ಉಪಕರಣ ಸಹ ಸುಟ್ಟಿವೆ. ತೆಂಗಿನ ಗರಿ, ಮಟ್ಟೆ ಮತ್ತಿತರರ ಕೃಷಿ ತ್ಯಾಜ್ಯ ಬಳಸಿ ಸಾವಯವ ಪದ್ಧತಿ ಅನುಸರಿಸಿದ್ದ ಈ ತೋಟಕ್ಕೆ ಬೆಂಕಿ ತಗುಲಿದ್ದರಿಂದ ಅಪಾರ ನಷ್ಟ ಉಂಟಾಗಿದೆ.
ತೆಂಗಿನಮರ ಭಸ್ಮ
ಹುಳಿಯಾರು: ತೆಂಗಿನತೋಟಕ್ಕೆ ಬೆಂಕಿ ಬಿದ್ದು 4 ಫಲಭರಿತ ಮರಗಳು ಭಸ್ಮವಾದ ಘಟನೆ ಹೋಬಳಿಯ ಕೆಂಕೆರೆ ಗ್ರಾಮದ ಪುರದಮಠದ ಬಳಿ ಗುರುವಾರ ಜರುಗಿದೆ.ಕೆಂಕೆರೆಯ ಸಣ್ಣಹನುಮಂತಪ್ಪ ಅವರಿಗೆ ತೋಟ ಸೇರಿದ್ದು ವಿದ್ಯುತ್ ಶಾರ್ಟ್ ಸಕ್ಯೂಟ್‌ನಿಂದ ಈ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.
ಘಟನೆ ಸ್ಥಳಕ್ಕೆ ಕಂದಾಯ ತನಿಖಾಧಿಕಾರಿ ಬಸವರಾಜು, ಗ್ರಾಮಲೆಕ್ಕಿಗ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲಿಸಿದರು.
ಮನೆಗೆ ಬೆಂಕಿ: ಭಸ್ಮ
ಗುಬ್ಬಿ: ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಭಸ್ಮವಾದ ಘಟನೆ ತಾಲ್ಲೂಕಿನ ಅರದಗೆರೆ ಗೊಲ್ಲರಹಟ್ಟಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ. ಅಂದಾಜು ಒಂದು ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎನ್ನಲಾಗಿದೆ.ಗ್ರಾಮದ ಜುಂಜಯ್ಯ ಅವರ ಮನೆಗೆ ಬೆಂಕಿ ತಗುಲಿದ್ದು, ಮನೆಯಲ್ಲಿದ್ದ 3 ಸಾವಿರ ಕೊಬ್ಬರಿ ಹಾಗೂ 2 ಸಾವಿರ ತೆಂಗಿನಕಾಯಿ ಪೂರ್ಣ ಭಸ್ಮವಾಗಿವೆ. ಒಂದು ಸೈಕಲ್ ಸೇರಿದಂತೆ ಗೃಹೋಪಯೋಗಿ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಚೇಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.