ADVERTISEMENT

ಮಟ್ಕಾ ಹೋಯ್ತು; ಬೆಟ್ಟಿಂಗ್ ಬಂತು

ಪ್ರಜಾವಾಣಿ ವಿಶೇಷ
Published 24 ಮಾರ್ಚ್ 2014, 10:14 IST
Last Updated 24 ಮಾರ್ಚ್ 2014, 10:14 IST

ಪಾವಗಡ: ಇಸ್ಪೀಟ್‌, ಮಟ್ಕಾಗೆ ಪರ್ಯಾಯವಾಗಿ ಪಟ್ಟಣ, ವೈ.ಎನ್.ಹೊಸಕೋಟೆಯಲ್ಲಿ ಟಿ.ಟ್ವೆಂಟಿ ಬೆಟ್ಟಿಂಗ್ ದಂಧೆ ನಡೆಯುತ್ತಿದೆ.
ಬೆಟ್ಟಿಂಗ್‌ಗಾಗಿ ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿಕೊಳ್ಳಲಾಗುತ್ತಿದ್ದು, ಲ್ಯಾಪ್ ಟಾಪ್, ಮೊಬೈಲ್ ಮೂಲಕ ಬೆಟ್ಟಿಂಗ್ ಕಟ್ಟಲಾಗುತ್ತಿದೆ.

ಟಾಸ್ ವಿನ್, ಬಾಲ್ ಟು ಬಾಲ್, ಮ್ಯಾಚ್ ಸ್ಕೋರ್, ವಿಕೆಟ್ ಆಧರಿಸಿ ಬೆಟ್ಟಿಂಗ್ ಕಟ್ಟಲಾಗುತ್ತದೆ. ಬೆಟ್ಟಿಂಗ್ ಮೊತ್ತವನ್ನು ಮೂರನೆ ವ್ಯಕ್ತಿಗೆ ನೀಡಲಾಗುತ್ತದೆ. ಮ್ಯಾಚ್ ಮುಕ್ತಾಯವಾದ ನಂತರ ದುಪ್ಪಟ್ಟು ಹಣವನ್ನು ಗೆದ್ದವನಿಗೆ ನೀಡಲಾಗುತ್ತದೆ. ನಗದಿಗೆ ಬದಲಾಗಿ ದ್ವಿ ಚಕ್ರ ವಾಹನ, ಚಿನ್ನದ ಸರ, ಮೊಬೈಲ್‌ಗಳನ್ನೂ ಪಣಕ್ಕೆ ಇಡಲಾಗುತ್ತಿದೆ.

ಪಟ್ಟಣದ ತುಮಕೂರು ರಸ್ತೆಯಲ್ಲಿರುವ ಕೆಲ ಟೀ ಅಂಗಡಿ, ಡಾಬಾಗಳು, ಪುರಸಭೆ ಮುಂಭಾಗ, ಗುರುಭವನ,  ವೈ.ಎನ್.ಹೊಸಕೋಟೆ ಗ್ರಾಮದ ಗಾಂಧಿ ವೃತ್ತ, ಎಂ.ಜಿ. ರಸ್ತೆ. ಕೆಲ ಪ್ರಮುಖ ಬೀದಿಗಳಲ್ಲಿ ಬೆಟ್ಟಿಂಗ್ ಜೂಜಾಟ ಹಗಲು, ರಾತ್ರಿ ಎನ್ನುವ ವ್ಯತ್ಯಾಸವಿಲ್ಲದೆ  ಸದಾ ಕಾಲ ನಡೆಯುತ್ತಿದೆ. ಕೆಲ ಮೊಬೈಲ್  ಅಂಗಡಿಗಳಲ್ಲಿ ಕರೆನ್ಸಿ ಹಾಕಿಸಿಕೊಳ್ಳುವ ನೆಪದಲ್ಲಿ  ಬೆಟ್ಟಿಂಗ್ ಕಟ್ಟಲಾಗುತ್ತಿದೆ. ಕೆಲವರು ಮನೆಯಲ್ಲಿ ಕೂತು ಪಂದ್ಯ ವೀಕ್ಷಿಸುತ್ತಲೇ ಮೊಬೈಲ್ ಮೂಲಕ ಬೆಟ್ಟಿಂಗ್ ಕಟ್ಟುತ್ತಾರೆ.

ಪಂದ್ಯಾವಳಿ ಪ್ರಾರಂಭವಾದಾಗಿನಿಂದ ನೆಟ್ ಪ್ಯಾಕ್, ಕರೆನ್ಸಿಗೆ ಬೇಡಿಕೆ ಹೆಚ್ಚಾಗಿದೆ. ಮ್ಯಾಚ್ ನಡೆಯುವ ದಿನ, ಮೂರು ಪಟ್ಟು ಹೆಚ್ಚಿನ ಕರೆನ್ಸಿ ಮಾರಾಟವಾಗುತ್ತಿರುವುದಾಗಿ ಪಟ್ಟಣದ  ಮೊಬೈಲ್ ಅಂಗಡಿ ಮಾಲೀಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಶುಕ್ರವಾರ ನಡದ ಭಾರತ, ಪಾಕಿಸ್ತಾನ ಪಂದ್ಯದ ವೇಳೆ ವೈ.ಎನ್.ಹೊಸಕೋಟೆ ಗ್ರಾಮದಲ್ಲಿ ₨ ೨ ಲಕ್ಷ, ಪಟ್ಟಣದಲ್ಲಿ ₨ ೫ ಲಕ್ಷದವರೆಗೂ ಬೆಟ್ಟಿಂಗ್ ನಡೆದಿದೆ. ಕಾಲೇಜು ವಿದ್ಯಾರ್ಥಿಗಳು, ಯುವ ಜನತೆ ಬೆಟ್ಟಿಂಗ್‌ ಮೋಹಕ್ಕೆ ಬೀಳುತ್ತಿರುವುದು ಪ್ರಜ್ಞಾವಂತರಲ್ಲಿ ಆತಂಕ ಹುಟ್ಟಿಸಿದೆ.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.