ADVERTISEMENT

ಮಧುಗಿರಿ, ಪಾವಗಡ; ಬರದ ಛಾಯೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2011, 9:30 IST
Last Updated 5 ಆಗಸ್ಟ್ 2011, 9:30 IST
ಮಧುಗಿರಿ, ಪಾವಗಡ; ಬರದ ಛಾಯೆ
ಮಧುಗಿರಿ, ಪಾವಗಡ; ಬರದ ಛಾಯೆ   

ತುಮಕೂರು: ಪಾವಗಡ ಮತ್ತು ಮಧುಗಿರಿ ತಾಲ್ಲೂಕುಗಳ ಮೇಲೆ ವರುಣನ ಮುನಿಸು ಮುಂದುವರಿದಿದೆ. ಎರಡೂ ತಾಲ್ಲೂಕುಗಳಲ್ಲಿ ಜುಲೈ ತಿಂಗಳಲ್ಲಿ ವಾಡಿಕೆ ಮಳೆಗಿಂತ ಅತಿ ಕಡಿಮೆ ಮಳೆ ಬಿದ್ದಿದೆ.

ಪಾವಗಡ ತಾಲ್ಲೂಕಿನಲ್ಲಿ ವಾಡಿಕೆ 46 ಮಿ.ಮೀ. ಆಗಬೇಕಿದ್ದು, ಕೇವಲ 31 ಮಿ.ಮೀ. ಮಳೆಯಾಗಿದೆ. ಮಧುಗಿರಿ ತಾಲ್ಲೂಕಿನಲ್ಲಿ 52.6 ಮಿ.ಮೀ. ಮಳೆ ಬರಬೇಕಿದ್ದು, ಅತ್ಯಲ್ಪ 16 ಮಿ.ಮೀ. ಮಳೆಯಾಗಿದೆ. ತಿಪಟೂರು ತಾಲ್ಲೂಕಿನಲ್ಲಿಯೂ ಮಳೆ ಕೊರತೆ ಕಾಡಿದೆ. ಜುಲೈನಲ್ಲಿ ಕೇವಲ 39 ಮಿ.ಮೀ. ಮಳೆಯಾಗಿದೆ (ವಾಡಿಕೆ 52 ಮಿ.ಮೀ).

ಪಾವಗಡ ಮತ್ತು ಮಧುಗಿರಿ ತಾಲ್ಲೂಕಿನ ಪ್ರಮುಖ ಬೆಳೆಯಾದ ಶೇಂಗಾ ಬಿತ್ತನೆ ಕುಂಠಿತಗೊಂಡಿದ್ದು, ಈವರೆಗೆ ಶೇ. 56ರಷ್ಟು ಬಿತ್ತನೆ ಕಂಡಿದೆ. ಜುಲೈ ನಂತರ ಶೇಂಗಾ ಬಿತ್ತನೆಯಾಗುವುದಿಲ್ಲ. ಹೀಗಾಗಿ ಈ ಬಾರಿ ರೈತರ ಆರ್ಥಿಕ ಸಂಕಷ್ಟ ಹೆಚ್ಚುವ ಸಾಧ್ಯತೆಗಳಿವೆ. ಈ ಭಾಗದಲ್ಲಿ ರೈತರ ಕೈಹಿಡಿದು ನಡೆಸುತ್ತಿದ್ದ ಶೇಂಗಾ ಬೆಳೆ ಕೈಕೊಟ್ಟಿದ್ದು, ರೈತರ ಬದುಕು ದುರ್ಬರವಾಗಲಿದೆ.

ಜಿಲ್ಲೆಯಲ್ಲಿ ಜುಲೈ ಅಂತ್ಯದವರೆಗೆ ಒಟ್ಟು 248 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ವೇಳೆಗೆ 336 ಮಿ.ಮೀ ಮಳೆಯಾಗಿತ್ತು. ಪ್ರಸಕ್ತ ಸಾಲಿನಲ್ಲಿ 4.80 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆಯಬೇಕಿತ್ತು.

ಆದರೆ ಇಲ್ಲಿಯವರೆಗೆ ಕೇವಲ 2.2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ನಡೆದಿದೆ. ಸರಾಸರಿ ಶೇ. 41ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಕಳೆದ ವರ್ಷ ಈ ಹೊತ್ತಿಗೆ 2.53 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ (ಶೇ. 51) ಬಿತ್ತನೆ ಕಾರ್ಯ ನಡೆದಿತ್ತು.

ಪ್ರಸಕ್ತ ಸಾಲಿನಲ್ಲಿ ತುಮಕೂರು ಮತ್ತು ಕೊರಟಗೆರೆ ಹೊರತುಪಡಿಸಿ ಉಳಿದ ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ರಾಗಿ, ನೆಲಗಡಲೆ, ತೊಗರಿ, ಸೂರ್ಯಕಾಂತಿ ಬಿತ್ತನೆ ಕುಂಠಿತವಾಗಿದೆ. ಬಿತ್ತನೆಆಗಿರುವ ಬೆಳೆಗಳು ತೇವಾಂಶ ಕೊರತೆಯಿಂದ ಬಾಡುತ್ತಿವೆ.

ಜಿಲ್ಲೆಯ ವಿವಿಧೆಡೆ ನೆಲಗಡಲೆ ಬೆಳೆಗೆ ರಸಹೀರುವ ಕೀಟಗಳ ಬಾಧೆ ಕಂಡು ಬಂದಿದೆ. ಈ ಬಾರಿ ಜಿಲ್ಲೆಯಲ್ಲಿ ಶೇ. 56ರಷ್ಟು ಮಾತ್ರ ನೆಲಗಡಲೆ ಬಿತ್ತನೆಯಾಗಿದೆ. ಆಗಸ್ಟ್‌ನಲ್ಲಿ ನೆಲಗಡಲೆ ಬಿತ್ತನೆ ಸಾಧ್ಯತೆ ಅತಿ ಕಡಿಮೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ಏಪ್ರಿಲ್‌ನಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಮುಂಗಾರು ಬಿತ್ತನೆಗೆ ವಿವಿಧೆಡೆ ಸಿದ್ಧತೆ ಮಾಡಲಾಗಿತ್ತು. ಮೇನಲ್ಲಿ ಸುರಿದ ಉತ್ತಮ ಮಳೆಯ ಲಾಭ ಪಡೆದ ಚಿಕ್ಕನಾಯಕನಹಳ್ಳಿ, ತಿಪಟೂರು, ಗುಬ್ಬಿ, ಕುಣಿಗಲ್, ತುರುವೇಕೆರೆ ತಾಲ್ಲೂಕುಗಳ ರೈತರು ಪೂರ್ವ ಮುಂಗಾರಿಗೆ ಹೈಬ್ರಿಡ್ ಜೋಳ, ಹೆಸರು, ಉದ್ದು, ಅಲಸಂದೆ, ಎಳ್ಳು ಮತ್ತು ಹರಳು ಬಿತ್ತದ್ದರು. ಜೂನ್‌ನಲ್ಲಿ ಮಳೆ ಕೊರತೆಯಿಂದಾಗಿ ಇಳುವರಿ ಕುಸಿದಿದೆ. ಮೋಡ ಮುಸುಕಿದ ವಾತಾವರಣದಿಂದಾಗಿ ಕಾಯಿಕೊರೆಯುವ ಕೀಟ, ಕರಿಹೇನು ಬಾಧೆ ಕಾಣಿಸಿಕೊಂಡಿದೆ.

ಮಳೆ ವಿವರ
ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಆ. 1ರ ವರೆಗೆ ಬಿದ್ದಿರುವ ಮಳೆ ವಿವರ ಇಂತಿದೆ. ಆವರಣದಲ್ಲಿರುವುದು ವಾಡಿಕೆ ಮಳೆ.

ಚಿಕ್ಕನಾಯಕನಹಳ್ಳಿ 201 (228), ಗುಬ್ಬಿ 218 (303), ಕೊರಟಗೆರೆ 314 (301), ಕುಣಿಗಲ್ 293 (366), ಮಧುಗಿರಿ 198 (252), ಪಾವಗಡ 161 (221), ಶಿರಾ 250 (239), ತಿಪಟೂರು 269 (289), ತುಮಕೂರು 332 (317), ತುರುವೇಕೆರೆ 281 (312).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.