ADVERTISEMENT

`ಭಾಷೆ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಮಹತ್ವ'

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 8:33 IST
Last Updated 5 ಡಿಸೆಂಬರ್ 2012, 8:33 IST

ಚಿಕ್ಕನಾಯಕನಹಳ್ಳಿ: ಭಾಷೆ, ರಾಷ್ಟ್ರಪ್ರೇಮ ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿರುತ್ತದೆ ಎಂದು ಹಿರಿಯ ಸಾಹಿತಿ ಸಾ.ಶಿ.ಮರುಳಯ್ಯ ತಿಳಿಸಿದರು.

ಪಟ್ಟಣದಲ್ಲಿ ಮಂಗಳವಾರ ತಾಲ್ಲೂಕು ಪ್ರೌಢಶಾಲಾ ಕನ್ನಡ ಭಾಷಾ ಬೋಧಕರ ಸಂಘದಿಂದ ನಡೆದ ಜಿಲ್ಲಾ ಮಟ್ಟದ ಐದನೇ ವರ್ಷದ ಪ್ರೌಢಶಾಲಾ ಕನ್ನಡ ಭಾಷಾ ಬೋಧಕರ ಶೈಕ್ಷಣಿಕ ಸಮಾವೇಶದಲ್ಲಿ ಮಾತನಾಡಿ, ಸಂಸ್ಕೃತಿ ಅರಿವು-ಬೆಳವಣಿಗೆ ಸಾಹಿತ್ಯದಿಂದ ಸಾಧ್ಯ. ವಿನೂತನ, ವೈವಿಧ್ಯಮಯ ಸಂಸ್ಕೃತಿ ಪರಂಪರೆಯ ಇತಿಹಾಸವಿರುವ ಕನ್ನಡನಾಡಿನ ಬಗ್ಗೆ ನಮಗೆ ಹೆಮ್ಮೆಯಿರಬೇಕು ಎಂದರು.

ವಿದ್ಯಾರ್ಥಿಗಳನ್ನು ತಮ್ಮತನದ ಬಗ್ಗೆ ಜಾಗೃತಿ ಮೂಡಿಸಿ ಭಾಷೆ, ರಾಷ್ಟ್ರಪ್ರೇಮ ಬೆಳಸುವ ಕಾಯಕಕ್ಕೆ ಎಲ್ಲ ಕನ್ನಡ ಶಿಕ್ಷಕರು ಸಜ್ಜಾಗಬೇಕಿದೆ. ಪ್ರತಿ ಮನೆಯಲ್ಲೂ ಕನಿಷ್ಟ ಮಟ್ಟದ ಪುಸ್ತಕ ಭಂಡಾರವಿರಬೇಕು ಎಂದ ಅವರು ಹೆಣ್ಣು ಮಕ್ಕಳು ಸಾಹಿತ್ಯ ಕೃಷಿಯಲ್ಲಿ ಹೆಚ್ಚು ಹೆಚ್ಚು ತೊಡಗಿಕೊಳ್ಳುವಂತಾಗಬೇಕು. ಅತ್ಯುತ್ತಮ ಸಾಹಿತ್ಯ ಕೃತಿ ರಚಿಸಿದ ಮಹಿಳಾ ಸಾಹಿತಿಗೆ ಪ್ರಶಸ್ತಿ ನೀಡುವ ಪರಿಪಾಟವನ್ನು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಆರಂಭಿಸಬೇಕು. ಇದಕ್ಕಾಗಿ ನಾನು ರೂ.2ಲಕ್ಷ ಕೊಡುಗೆ ನೀಡಲಿದ್ದೇನೆ ಎಂದರು.

ಶಿಕ್ಷಣಾಧಿಕಾರಿ ಬಿ.ಜೆ.ಪ್ರಭುಸ್ವಾಮಿ ಸಮಾವೇಶ ಉದ್ಘಾಟಿಸಿದರು. ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಬಿ.ಮೋಹನ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಎಂ.ವಿ.ನಾಗರಾಜರಾವ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್.ರವಿಕುಮಾರ್, ವಿಷಯ ಬೋಧಕರಾದ ಮಾದಾಪುರ ಶಿವಪ್ಪ, ನರಸಿಂಹಯ್ಯ, ಶಿವಣ್ಣ, ಬಿಇಒ ಸಾ.ಚಿ.ನಾಗೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಗೋವಿಂದರಾಜು ಸ್ವಾಗತಿಸಿದರು. ಕೃಷ್ಣಪ್ಪ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.