ADVERTISEMENT

ಮಳೆಯಾದರೂ ಜಾನುವಾರು ಮೇವಿಗೆ ಬರ...

ಮಳೆಯಾಗಿದ್ದಕ್ಕೆ ಜಿಲ್ಲಾಡಳಿತ ನಿಟ್ಟುಸಿರು; ಗೋಶಾಲೆ ಮುಚ್ಚುತ್ತಿರುವುದಕ್ಕೆ ರೈತರ ಆತಂಕ

ಡಿ.ಎಂ.ಕುರ್ಕೆ ಪ್ರಶಾಂತ
Published 8 ಜೂನ್ 2017, 6:36 IST
Last Updated 8 ಜೂನ್ 2017, 6:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ಬರದ ಕಾರಣ ಜಿಲ್ಲೆಯಲ್ಲಿ ಸರ್ಕಾರ ಆರಂಭಿಸಿದ್ದ ಗೋಶಾಲೆಗಳನ್ನು ಹಂತ ಹಂತವಾಗಿ ಮುಚ್ಚುತ್ತಿದ್ದು ಇದು ಕೆಲವು ಕಡೆಗಳಲ್ಲಿ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಕೆಲವು ಭಾಗಗಳಲ್ಲಿ ಮಳೆ ಉತ್ತಮವಾಗಿ ಆಗಿದೆ. ಉಳಿದ ಕಡೆಗಳಲ್ಲಿ ಮಳೆ ಸುರಿಯುತ್ತಿದೆ. ಕೃಷಿ ಚಟುವಟಿಕೆಗಳು ಆರಂಭವಾಗುತ್ತಿವೆ. ಇದರಿಂದ ರಾಸುಗಳಿಗೆ ಹಸಿರು ಮೇವು ದೊರೆಯುತ್ತದೆ ಎಂದು ಶಾಸಕರು ಮತ್ತು ಅಧಿಕಾರಿಗಳನ್ನು ಒಳಗೊಂಡ ತಾಲ್ಲೂಕು ಮಟ್ಟದ ಬರ ಸಮಿತಿಯು ತಮ್ಮ ವ್ಯಾಪ್ತಿಯ ಗೋಶಾಲೆಗಳನ್ನು ಮುಚ್ಚುವಂತೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸುತ್ತಿದೆ.

ಕುಣಿಗಲ್ ಹೊರತುಪಡಿಸಿ ಉಳಿದ ತಾಲ್ಲೂಕುಗಳಲ್ಲಿ ಒಟ್ಟು 33 ಗೋಶಾಲೆಗಳನ್ನು ಆರಂಭಿಸಲಾಗಿತ್ತು. ಜಿಲ್ಲಾಡಳಿತದ ಮಾಹಿತಿಯ ಪ್ರಕಾರ ಬುಧವಾರದವರೆಗೆ (ಜೂ. 7) 26 ಗೋಶಾಲೆಗಳನ್ನು ಮುಚ್ಚಲಾಗಿದೆ. ತಿಪಟೂರು 2, ಪಾವಗಡ 3, ಕೊರಟಗೆರೆ 1 ಹಾಗೂ ಶಿರಾ ತಾಲ್ಲೂಕಿನಲ್ಲಿ 1 ಗೋಶಾಲೆ ನಡೆಯುತ್ತಿದೆ. ಈ ಗೋಶಾಲೆಗಳಲ್ಲಿ ಕೆಲವು ಅಂತಿಮವಾಗಿ ಆರಂಭವಾಗಿದ್ದವು.

ADVERTISEMENT

ಸರ್ಕಾರದ ವಿಪತ್ತು ನಿರ್ವಹಣಾ ಮಾರ್ಗಸೂಚಿ ಪ್ರಕಾರ 90 ದಿನಗಳ ವರೆಗೆ ಮಾತ್ರ ಗೋಶಾಲೆಯನ್ನು ನಡೆಸಬೇಕು. ಆದರೆ ಮುಂಗಾರು ಮತ್ತು ಹಿಂಗಾರು ವಿಫಲವಾದ ಕಾರಣ 180 ದಿನ ನಡೆಸಲಾಗಿದೆ. ಕೆಲವು ಕಡೆಗಳಲ್ಲಿ ಡಿಸೆಂಬರ್‌ನಲ್ಲಿಯೇ ಗೋಶಾಲೆ ಆರಂಭಿಸಲಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ. ಉಳಿದ ಏಳು ಗೋಶಾಲೆಗಳು ಅಂದಾಜು ಇನ್ನು ಒಂದು ವಾರದಲ್ಲಿ ಮುಚ್ಚಲಿವೆ. ಗೋಶಾಲೆ ಮುಚ್ಚುವಂತೆ ವರದಿ ಸಹ ಸಲ್ಲಿಸಲಾಗಿದೆ.

ಮಳೆ ಸುರಿದಿರುವುದು ರೈತರಲ್ಲಿ ಸಹಜವಾಗಿ ಹರ್ಷಕ್ಕೆ ಕಾರಣವಾಗಿದೆ. ಕೃಷಿ ಚಟುವಟಿಕೆಗಳು ಗರಿಗೆದರಿವೆ. ಆದರೆ ಕೆಲವು ಭಾಗಗಳಲ್ಲಿ ಇನ್ನೂ ಮಳೆ ಸೂಕ್ತವಾಗಿ ಬಿದ್ದಿಲ್ಲ ಎನ್ನುವ ಮಾತುಗಳು ರೈತರಿಂದ ಕೇಳಿ ಬರುತ್ತಿದೆ. ಚಿಕ್ಕನಾಯಕನಹಳ್ಳಿಯ ಹುಳಿಯಾರು ಭಾಗದಲ್ಲಿ ಹದಿನೈದು ದಿನಗಳ ಹಿಂದೆ ಹದವಾದ ಮಳೆ ಬಿದ್ದಿತ್ತು. ಈಗ ಮಳೆ ಇಲ್ಲ. ಹೀಗೆ ಒಂದು ತಾಲ್ಲೂಕಿನಲ್ಲಿಯೇ ಕೆಲವು ಕಡೆಗಳಲ್ಲಿ ಉತ್ತಮ ಮಳೆಯಾಗಿದ್ದರೆ ಕೆಲವು ಭಾಗಕ್ಕೆ ಮಳೆ ಕೈ ಕೊಟ್ಟಿದೆ.

ಮಳೆ ಸುರಿಯುತ್ತಿದೆ. ಹೊಲ, ತೋಟಗಳಲ್ಲಿ ಈಗ ಮೇವು ಚಿಗುರುತ್ತಿರುವುದು ನಿಜ. ಆದರೆ ರಾಸುಗಳಿಗೆ ಸಾಕಾಗುವಷ್ಟು ಮೇವು ಇನ್ನೂ ಚಿಗುರಿಲ್ಲ. ಈಗಲೇ ಗೋಶಾಲೆಗಳನ್ನು ಮುಚ್ಚಿದರೆ ಅನಾನುಕೂಲವಾಗುತ್ತದೆ. ಕನಿಷ್ಠ ಮೇವನ್ನಾದರೂ ವಿತರಿಸಬೇಕು. ಹಸಿರು ಮೇವು ಸಿಗುತ್ತದೆ ಎಂದಾದರೆ ನಾವು ಏಕೆ ಗೋಶಾಲೆ ಮುಂದುವರಿಯಬೇಕು ಎಂದು ಆಗ್ರಹಿಸುತ್ತೇವೆ ಎಂದು ರೈತರು ಪ್ರಶ್ನಿಸುವರು. ರಾಸುಗಳಿಗೆ ಹಸಿರು ಮೇವು ದೊರೆತರೆ ಒಣ ಮೇವನ್ನು ಏಕೆ ನೀಡುತ್ತೇವೆ ಎನ್ನುವ ಮಾತುಗಳು ರೈತರಿಂದ ಕೇಳಿ ಬರುತ್ತಿವೆ.

ತಿಪಟೂರು ತಾಲ್ಲೂಕಿನ ಅಯ್ಯನಬಾವಿಯ ಗೋಶಾಲೆ ಮುಂದುವರಿಸುವಂತೆ ಉಪವಿಭಾಗಾಧಿಕಾರಿ ಕಚೇರಿ ಆವರಣಕ್ಕೆ ರೈತರು ಇತ್ತೀಚೆಗೆ ದನಗಳನ್ನು ಕಟ್ಟುವ ಮೂಲಕ ತಮ್ಮ ಅಸಮಾಧಾನ ಸಹ ಹೊರ ಹಾಕಿದ್ದರು. ರೈತರ ಧರಣಿಗೆ ಮಣಿದ ಜಿಲ್ಲಾಡಳಿತ ತಾತ್ಕಾಲಿಕವಾಗಿ ಮೇವು ಪೂರೈಸುವಂತೆ ತಹಶೀಲ್ದಾರರಿಗೆ ಸೂಚಿಸಿದೆ.

**

ತಿಂಗಳಂತ್ಯದವರೆಗೆ ವಿಸ್ತರಿಸಿದ್ದರೆ ಅನುಕೂಲವಿತ್ತು: ರೈತರು

‘ಈ ತಿಂಗಳ ಕೊನೆಯವರೆಗಾದರೂ ಅಯ್ಯನಬಾವಿ ಗೋಶಾಲೆ ಮುಂದುವರಿಸಬೇಕಿತ್ತು’ ಎನ್ನುತ್ತಾರೆ ಕರೀಕೆರೆ ಗ್ರಾಮದ ರೈತ ಶಂಕರಪ್ಪ.

‘ಐದು ತಿಂಗಳಿನಿಂದ ಮೇವು ನೀಡಿ ಸರ್ಕಾರ ಅನುಕೂಲ ಮಾಡಿದೆ, ನಿಜ. ಆದರೆ ನಮ್ಮ ಸಮೀಪದ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ನಮ್ಮ ಕಡೆ ಒಂದು ಹದ ಮಾತ್ರ ಮಳೆ ಸುರಿದಿದೆ. ನಾಲ್ಕು ರಾಸುಗಳನ್ನು ಸಾಕಿದ್ದೇವೆ. ಗೋಶಾಲೆ ನಿಂತ ಮೇಲೆ ತೆಂಗಿನ ಗರಿಗಳನ್ನು ಕಡಿದು ಮೇವಾಗಿ ನೀಡುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸುವರು.

‘ಎರಡು ಮೂರು ಹದ ಮಳೆ ಆಗಿದ್ದರೆ ಮೇವು ಚಿಗುರುತ್ತಿತ್ತು. ಕೆಲವು ದಿನಗಳ ಹಿಂದೆ ಸುರಿದ ಮಳೆಗೆ ಸ್ವಲ್ಪ ಮೇವು ಚಿಗುರಿತು. ಆದರೆ ಪುನಃ ಮಳೆ ಬೀಳದ ಕಾರಣ ಆ ಚಿಗುರು ಸಹ ಒಣಗಿದೆ. ಭೂಮಿಯಲ್ಲಿ ತನುವು ಇಲ್ಲ. ಅಂದ ಮೇಲೆ ಗರಿಕೆ ಹೇಗೆ ಚಿಗುರುತ್ತದೆ. ಸರ್ಕಾರ ಗೋಶಾಲೆ ಆರಂಭಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ. ಆದರೆ ಸ್ಥಳೀಯ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೋಶಾಲೆ ಮುಚ್ಚಬೇಕು ಎನ್ನುವ ನಿರ್ಧಾರವನ್ನು ಕೈಗೊಳ್ಳಬೇಕಿತ್ತು’ ಎನ್ನುವರು.

**

ಇಲಾಖೆಯಿಂದ 17 ಸಾವಿರ ಮೇವಿನ ಬೀಜದ ಮಿನಿ ಕಿಟ್‌ ಒದಗಿಸಲಾಗಿದೆ. ಇವು ರೈತರಿಗೆ ಹಂಚಿಕೆ ಹಂತದಲ್ಲಿ ಇವೆ. ಚಿ.ನಾ.ಹಳ್ಳಿ, ಗುಬ್ಬಿ, ತಿಪಟೂರು ಭಾಗಗಳ ತೋಟಗಳಲ್ಲಿ ಹೊಲಗಳಲ್ಲಿ ಮೇವು ಚಿಗುರಿದೆ.
–ರಾಜಶೇಖರ್, ಉಪನಿರ್ದೇಶಕ, ಪಶುಸಂಗೋಪನಾ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.