ADVERTISEMENT

ಬೆಳೆಗೆ ಕನಿಷ್ಠ-ಗರಿಷ್ಠ ಬೆಲೆ ನಿಗದಿಯಾಗಲಿ: ಉದಾಸಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 6:20 IST
Last Updated 22 ಫೆಬ್ರುವರಿ 2011, 6:20 IST

ತುಮಕೂರು: ರೈತರ ಬೆಳೆಗಳಿಗೆ ನ್ಯಾಯ ಸಮ್ಮತ ಬೆಲೆ ಸಿಗಬೇಕಾದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೂಡಿಯೇ ಕನಿಷ್ಠ ಮತ್ತು ಗರಿಷ್ಠ ಬೆಲೆ ನಿಗದಿಪಡಿಸುವ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಅಭಿಪ್ರಾಯಪಟ್ಟರು.ಸಿದ್ದಗಂಗಾ ಮಠದಲ್ಲಿ ಸೋಮವಾರ ಆರಂಭವಾದ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ಬೆಳೆದ ಪ್ರತಿಯೊಂದು ಬೆಳೆಗೂ ಕನಿಷ್ಠ ಮತ್ತು ಗರಿಷ್ಠ ಬೆಲೆ ನಿಗದಿಪಡಿಸುವ ವ್ಯವಸ್ಥೆ ಜಾರಿಗೆ ಬರಬೇಕು. ಇದು ರಾಜ್ಯ ಸರ್ಕಾರವೊಂದರಿಂದಲೇ ಮಾತ್ರ ಆಗದು. ಕೇಂದ್ರ ಸರ್ಕಾರವೂ ಇದಕ್ಕೆ ಕೈಜೋಡಿಸಬೇಕು. ಬೆಲೆ ಕುಸಿದಾಗ ಮತ್ತು ಬೆಲೆ ಗಗನಕ್ಕೆ ಏರಿದಾಗ ಸರ್ಕಾರಗಳು ಮಧ್ಯಪ್ರವೇಶ ಮಾಡಬೇಕು. ಇಂತಹ ಚಿಂತನೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ತಲೆಯಲ್ಲಿದೆ. ಹೀಗಾಗಿಯೇ ದೇಶದಲ್ಲಿ ಯಾವುದೇ ರಾಜ್ಯವೂ ಮತ್ತು ಕೇಂದ್ರವೂ ಚಿಂತನೆ ಮಾಡಿರದ ಕೃಷಿಗೆ ಪ್ರತ್ಯೇಕ ಬಜೆಟ್ ಮಂಡಿಸುವ ನಿರ್ಧಾರವನ್ನು ಮುಖ್ಯಮಂತ್ರಿ ತೆಗೆದುಕೊಂಡಿದ್ದಾರೆ.
 
ಇದು ಇಡೀ ದೇಶದಲ್ಲೇ ಹೊಸ ಪ್ರಯೋಗ. ಪರ-ವಿರೋಧ ಟೀಕೆ, ಟಿಪ್ಪಣಿ ಇದ್ದೇ ಇರುತ್ತದೆ. ಅದಕ್ಕೆ ನಾವು ಉತ್ತರ ನೀಡಲು ಹೋಗುವುದಿಲ್ಲ. ನಾವು ಮಾತನಾಡುವುದಕ್ಕಿಂತ ಮಾಡಿರುವ ಅಭಿವೃದ್ಧಿ ಕೆಲಸಗಳು ಮಾತನಾಡಬೇಕೆಂಬುದು ನಮ್ಮ ಸರ್ಕಾರದ ನಿಲುವು ಎಂದು ಹೇಳಿದರು.ಅಕ್ಷರ ಬಾರದ ಹೆಬ್ಬೆಟ್ಟಿನವರನ್ನು ಮಾತ್ರ ಅನಕ್ಷರಸ್ಥರು ಎನ್ನಲಾಗುತ್ತಿತ್ತು. ಆದರೆ, ಇನ್ನುಮುಂದೆ ಅಂತರ್ಜಾಲ ಬಳಕೆ ಗೊತ್ತಿಲ್ಲದವರನ್ನು ಅನಕ್ಷರಸ್ಥರು ಎನ್ನುವ ಕಾಲ ಬರಲಿದೆ. ಹೀಗಾಗಿ ಕೃಷಿಕರು ಕೂಡ ವಿದ್ಯಾವಂತರಾಗಬೇಕು.

ಅಂತರ್ಜಾಲದಿಂದ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಬೇಕಾದ ಭರಪೂರ ಮಾಹಿತಿ ಲಭ್ಯವಾಗುತ್ತದೆ. ತಂತ್ರಜ್ಞಾನ, ಮಾರುಕಟ್ಟೆ ಜ್ಞಾನ, ಹೊಸ ಸಂಶೋಧನೆಗಳ ಬಗ್ಗೆ ಮಾಹಿತಿ ಪಡೆಯಬಹುದು. ರೈತರು ಕೂಡ ಈ ನಿಟ್ಟಿನಲ್ಲಿ ಕಂಪ್ಯೂಟರ್ ಸಾಕ್ಷರತೆ ಸಾಧಿಸಬೇಕು ಎಂದು ಸಲಹೆ ನೀಡಿದರು.ನಾಡಿನ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಿದ್ದಗಂಗ ಸ್ವಾಮೀಜಿ ಕಳೆದ 43 ವರ್ಷಗಳಿಂದಲೂ ಕೃಷಿ ವಸ್ತುಪ್ರದರ್ಶನ ನಡೆಸಿಕೊಂಡು ಬರುತ್ತಿರುವುದು. ಜಾತಿ-ಧರ್ಮ ಭೇದವಿಲ್ಲದೆ ಎಲ್ಲ ವರ್ಗದ ಮಕ್ಕಳಿಗೆ ಸಂಸ್ಕಾರವುಳ್ಳ ಶಿಕ್ಷಣ ನೀಡುತ್ತಿರುವುದು ಸುತ್ಯಾರ್ಹ ಎಂದು ಶ್ಲಾಘಿಸಿದರು.

ಡಾ.ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಬಿ.ಸುರೇಶಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಡಾ.ಬಿ.ಎನ್.ರವಿ, ಮೇಯರ್ ಯಶೋಧಾ ಗಂಗಪ್ಪ, ಜಿ.ಪಂ. ಸಿಇಒ ಶಿವಯೋಗಿ ಸಿ.ಕಳಸದ, ಜಿ.ಪಂ. ಸದಸ್ಯೆ ರಾಧಾ ಕೆ.ದೇವರಾಜು, ತಾ.ಪಂ. ಸದಸ್ಯ ಎಂ.ಬಿ.ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.