ADVERTISEMENT

ಮಳೆ ಬಿದ್ದರೆ ಕೆಸರು, ಬಿಸಿಲು ಕಾದರೆ ದೂಳು

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 8:10 IST
Last Updated 1 ಅಕ್ಟೋಬರ್ 2012, 8:10 IST
ಮಳೆ ಬಿದ್ದರೆ ಕೆಸರು, ಬಿಸಿಲು ಕಾದರೆ ದೂಳು
ಮಳೆ ಬಿದ್ದರೆ ಕೆಸರು, ಬಿಸಿಲು ಕಾದರೆ ದೂಳು   

ತುಮಕೂರು: ಮಳೆ ಬಿದ್ದರೆ ಕೆಸರು. ಬಿಸಿಲು ಕಾದರೆ ದೂಳು. ಒಂದು ಸಣ್ಣ ಸೋನೆ ಮಳೆ ಬಂದರೂ ಮೂರು ದಿನ ಕಷ್ಟ ಅನುಭವಿಸಬೇಕು. ಹೆಜ್ಜೆ ಇಡಲೂ ಆಗದ ಸ್ಥಿತಿ. ರಸ್ತೆಗಳು ಕೆಸರು ಗದ್ದೆಗಳು. ಜೋರು ಮಳೆ ಬಿದ್ದರೆ ಮನೆಯೊಳಗೆಲ್ಲಾ ನೆರೆ.

ಚರಂಡಿ ಗಗನ ಕುಸುಮ. ಇದರಿಂದ ಮಳೆ ನೀರೆಲ್ಲ ತಗ್ಗಿನಲ್ಲಿ ಸಂಗ್ರಹ. ಹತ್ತೆಂಟು ರೋಗಕ್ಕೆ ರಹದಾರಿ. ರಸ್ತೆಗಳ ಸ್ಥಿತಿ ಆ ದೇವರಿಗೆ ಮೆಚ್ಚುಗೆ. ಇದು ಏಳು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಪಸರಿಸಿರುವ ನಗರಸಭೆಯ 11ನೇ ವಾರ್ಡ್‌ನ (ಮೆಳೆಕೋಟೆ) ನೈಜ ಚಿತ್ರಣ.

ನಗರದ ಪ್ರಮುಖ ಭಾಗವಾದರೂ; ಅಭಿವೃದ್ಧಿ ಕಾಮಗಾರಿಗಳನ್ನು ಭೂತಗನ್ನಡಿಯಲ್ಲಿ ಹುಡುಕಬೇಕು. ಆದರೂ ಈ ಭಾಗದ ನಿವೇಶನಗಳಿಗೆ ವಿಪರೀತ ಬೇಡಿಕೆ. ವಾರ್ಡ್‌ನೆಲ್ಲೆಡೆ ಗ್ರಾಮೀಣ-ನಗರ ಸಂಸ್ಕೃತಿ ಮೈದಳೆದಿವೆ.

ಸದಾಶಿವನಗರ ವಾರ್ಡ್‌ನ ಪ್ರಮುಖ ಬಡಾವಣೆ. ಇಲ್ಲಿನ ಸಮಸ್ಯೆಗೆ ಕೊನೆ ಎಂದು ಎಂಬಂಥ ಸ್ಥಿತಿ. ಹಂದಿ-ನಾಯಿಗಳ ಉಪಟಳಕ್ಕೆ ಇಲ್ಲಿನ ಜನ ದಿಕ್ಕೆಟ್ಟಿದ್ದಾರೆ. ಮುಂಜಾನೆ ವಾಯು ವಿಹಾರಕ್ಕೆ ಹೋಗುವುದೇ ದುಸ್ತರ ಎನಿಸಿದೆ. ಇಡೀ ಪ್ರದೇಶವೇ ಕಸದ ತೊಟ್ಟಿಯಾಗಿದೆ.
 
ಖಾಲಿ ನಿವೇಶನಗಳಲ್ಲಿ ಕಸದ ರಾಶಿ ಬೆಳೆಯುತ್ತಿದ್ದು, ಪಕ್ಕದ ನಿವಾಸಿಗಳಲ್ಲಿ ಅಸಹ್ಯ ಮೂಡಿದೆ. ಸಮಸ್ಯೆಗೆ ಯಾರೊಬ್ಬರೂ ಸ್ಪಂದಿಸದಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನೂ ಇಲ್ಲಿನ ಉದ್ಯಾನದ ಸ್ಥಳ ಆಟದ ಮೈದಾನವಾಗಿದೆ. ಅಭಿವೃದ್ಧಿಗೆ ಮೀಸಲಾದ ಹಣ `ನುಂಗಣ್ಣರ~ ಪಾಲಾಗಿದೆ ಎಂಬ ಆರೋಪ ಬಡಾವಣೆಯ ಸಿ.ನಂಜುಂಡಯ್ಯ ಅವರದ್ದು.

ರಾಜೀವ್‌ಗಾಂಧಿ ನಗರದ ರಸ್ತೆಗಳು ಸೋನೆ ಮಳೆಗೂ ಕೆಸರುಗದ್ದೆಗಳಾಗುತ್ತವೆ. ನರಸಿಂಹಯ್ಯ ಕಾಲೊನಿಯೂ ಇದರಿಂದ ಹೊರತಲ್ಲ. ಎಲ್ಲಿ ನಡೆದಾಡಬೇಕು ಎಂಬುದೇ ತೋಚಲ್ಲ. ಚರಂಡಿ ಇಲ್ಲದಿರುವುದರಿಂದ ಮನೆ ಮುಂದೆಯೇ ಬಚ್ಚಲ ಕೊಚ್ಚೆ. ಇಲ್ಲಿನ ವಾಸ್ತವ ಚಿತ್ರಣ ಗಮನಿಸಿದರೆ ಕೊಳೆಗೇರಿಯೇ ಎಷ್ಟೋ ಪಾಲು ಉತ್ತಮ ಎಂಬಂಥ ಭಾವನೆ ಇಲ್ಲಿನವರದ್ದು. ಮಾತನಾಡಿ ಪ್ರಯೋಜನವಿಲ್ಲ. ಮುಂದಿನ ಚುನಾವಣೆಯಲ್ಲಿ ಉತ್ತರ ನೀಡುತ್ತೇವೆ ಎಂಬ ದಿಟ್ಟ ನುಡಿ ಸ್ಥಳೀಯರದ್ದು.

ಗಂಗಸಂದ್ರ ಹಳ್ಳಿಯ ಸೊಗಡು ಹೊದ್ದಿದೆ. ಸಮಸ್ಯೆಗಳಿಲ್ಲ. ದಲಿತರು ಕೂಲಿ ಅವಲಂಬಿಸಿ ಬದುಕು ಕಟ್ಟಿಕೊಂಡಿದ್ದರೆ, ಮೇಲ್ವರ್ಗದವರಿಗೆ ಕೃಷಿಯೇ ಜೀವನಾಧಾರ. ಇದ್ದುದರಲ್ಲೇ ಉತ್ತಮ ಎಂಬಂಥ ಸ್ಥಿತಿ. ಮೆಳೆಕೋಟೆ ಇದಕ್ಕಿಂತ ವಿಭಿನ್ನ. ನಗರ ಸಂಸ್ಕೃತಿ ದಟ್ಟೈಸಿದೆ. ಅಭಿವೃದ್ಧಿ ನಾಗಾಲೋಟದಲ್ಲಿದೆ.

ಸಂಪರ್ಕ ರಸ್ತೆಗಳು ಅಭಿವೃದ್ಧಿ ನಿರೀಕ್ಷೆಯಲ್ಲಿವೆ. ಚರಂಡಿ ಅವ್ಯವಸ್ಥೆ ಇಲ್ಲಿಯೂ ಮುಂದುವರಿದಿದೆ. ಮಳೆ ಬಿದ್ದರೆ ಓಡಾಡಲು ನಾಲ್ಕು ದಿನ ಬೇಕು. ವೀರಸಾಗರ ಬಡಾವಣೆಯೂ ಮೂಲ ಸೌಲಭ್ಯಗಳಿಂದ ವಂಚಿತಗೊಂಡಿದ್ದು; ಇಲ್ಲಿನ ಜನ ಇರುವುದರಲ್ಲೇ ತೃಪ್ತಿ ಪಡುತ್ತಾರೆ. ಚರಂಡಿ ಹೂಳೆತ್ತಿದ್ದರೂ; ಅದು ಮತ್ತೆ ಚರಂಡಿ ಪಾಲಿಗೆ.

ವಾರ್ಡ್ ವ್ಯಾಪ್ತಿಯಲ್ಲಿ ನಗರಸಭೆ ಸದಸ್ಯರ ಸಂಚಾರ ನಿರಂತರ. ತಮ್ಮ ಕಣ್ಣೆದುರೇ ಸಮಸ್ಯೆಗಳ ಸರಮಾಲೆ ಇದ್ದರೂ; ಸ್ಪಂದಿಸಲ್ಲ. ಪ್ರಶ್ನಿಸಿದರೆ `ಟೆಂಡರ್ ಆಗಿದೆ. ಶೀಘ್ರದಲ್ಲೇ ಕೆಲಸ ನಡೆಯುತ್ತದೆ. ಜೆಸಿಬಿ ಕಳುಹಿಸುತ್ತೇನೆ~ ಎಂಬ ಸಿದ್ಧ ಉತ್ತರದ ಜತೆಯೇ ಸಾಗುತ್ತಾರೆ ಎಂಬ ಆರೋಪ ವ್ಯಾಪಕ.

ಕೆಲಸ ನಡೆಯುತ್ತಿದೆ...
ದೊಡ್ಡ ವಾರ್ಡ್. ಈಗಾಗಲೇ ರೂ. 5.5 ಕೋಟಿ ವೆಚ್ಚದ ಕಾಮಗಾರಿ ನಡೆದಿದೆ. ಮುಖ್ಯಮಂತ್ರಿ ನಿಧಿಯಿಂದ ಬಿಡುಗಡೆಗೊಂಡ 42 ಕೋಟಿಯಲ್ಲಿ ನಮ್ಮ ವಾರ್ಡ್‌ಗೆ ರೂ. 2.25 ಕೋಟಿ ಮೀಸಲಿಡಲಾಗಿದೆ. ಈ ಹಣದಲ್ಲಿ ಮೆಳೆಕೋಟೆ-ವೀರಸಾಗರ-ಗಂಗಸಂದ್ರ ಭಾಗದಲ್ಲಿ ಯುಜಿಡಿ ಇರುವ ಕಡೆ ಚರಂಡಿ, ಸಿಮೆಂಟ್ ರಸ್ತೆ ನಿರ್ಮಿಸಲಾಗುವುದು.

ನೂರು ಕೋಟಿ ಅನುದಾನದಲ್ಲಿ ಇದೀಗ ರೂ.30 ಕೋಟಿ ಬಿಡುಗಡೆಯಾಗಿದೆ. ಇದರಲ್ಲಿ ವಾರ್ಡ್‌ನ ಸದಾಶಿವನಗರ ವ್ಯಾಪ್ತಿಯಲ್ಲಿ ರಸ್ತೆ-ಚರಂಡಿ ಅಭಿವೃದ್ಧಿ ಪಡಿಸಲು ರೂ.1.80 ಲಕ್ಷ ಮಂಜೂರಾಗಿದೆ. ಸದಸ್ಯನಾಗಿ ಆಯ್ಕೆಯಾದ ಬಳಿಕ ಎಂಟು ಕೊಳವೆಬಾವಿ ಹೊಸದಾಗಿ ಕೊರೆಸಲಾಗಿದೆ. ಮೂರನ್ನು ರಿಬೋರ್ ಮಾಡಿಸಲಾಗಿದೆ. ಇದೀಗ ಇಡೀ ಬಡಾವಣೆಗೆ `ಹೇಮೆ~ ಸಂಪರ್ಕ ಕಲ್ಪಿಸುತ್ತಿದ್ದು, ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಗೆ ಇತಿಶ್ರೀ ಬೀಳಲಿದೆ.
-ಹನುಮಂತರಾಯಪ್ಪ, ನಗರಸಭಾ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.