ADVERTISEMENT

ಮಠ ರಕ್ಷಣೆಗೆ ಬಲಿದಾನಕ್ಕೂ ಸಿದ್ದ: ಭಕ್ತರ ಘೋಷಣೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2013, 6:31 IST
Last Updated 23 ಜುಲೈ 2013, 6:31 IST

ಶಿರಾ: ಪಟ್ಟನಾಯಕನಹಳ್ಳಿ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ರಕ್ಷಣೆಗಾಗಿ ಯಾವುದೇ ತ್ಯಾಗ- ಬಲಿದಾನಕ್ಕೂ ಸಿದ್ದ ಎಂದು ಮಠದ ಭಕ್ತ ಸಮೂಹ ಒಕ್ಕೊರಲಿನಿಂದ ಘೋಷಿಸಿದರು.

ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿಯನ್ನು ಕೆಲ ಕಿಡಿಗೇಡಿಗಳು ಒಂದು ಜಾತಿಯ ಹೆಸರಿನಲ್ಲಿ ಪ್ರತಿಭಟನೆ ನಡೆಸಿ ಅವಹೇಳನಕಾರಿಯಾಗಿ ನಿಂದಿಸಿದ್ದಾರೆ ಎಂದು ಖಂಡಿಸಿ ಪಟ್ಟನಾಯಕನಹಳ್ಳಿಯಿಂದ ಶಿರಾವರೆಗೆ ಹಮ್ಮಿಕೊಂಡಿದ್ದ ಬೃಹತ್ ಕಾಲ್ನಡಿಗೆ ಜಾಥಾ ತಾಲ್ಲೂಕು ಕಚೇರಿ ಎದುರು ಸಮಾವೇಶಗೊಂಡ ವೇಳೆ ಮುಖಂಡರು ಮಾತನಾಡಿದರು. ಮಠದ ರಕ್ಷಣೆಗಾಗಿ ಬಲಿದಾನಕ್ಕೂ ಸಿದ್ದರಾಗಬೇಕು ಎಂದು ಭಕ್ತರಿಗೆ ಮನವಿ ಮಾಡಿದರು.

ಮಠದ ಆವರಣದಲ್ಲಿ ಶವಸಂಸ್ಕಾರಕ್ಕೆ ಅವಕಾಶ ನೀಡಲಿಲ್ಲ ಎನ್ನುವ ಕಾರಣಕ್ಕೆ ಕೆಲ ವಿಕೃತ ಮನಸ್ಸಿನ ವ್ಯಕ್ತಿಗಳು ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿರುವುದು ಖಂಡನೀಯ. ಮಠವನ್ನು ಮಠವಾಗಿ ಉಳಿಸಿಕೊಳ್ಳುತ್ತೇವೆಯೇ ವಿನಾಃ ಅದನ್ನು ಸ್ಮಶಾನ ಮಾಡಲು ಅವಕಾಶ ನೀಡುವುದಿಲ್ಲ ಎಂದು ಮಾಜಿ ಶಾಸಕ ಬಿ.ಸತ್ಯನಾರಾಯಣ ಹೇಳಿದರು.

ಈ ಮಠ ಯಾವುದೇ ಒಂದು ಜನಾಂಗಕ್ಕೆ ಸೀಮಿತವಲ್ಲ. ಇಲ್ಲಿ ಪೂಜೆಗೆ ಬರುವವರೆಲ್ಲರೂ ಮಠದ ಭಕ್ತರು. ಆದರೆ ಸ್ವಹಿತಾಸಕ್ತಿಯ ಕೆಲ ಜನ ಜಾತಿ ಹೆಸರಿನಲ್ಲಿ ದೌರ್ಜನ್ಯ ಎಸಗುತ್ತಿದ್ದು, ಮಠವನ್ನು ಸ್ಮಶಾನವನ್ನಾಗಿಸುವ ಹುನ್ನಾರ ನಡೆಸಿದ್ದಾರೆ. ಮಠದ ಆಸ್ತಿ ವಿಚಾರ ಮುಂದಿಟ್ಟುಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ. ಜಾತಿ ಜಾತಿಗಳ ನಡುವೆ ವೈಷಮ್ಯದ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ಆರೋಪಿಸಿದರು.

ಕೇಂದ್ರ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಒಂದೇ ಪಕ್ಷದ ಸರ್ಕಾರ ಒಂದು ಸಮಾಜವನ್ನು ಗುರಿ ಮಾಡಿಕೊಂಡು ಆದಿಚುಂಚನಗಿರಿ ಮಠದ ಮೇಲೆ ಐಟಿ ದಾಳಿ ನಡೆಸಿದೆ. ಮತ್ತೊಂದೆಡೆ ಕನ್ನಡ ನಾಡಿನ ಏಕೈಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಭಾವಚಿತ್ರವನ್ನು ಮುಖ್ಯಮಂತ್ರಿ ಕಚೇರಿಯಿಂದ ತೆಗೆಯಲಾಗಿದೆ. ಈ ಪರಿಸ್ಥಿತಿಗೆ ಯಾವುದೇ ಪಕ್ಷ ಮತ್ತು ಸರ್ಕಾರ ಹೋಗಬಾರದು ಎಂದರು.

ಇದಕ್ಕೂ ಮುನ್ನ ಪಟ್ಟನಾಯಕನಹಳ್ಳಿ ಮಠದ ಆವರಣದಿಂದ ಬೆಳಿಗ್ಗೆ ಹೊರಟ ಜಾಥಾ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕುಂಚಿಟಿಗ ಒಕ್ಕಲಿಗರ ಸಂಘದ ಅಧ್ಯಕ್ಷ ದೊಡ್ಡಲಿಂಗಯ್ಯ, ಮಠದ ವಿವಾದದಲ್ಲಿ ಕೆಲವರು ಅನಗತ್ಯ ಗೊಂದಲ ಮೂಡಿಸಿ ಪರಸ್ವರ ಸಹೋದರರಂತೆ ಇದ್ದವರನ್ನು ಜಾತಿಗಳ ವಿಷ ಬೀಜ ಬಿತ್ತಿ ಸಮಾಜದ ನೆಮ್ಮದಿ ಕದಡುವಂತ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು.

ಮಠದ ಪೀಠಾಧ್ಯಕ್ಷರಾಗಿ ನಂಜಾವಧೂತ ಸ್ವಾಮೀಜಿ ಆಡಳಿತ ವಹಿಸಿಕೊಂಡ ನಂತರ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗದ ಜನರನ್ನು ಸೌಹಾರ್ದತೆಯಿಂದ ಕಾಣುತ್ತಿದ್ದು, ಜನಪರ ಕಾರ್ಯದ ಮೂಲಕ ಮಠವನ್ನು ಪ್ರಸಿದ್ಧಿಗೆ ತಂದಿದ್ದಾರೆ. ಇದನ್ನು ಸಹಿಸದ ಕೆಲವರು ಹತಾಶೆಯಿಂದ ಸ್ವಾಮೀಜಿ ವಿರುದ್ಧ ತೇಜೋವಧೆ ಮಾಡುತ್ತಿದ್ದಾರೆ. ಈಗ ಶಾಂತಿಯುತ ಕಾಲ್ನಡಿಗೆ ಮಾಡುತ್ತಿದ್ದೇವೆ. ಮುಂದೆ ಇದೇ ರೀತಿ ಪ್ರಕರಣ ಮುಂದುವರಿಸಿದರೆ ಪ್ರತಿಭಟನೆ ಉಗ್ರ ಸ್ವರೂಪ ಪಡೆಯುತ್ತದೆ ಎಂದು ಎಚ್ಚರಿಕೆ ನೀಡಿದರು.

ನಿರ್ದಿಷ್ಟ ಜಾತಿಗೆ ಬದಲು ಮಠದ ಭಕ್ತ ಸಮೂಹದ ಹೆಸರಿನಲ್ಲಿ ನಡೆದ ಪಾದಯಾತ್ರೆಯಲ್ಲಿ ಒಕ್ಕಲಿಗ ಸಮಾಜದ ಕುಂಚಿಟಿಗ, ಹಳ್ಳಿಕಾರ್, ಸರ್ಪ ಒಕ್ಕಲಿಗ ಸಮಾಜ ಬಾಂಧವರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರೆ; ಯಾದವ, ಮಡಿವಾಳ, ನಾಯಕ, ಮಾದಿಗ, ಬಲಿಜ, ಮುಸ್ಲಿಂ, ಕುಂಬಾರ, ಈಡಿಗ ಸೇರಿದಂತೆ ವಿವಿಧ ಸಮಾಜದ ಮುಖಂಡರು ಪಾಲ್ಗೊಂಡು ಸ್ವಾಮೀಜಿಗೆ ಬೃಹತ್ ಬೆಂಬಲ ವ್ಯಕ್ತಪಡಿಸಿದರು.

ಕುಂಚಿಟಿಗರ ಸಂಘದ ಅಧ್ಯಕ್ಷ ಗುಳಿಗೇನಹಳ್ಳಿ ನಾಗರಾಜು, ಕೇಂದ್ರ ಒಕ್ಕಲಿಗರ ಸಂಘದ ನಿರ್ದೇಶಕ ಯಲಚವಾಡಿ ನಾಗರಾಜು, ರಾಜ್ಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರ್.ಮಂಜುನಾಥ್, ಚಿತ್ರದುರ್ಗ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ಯಶೋಧರ್, ತುಮಕೂರು ಕೆಂಪೇಗೌಡ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಎಸ್.ಪುಟ್ಟೀರಪ್ಪ, ನಿರ್ದೇಶಕ ಆರ್.ಕಾಮರಾಜು, ಜಿಲ್ಲಾ ಪಂಚಾಯಿತಿ ಸದಸ್ಯರಾದ ಅರೇಹಳ್ಳಿ ರಮೇಶ್, ಬಿ.ಕೆ.ಬಡೀರಣ್ಣ, ಪ್ರಕಾಶ್‌ಗೌಡ, ಮಾಜಿ ಸದಸ್ಯರಾದ ಪಿ.ಆರ್.ಮಂಜುನಾಥ್ ರಾಮಚಂದ್ರಪ್ಪ, ಎಪಿಎಂಸಿ ಅಧ್ಯಕ್ಷ ಶಶಿಧರ್‌ಗೌಡ, ಉಪಾಧ್ಯಕ್ಷ ಮೊಸರಕುಂಟೆ ರಾಜಣ್ಣ, ಮಧುಗಿರಿ ಎಪಿಎಂಸಿ ನಿರ್ದೇಶಕ ಡಾ.ಗುಟ್ಟೆ ಮೋಹನ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಎಸ್.ರವಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮದ್ದೇವಳ್ಳಿ ರಾಮಕೃಷ್ಣ, ಮಾಜಿ ಅಧ್ಯಕ್ಷರಾದ ಎಚ್.ಜಿ.ಲಿಂಗಯ್ಯ, ಹೊನ್ನೇಹಳ್ಳಿ ನಾಗರಾಜು, ಹೆಂಜಾರಪ್ಪ, ಚಲನಚಿತ್ರ ನಿರ್ಮಾಪಕ ಮುರಳೀಧರ್ ಹಾಲಪ್ಪ, ಉದ್ಯಮಿ ಬಾಣಗೆರೆ ದೊಡ್ಡರಾಮಕೃಷ್ಣಪ್ಪ, ನಗರಸಭೆ ಸದಸ್ಯರಾದ ಆರ್.ಉಗ್ರೇಶ್, ಪ್ರವೀಣ್ ಲಾಡ್ಜ್ ರಾಜಣ್ಣ, ಮಾಜಿ ಸದಸ್ಯರಾದ ಆರ್.ರಾಮು, ಆರ್.ರಾಘವೇಂದ್ರ, ಮುಖಂಡರಾದ ಗಡಾರಿ ಹನುಮಂತಪ್ಪ, ಸುಧಾಕರಗೌಡ, ಅರೇಹಳ್ಳಿ ಬಾಬು, ಷಣ್ಮುಖ, ಪಿ.ಆರ್.ರಮೇಶ್, ಸಂತೇಪೇಟೆ ರಮೇಶ್ ಚಿರಪತಹಳ್ಳಿ ಮೂಡಲಗಿರಿಗೌಡ, ಭೂವನಹಳ್ಳಿ ಸತ್ಯನಾರಾಯಣ, ಡಿ.ಸಿ.ಅಶೋಕ್, ಬರಗೂರು ಹಲಗುಂಡೇಗೌಡ, ಜಿ.ಎನ್.ಮೂರ್ತಿ, ತಾವರೇಕೆರೆ ಕೃಷ್ಣೇಗೌಡ, ಗೋಣಿಹಳ್ಳಿ ದೇವರಾಜು, ಗೋವಿಂದರಾಜು, ಆರ್.ಪ್ರಕಾಶ್, ಗೋಣಿಹಳ್ಳಿ ಮಂಜುನಾಥ್‌ಗೌಡ, ಲಗ್ಗೆರೆ ನಾರಾಯಣಸ್ವಾಮಿ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ದೊಡ್ಡೇಗೌಡ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಭೂಪತಿಗೌಡ, ಮಾಜಿ ಅಧ್ಯಕ್ಷ ಮುರಳೀಧರ್, ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷ ಪುಟ್ಟಕಾಮಣ್ಣ, ವಕೀಲ ರಘು, ಡಿಸಿಸಿ ಬ್ಯಾಂಕ್‌ನ ಯುವರಾಜ್, ಅಧ್ಯಕ್ಷ ಮೆಳೆಕೋಟೆ ಉದಯ್‌ಶಂಕರ್, ಉಮೇಶ್‌ಗೌಡ, ರಾಗಲಹಳ್ಳಿ ಉಮೇಶ್, ಪೂಜಾರ್ ಮುದ್ದನಹಳ್ಳಿ ಮುದ್ದರಾಜು, ಹೊನ್ನೇಹಳ್ಳಿ ಅಳ್ಳಪ್ಪ, ಹುಳಿಗೆರೆ ರಾಜಮ್ಮ, ಯಾದಲಡಕು ಶ್ರೀರಂಗಯ್ಯ ಗ್ರಾ.ಪಂ.ಅಧ್ಯಕ್ಷರಾದ ಹೊನ್ನೇನಹಳ್ಳಿ ಶಾಂತರಾಜು, ಲೀಲಾವತಿ ದೇವರಾಜು, ಹೊಸಮನೆ ರಂಗನಾಥ್, ಕೆ.ಎಂ.ಶ್ರೀನಿವಾಸ್, ರಾಮು. ದಲಿತ ಮುಖಂಡ ಉಗ್ರಪ್ಪ, ಉಸ್ಮನ್ ಸಾಬ್, ರಮಾ ನಾಗರಾಜು ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.