ADVERTISEMENT

ಮಳೆ ಬಂದರೂ ಬೆಳೆಗೆ ದಕ್ಕದ ತೇವದ ನಂಟು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 10:25 IST
Last Updated 4 ಸೆಪ್ಟೆಂಬರ್ 2013, 10:25 IST

ಶಿರಾ: ತಾಲ್ಲೂಕಿನಲ್ಲಿ ಕಳೆದ 2-3 ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಸೋಮವಾರ ಅಂತ್ಯದವರೆಗೆ ಸರಾಸರಿ 24.66 ಮಿ.ಮೀ ಮಳೆಯಾಗಿದೆ ಎಂದು ಮಳೆ ಮಾಪನ ಕೇಂದ್ರದ ದಾಖಲೆಗಳು ತಿಳಿಸುತ್ತವೆ.

ಶಿರಾ ಪಟ್ಟಣದಲ್ಲಿ 66.6 ಮಿ.ಮೀ, ತಾವರೇಕೆರೆ 26.2 ಮಿ.ಮೀ, ಬರಗೂರು 29.3ಮಿ.ಮೀ ಹಾಗೂ ಹುಣಸೇಹಳ್ಳಿಯಲ್ಲಿ 50.2 ಮಿ.ಮೀ ಮಳೆ ದಾಖಲಾಗಿದೆ.

ತಾಲ್ಲೂಕಿನಲ್ಲಿ ವಾರ್ಷಿಕ ಸರಾಸರಿ 482.30 ಮಿ.ಮೀ ಸರಾಸರಿ ವಾಡಿಕೆ ಮಳೆಯಾಗಬೇಕಿದೆ. ಈವರೆಗೆ 207 ಮಿ.ಮೀ. ಮಳೆಯಾಗಿದೆ.
ಸೆಪ್ಟಂಬರ್- ಅಕ್ಟೋಬರ್‌ನಲ್ಲಿಯೂ ಮಳೆ ಬೀಳುವ ನಿರೀಕ್ಷೆ ಇದೆ. ಆದರೆ ಮಳೆಯಾಗುವ ಅಂತರ ದೂರವಾಗುವುದರಿಂದ ಬೆಳೆಗೆ ಅನುಕೂಲವಾಗುತ್ತಿಲ್ಲ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ.ನಾಗರಾಜು `ಪ್ರಜಾವಾಣಿ'ಗೆ ತಿಳಿಸಿದರು.

ತಾಲ್ಲೂಕಿನಲ್ಲಿ ಒಟ್ಟು 75,650 ಹೆಕ್ಟೇರ್ ಭೂಮಿ ಬಿತ್ತನೆ ಗುರಿ ಇದ್ದು, ಈವರೆಗೆ 31,513 ಹೆಕ್ಟೇರ್ (ಶೇ 42) ಬಿತ್ತನೆ ಆಗಿದೆ ಎಂದು ಅವರು ಹೇಳಿದರು.

ಈಗ ಆಗಿರುವ ಮಳೆಗೆ ರಾಗಿ ಬಿತ್ತನೆಗಿಂತ ಅದರ ಪೈರು ನಾಟಿ ಮಾಡುವುದು ಸೂಕ್ತ. ಬಿತ್ತನೆ ಮಾಡಿದರೆ ಇಳುವರಿ ಕುಂಠಿತವಾಗುತ್ತದೆ. ಹಿಂಗಾರು ಜೋಳ, ಮುಸಕಿನ ಜೋಳ, ಸೂರ್ಯಕಾಂತಿ, ಅಲಸಂದೆ, ಹುರಳಿ ಬಿತ್ತನೆ ಮಾಡಬಹುದು ಎಂದರು.

ಪರಿಹಾರ: ತಾಲ್ಲೂಕಿನಲ್ಲಿ ಹಾವು ಕಡಿದು ಮೃತಪಟ್ಟ 15 ರೈತರು ಹಾಗೂ ಆಕಸ್ಮಿಕವಾಗಿ ಮೃತರಾದ ಮೂವರು ರೈತರ ಕುಟುಂಬಗಳಿಗೆ ತಲಾ ರೂ 1 ಲಕ್ಷ ರೂಪಾಯಿ ಪರಿಹಾರ ಬಿಡುಗಡೆಯಾಗಿದೆ ಎಂದು ಅವರು ಹೇಳಿದರು.

ಮಳೆ: ತುಂಬಿದ ಅಯ್ಯನ ಬಾವಿ
ತಿಪಟೂರು: ನಗರ ಸೇರಿದಂತೆ ತಾಲ್ಲೂಕಿನ ಕೆಲವೆಡೆ ಮಂಗಳವಾರ ಮಧ್ಯಾಹ್ನ ಉತ್ತಮ ಮಳೆಯಾಗಿದೆ. ನಗರದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಬಿರುಸಾಗಿ ಮಳೆ ಸುರಿದಿದ್ದರಿಂದ ರಸ್ತೆ ಮೇಲೆ ನೀರು ಹರಿಯಿತು. ಚರಂಡಿಗಳು ತುಂಬಿ ಹರಿದವು. ವೈ.ಟಿ. ರಸ್ತೆಯ ರೈಲ್ವೆ ಸೇತುವೆ ಕೆಳಗೆ ಎಂದಿನಿಂದ ಮಳೆ ನೀರು ನಿಂತಿದ್ದರಿಂದ ಸಂಚಾರಕ್ಕೆ ತೊಡಕಾಗಿತ್ತು.

ತಾಲ್ಲೂಕಿನ ಪ್ರಸಿದ್ಧ ಅಯ್ಯನಬಾವಿ ತುಂಬಿ ತುಳುಕಿತು. ನಗರದ ಜನ ಅದನ್ನು ನೋಡಲೆಂದೇ ಹೋಗುತ್ತಿದ್ದರು. ಸೋಮವಾರವೂ ಮಳೆ ಸುರಿದಿದ್ದ ಹೊನ್ನವಳ್ಳಿ ಭಾಗದಲ್ಲಿ ಮಂಗಳವಾರ ಉತ್ತಮ ಮಳೆಯಾಯಿತು.

ಊರಿನ ಹಿರೇಕೆರೆಗೆ ಹಳ್ಳದಲ್ಲಿ ಭಾರಿ ನೀರು ಹರಿದು ಬಂತು. ಹೊನ್ನವಳ್ಳಿ ದೊಡ್ಡಟ್ಟಿಯ ಕೆಲ ಮನೆಗಳ ಹೊಸ್ತಿಲಿಗೆ ನೀರು ನುಗ್ಗಿತ್ತು. ಚರಂಡಿಯಲ್ಲಿ ನೀರು ಹರಿವು ಸರಾಗಗೊಳಿಸಿ ಅಪಾಯ ತಪ್ಪಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT