ADVERTISEMENT

ಬೇಕಾಬಿಟ್ಟಿ ಬಿ.ಎಚ್.ರಸ್ತೆ!

ಸಿ.ಕೆ.ಮಹೇಂದ್ರ
Published 8 ಜೂನ್ 2011, 8:40 IST
Last Updated 8 ಜೂನ್ 2011, 8:40 IST
ಬೇಕಾಬಿಟ್ಟಿ ಬಿ.ಎಚ್.ರಸ್ತೆ!
ಬೇಕಾಬಿಟ್ಟಿ ಬಿ.ಎಚ್.ರಸ್ತೆ!   

ತುಮಕೂರು: ಅಬ್ಬಾ ಇದಾ ಹೆದ್ದಾರಿ! ನಗರ ಸೀಳಿ ಹೋಗಿರುವ ಬಿ.ಎಚ್.ರಸ್ತೆ (ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ-206) ಕರ್ಮಕಾಂಡ ನಿಧಾನವಾಗಿ ಬೆಳಕಿಗೆ ಬರತೊಡಗಿದೆ. ಹೆದ್ದಾರಿ ಅಂದಚೆಂದದ ಕನಸು ಕಂಡವರಿಗೆ ನಿರಾಸೆ ಕಟ್ಟಿಟ್ಟ ಬುತ್ತಿಯಾಗಲಿದೆ.

ಮುಂದೆ ಹೆದ್ದಾರಿ ಸರಿಯಾಗಬಹುದು ಎಂದುಕೊಂಡು ಇಲ್ಲಿಯವರೆಗೂ ಹೆದ್ದಾರಿಯ ಎಲ್ಲ ಅದ್ವಾನ ಸಹಿಸಿಕೊಂಡು ನಾಗರಿಕರು ಹೋಗುತ್ತಿದ್ದರು. ಆದರೆ ಹೆದ್ದಾರಿ ಸಮಸ್ಯೆಗಳಿಗೆ ಫುಲ್‌ಸ್ಟಾಪ್ ಹಾಕಬೇಕಾದವರೇ ಮೆಲ್ಲಗೆ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡು `ಓಡುವ~ ತರಾತುರಿಯಲ್ಲಿದ್ದಾರೆ.

ಹೀಗಾಗಿ ಮುಂದೆಯೂ ಹೆದ್ದಾರಿ ಎಲ್ಲೆಂದರಲ್ಲಿ ದಾಟಬೇಕು. ಪಾದಚಾರಿ ಮಾರ್ಗವಿಲ್ಲದೆ ವಾಹನಗಳ ನಡುವೆ ಸಾಹಸಪಟ್ಟು ನಡೆಯಬೇಕು. ಚರಂಡಿ ಇಲ್ಲದಿದ್ದರೂ ಮಳೆ ನೀರು ಸಾಗಬೇಕು. ಪ್ರಾಣ ಪಣಕ್ಕಿಟ್ಟು ಹೆದ್ದಾರಿಯಲ್ಲಿ ಸಾಗಬೇಕಿದೆ.

ಮೂರು ವರ್ಷಗಳಿಂದ ಆಮೆಗತಿಗೂ ನಿಧಾನವಾಗಿ ಬಟವಾಡಿ ಸರ್ಕಲ್- ಗುಬ್ಬಿಗೇಟ್ ನಡುವಿನ 6 ಕಿ.ಮೀ. ಹೆದ್ದಾರಿ ಕಾಮಗಾರಿ ಸಾಗುತ್ತಿದೆ. ಹೆದ್ದಾರಿಗೆ ಬೇಕಾದ ಎಲ್ಲ ಮೂಲಸೌಲಭ್ಯ ಕಲ್ಪಿಸುವುದಾಗಿ ಹೇಳುತ್ತಿದ್ದ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳು ಈಗ ಇದ್ದಕ್ಕಿದ್ದಂತೆ ತಮ್ಮ ಜವಾಬ್ದಾರಿಯಿಂದ ಜಾರತೊಡಗಿವೆ.

ಈಗ ರಸ್ತೆ ಎಲ್ಲಿಯವರೆಗೂ ತೆರವುಗೊಂಡಿದೆಯೋ ಅಲ್ಲಿವರೆಗೆ ಏನೆಲ್ಲ ಸಾಧ್ಯವೋ ಅಷ್ಟನ್ನು ಮಾತ್ರ ಮಾಡುವ ಇರಾದೆ ಹೊಂದಿವೆ. ರಸ್ತೆ ಕಾಮಗಾರಿ ವೇಳೆ ಅಕ್ಕಪಕ್ಕ ಬಿದ್ದಿರುವ ಅವಶೇಷಗಳು, ಉಳಿಕೆ ಸಾಮಾಗ್ರಿಗಳು, ಗುಂಡಿಗಳನ್ನು ಮಚ್ಚಿ ಒಂದಿಷ್ಟು `ಬಣ್ಣ~ ಬಳಿದು ಸುಂದರವಾಗಿ ಮಾಡಿ ಕೈತೊಳೆದುಕೊಳ್ಳುವ ಆತುರದಲ್ಲಿ ಇರುವುದು ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಮಹಾನಗರ ಪಾಲಿಕೆ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ (ಟುಡ) ಒಂದೊಂದರ ಮೇಲೆ ಒಂದು ಬೆಟ್ಟು ತೋರಿಸುತ್ತಾ ಹೆದ್ದಾರಿಗೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿವೆ. `ಕೊಟ್ಟೋನು ಕೋಡಂಗಿ... ಈಸ್ಕೊಂಡೋನು ಈರಭದ್ರ~ ಎಂಬಂತೆ ಹೆದ್ದಾರಿಗಾಗಿ ಭೂಮಿ ಕೊಟ್ಟವರು ಕೋಡಂಗಿಗಳಾಗಿದ್ದಾರೆ.

ಪಾಲಿಕೆ ಹಿಂದಿನ ಆಯುಕ್ತೆ ತುಳಸಿ ಮದ್ದಿನೇನಿ, ಜಿಲ್ಲಾಧಿಕಾರಿ, ಸ್ಥಳೀಯ ಶಾಸಕರು ಹೆದ್ದಾರಿಗೆ ಹೊಂದಿಕೊಂಡಿದ್ದ ಕಟ್ಟಡ ಮಾಲೀಕರ ಜೊತೆ ಮಾತನಾಡಿ ಹೆದ್ದಾರಿಗಾಗಿ ನೂರು ಅಡಿ ಜಾಗ ತೆರವುಗೊಳಿಸಲು ಯಶಸ್ವಿಯಾಗಿದ್ದರು. ಅದರಂತೆ ಕೆಲವೆಡೆ ನೂರು ಅಡಿ ಭೂಮಿ ಬಿಟ್ಟುಕೊಡಲಾಗಿದೆ. ಮತ್ತೆ ಕೆಲವು ಕಡೆ ಬಿಟ್ಟುಕೊಟ್ಟಿಲ್ಲ. ಭೂಮಿ ಬಿಡದವರಿಗೆ ಏನು ಮಾಡುವುದಿಲ್ಲ. ಮತ್ತೊಮ್ಮೆ ಒತ್ತುವರಿ ತೆರವು ಮಾಡದಿರಲು ತೀರ್ಮಾನಿಸಲಾಗಿದೆ ಎನ್ನುತ್ತವೆ ಪಾಲಿಕೆ ಮೂಲಗಳು.

ಸರ್ವೀಸ್ ರಸ್ತೆ ಇಲ್ಲ
ಸರ್ವೀಸ್ ರಸ್ತೆ ಮಾಡಲು ಪಾಲಿಕೆಯಿಂದ ಸಾಧ್ಯವಿಲ್ಲ. ಸರ್ವೀಸ್ ರಸ್ತೆ ನಿರ್ಮಿಸಬೇಕಾದರೆ ಮತ್ತೆ ತೆರವು ಕಾರ್ಯಾಚರಣೆ ಮಾಡಬೇಕು. ತೆರವು ಕಾರ್ಯಚರಣೆ ಮಾಡಿದರೆ ಜನರ ಪ್ರತಿರೋಧ ಎದುರಿಸಬೇಕು. ಈಗಿರುವಂತೆ ಜಾಗ ಇರುವ ಕಡೆ ಪಾರ್ಕಿಂಗ್ ಮಾಡುತ್ತೇವೆ. ಪಾದಚಾರಿ ಮಾರ್ಗ ಕೂಡ ಮಾಡಲು ಸಾಧ್ಯವಿಲ್ಲ. ಚರಂಡಿ ಜಾಗವನ್ನೇ ಜನರು ಪಾದಚಾರಿ ಮಾರ್ಗವಾಗಿ ಬಳಸಬೇಕು. ಈಗ ಜನರು ಓಡಾಡುತ್ತಿಲ್ಲವೇ ಎಂಬ ಮರುಪ್ರಶ್ನೆ ಪಾಲಿಕೆಯ ಉನ್ನತ ಅಧಿಕಾರಿಯದ್ದು.

ಪಾಲಿಕೆಗೆ ಬರುವ ಮುಖ್ಯಮಂತ್ರಿ ವಿಶೇಷ ಅನುದಾನ ನೂರು ಕೋಟಿಯಲ್ಲಿ ಸ್ವಲ್ಪ ಹಣ ಬಳಸಿ ಹೆದ್ದಾರಿಯ ವಿದ್ಯುದ್ದೀಕರಣ ಮಾಡಲಾಗುವುದು. ಸರ್ವೀಸ್ ರಸ್ತೆ ಮಾಡಲು ಸಾಧ್ಯವಿಲ್ಲ ಎಂದು  ಆಯುಕ್ತ ಅನುರಾಗ್ ತಿವಾರಿ `ಪ್ರಜಾವಾಣಿ~ಗೆ ತಿಳಿಸಿದರು.

ಈ ಎಲ್ಲ ಬೆಳವಣಿಗೆಗಳಿಗೆ ಕಳಸವಿಟ್ಟಂತೆ ಮೂರು ತಿಂಗಳ ಹಿಂದೆ ಏಕಾಏಕಿ ಪರಿಷ್ಕೃತ ನಗರ ವ್ಯಾಪಕ ಅಭಿವೃದ್ಧಿ ಯೋಜನೆಯಲ್ಲಿ (ಸಿಡಿಪಿ) ಬಟವಾಡಿಯಿಂದ ಶಿವಕುಮಾರಸ್ವಾಮಿ ವೃತ್ತದ ವರೆಗೆ 45 ಮೀಟರ್ ಅಗಲದ ರಸ್ತೆ ಹಾಗೂ ಶಿವಕುಮಾರಸ್ವಾಮಿ ವೃತ್ತದಿಂದ ಗುಬ್ಬಿ ಗೇಟ್ ಜಂಕ್ಷನ್ ವರೆಗೆ 36 ಮೀಟರ್ ಅಗಲದ ರಸ್ತೆಯನ್ನು 30 ಮೀಟರ್‌ಗೆ ಕಡಿತಗೊಳಿಸಲಾಗಿದೆ.

ಹೆದ್ದಾರಿಯ ಎರಡು ಕಡೆ 14 ಅಡಿ ಅಗಲದ ಸರ್ವೀಸ್ ರಸ್ತೆ ನಿರ್ಮಿಸಬೇಕು. ಸರ್ವೀಸ್ ರಸ್ತೆಯಿಂದ 20 ಅಡಿ ಸೆಟ್‌ಬ್ಯಾಕ್ ಬಿಡಬೇಕು. ಪಾದಚಾರಿ ಮಾರ್ಗ ನಿರ್ಮಿಸಬೇಕು. ಆದರೆ ಇವುಗಳನ್ನು ಮಾಡದೆ ಇರಲು ನಿರ್ಧರಿಸಲಾಗಿದೆ. ಹೆದ್ದಾರಿಯ ಕುರಿತು ಮೌನವಾಗಿದ್ದು ಬಿಡಲು `ಎಲ್ಲರೂ~ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಯೋಜನಾ ವೆಚ್ಚ ರೂ. 19.60 ಕೋಟಿಯಿಂದ 23 ಕೋಟಿಗೆ ಏರಿಕೆಯಾಗಿದ್ದರೂ `ಕಾಣದ ಕೈ~ ಹೆದ್ದಾರಿಯ ರೂಪುರೇಷೆ, ವಿಸ್ತರಣೆ ಮೇಲೆ ತನ್ನ ಬಿಗಿಮುಷ್ಠಿಯ ಹಿಡಿತಹೊಂದಿದ್ದು ಇಷ್ಟೆಲ್ಲ ಸಲ್ಲದ ಹೆಜ್ಜೆ ಇಡಲು ಕಾರಣ ಎಂಬ ಆರೋಪ ಕೇಳಿಬರುತ್ತಿವೆ. ಸಾಕಷ್ಟು ಕಡೆಗಳಲ್ಲಿ ಹಳೆ ಚರಂಡಿಗೆ ಸಿಮೆಂಟ್ ಪ್ಯಾಚ್‌ಮಾಡಿ ಬಿಲ್ ಮಾಡಿರುವ ಬಗ್ಗೆ ಟೀಕೆಗಳು ಸಾಮಾನ್ಯವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.