ADVERTISEMENT

ಬ್ಯಾಂಕ್‌ಗಳ ವಿರುದ್ಧ ಆರ್‌ಬಿಐಗೆ ದೂರು: ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 9:40 IST
Last Updated 3 ಜನವರಿ 2012, 9:40 IST

ತುಮಕೂರು: ರೈತರನ್ನು ನಿರ್ಲಕ್ಷ್ಯದಿಂದ ಕಾಣುತ್ತಿರುವ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ದೂರು ಸಲ್ಲಿಸುವ ಎಚ್ಚರಿಕೆಯನ್ನು ಸೋಮವಾರ ನಡೆದ ಜಿಲ್ಲಾ ಪಂಚಾಯತಿ ವಿಶೇಷ ಸಭೆಯಲ್ಲಿ ನೀಡಲಾಯಿತು.

ಗುಬ್ಬಿ ತಾಲ್ಲೂಕಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ವ್ಯವಸ್ಥಾಪಕರು ರೈತರನ್ನು ತುಚ್ಛವಾಗಿ ಕಾಣುತ್ತಿರುವ ಬಗ್ಗೆ ವ್ಯಾಪಕ ದೂರು ಕೇಳಿ ಬರುತ್ತಿವೆ. ಅಧಿಕಾರಿಗಳು ತಮ್ಮ ವರ್ತನೆ ಸರಿಪಡಿಸಿಕೊಳ್ಳದಿದ್ದರೆ ಸಭೆಯಲ್ಲಿ ನಿರ್ಣಯ ಕೈಗೊಂಡು ಆರ್‌ಬಿಐಗೆ ಕಳುಹಿಸಿಕೊಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಡಾ.ಬಿ.ಎನ್.ರವಿ ಎಚ್ಚರಿಸಿದರು.

ನಬಾರ್ಡ್ ನೆರವಿನೊಂದಿಗೆ ಪಶು ಸಂಗೋಪನಾ ಇಲಾಖೆ ಸಹಯೋಗದಲ್ಲಿ ಜಾರಿಯಾಗುವ ಹಲವು ಯೋಜನೆಗಳಿಗೆ ಬ್ಯಾಂಕ್ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಲೀಡ್ ಬ್ಯಾಂಕ್ ಮಾಹಿತಿ ಪ್ರಕಾರ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಯಾರಿಗೂ ಸಾಲ ಸಿಕ್ಕಿಲ್ಲ. ಕುಣಿಗಲ್, ತುಮಕೂರು, ಗುಬ್ಬಿ, ಪಾವಗಡ, ತಿಪಟೂರು ತಾಲ್ಲೂಕಿನಲ್ಲಿ ಫಲಾನುಭವಿಗಳ ಸಂಖ್ಯೆ ಎರಡಂಕಿ ದಾಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಚರ್ಚೆಯಲ್ಲಿ ಪಾಲ್ಗೊಂಡ ಸದಸ್ಯ ಉಮೇಶ್, ಡೇರಿಗಳಿಂದ ತ್ರಿಕೋನ ಒಪ್ಪಂದ ಮಾಡಿಸಿಕೊಂಡು ಬಂದ ನಂತರವೂ ಬ್ಯಾಂಕ್‌ಗಳು ಸಾಲ ಮಂಜೂರು ಮಾಡುತ್ತಿಲ್ಲ. ಡೇರಿ ಕಾರ್ಯದರ್ಶಿಗಳನ್ನು ಬ್ಯಾಂಕ್‌ಗಳಿಗೆ ಕಳುಹಿಸಿದರೆ `ಯಾರ‌್ರೀ ಕಳ್ಸಿದ್ದು, ಯಾಕ್ರೀ ಬಂದ್ರಿ~ ಎಂದು ಬೈದು ಕಳುಹಿಸುತ್ತಾರೆ. ಬ್ಯಾಂಕ್‌ಗಳು ತಮ್ಮ ಧೋರಣೆ ಬದಲಿಸಿಕೊಳ್ಳದಿದ್ದರೆ ಜಿಲ್ಲೆಯ ಎಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ರೈತರು ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸುವ ಕಾಲ ದೂರವಿಲ್ಲ ಎಂದು ಹೇಳಿದರು.

ಗುಬ್ಬಿ ತಾಲ್ಲೂಕು ಬ್ಯಾಂಕ್ ಅಧಿಕಾರಿಗಳ ವರ್ತನೆ ಪ್ರಸ್ತಾಪಿಸಿದ ಸದಸ್ಯ ಚಂದ್ರಶೇಖರ್, ಪಶು ಸಂಗೋಪನಾ ಇಲಾಖೆಯ ಕರಪತ್ರ ಹಿಡಿದು ಒಬ್ಬ ರೈತ ಬ್ಯಾಂಕ್ ಮ್ಯಾನೇಜರ್ ಬಳಿಗೆ ಹೋಗಿ ಸಾಲ ಕೇಳಿದ. `ಇದನ್ನು ಬ್ಯಾಂಕ್‌ನವರು ಮುದ್ರಿಸಿಲ್ಲ. ಸಾಲ ಬೇಕಿದ್ರೆ ಅನಿಮಲ್ ಹಸ್ಬೆಂಡರಿಯವರನ್ನೇ ಹೋಗಿ ಕೇಳು. ಈಗ ಮೊದಲು ಹೊರಗೆ ಹೋಗು. ಇಲ್ಲದಿದ್ರೆ ಸೆಕ್ಯುರಿಟಿ ಕರೆದು ಹೊರಗೆ ಹಾಕಿಸ್ತೀನಿ~ ಎಂದು ಮ್ಯಾನೇಜರ್ ಪ್ರತಿಕ್ರಿಯಿಸಿದರು. ಇವರು ಸಾಲ ಕೊಡದಿದ್ದರೆ ಬೇಡ, ರೈತರನ್ನು ಗೌರವದಿಂದ ಕಾಣಲು, ಕನಿಷ್ಠ ಸೌಜನ್ಯದಿಂದ ವರ್ತಿಸಲು ಏನು ಕಷ್ಟ? ಎಂದು ಖಾರವಾಗಿ ಪ್ರಶ್ನಿಸಿದರು.

ಸದಸ್ಯರ ಆಕ್ಷೇಪಗಳಿಗೆ ಉತ್ತರಿಸಿದ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಶ್ರೀನಿವಾಸ್, ಪ್ರತಿ 3 ತಿಂಗಳಿಗೊಮ್ಮೆ ತಾಲ್ಲೂಕು ಮಟ್ಟದಲ್ಲಿ ನಡೆಯುವ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಸಿಬ್ಬಂದಿ ವರ್ತನೆ ಕುರಿತ ದೂರುಗಳನ್ನು ಪರಿಹರಿಸಲಾಗುವುದು. ರಾಜ್ಯದಲ್ಲಿ ಪಶು ಸಂಗೋಪನೆ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ನಬಾರ್ಡ್‌ಗೆ ಕೇವಲ ರೂ. 5 ಕೋಟಿ ಬಿಡುಗಡೆ ಮಾಡಿತ್ತು. ಜಿಲ್ಲಾವಾರು ಗುರಿ ನಿಗದಿಪಡಿಸದೆ ಮೊದಲು ಬಂದವರಿಗೆ ಆದ್ಯತೆ ಎಂಬ ನಿಯಮದಡಿ ಸಬ್ಸಿಡಿ ಮಂಜೂರು ಮಾಡಿರುವುದರಿಂದ ಹಣ ಬಹುತೇಕ ಖಾಲಿಯಾಗಿದೆ. ಹೊಸದಾಗಿ ಸಾಲ ನೀಡುತ್ತಿಲ್ಲ ಎಂದು ಮಾಹಿತಿ ನೀಡಿದರು.

ನಂತರ ಮಾತನಾಡಿದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಯೋಗಿ ಚ.ಕಳಸದ, ಗುಬ್ಬಿ ತಾಲ್ಲೂಕಿನ ಬ್ಯಾಂಕ್ ಅಧಿಕಾರಿಗಳ ವರ್ತನೆ ಕುರಿತು ಅನೇಕ ದೂರುಗಳು ಬಂದಿವೆ. ಬ್ಯಾಂಕ್‌ಗೆ ಬರುವ ಎಲ್ಲರೂ ಸಾಲವನ್ನೇ ಕೇಳಿಕೊಂಡು ಬರುವುದಿಲ್ಲ. ಬಂದವರನ್ನು ಸೌಜನ್ಯದಿಂದ ಕಂಡು, ಸಮಸ್ಯೆ ಆಲಿಸಿ ಅಗತ್ಯ ಸಲಹೆ ನೀಡಬೇಕು. ಸಾಲ ಮಂಜೂರಾಗದಿದ್ದರೆ ಕಾರಣ ತಿಳಿಸಬೇಕು ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.