ADVERTISEMENT

ಮುಗಿಲೆತ್ತರಕ್ಕೆ ಬೆಳೆದ ಕಸದ ರಾಶಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 10:20 IST
Last Updated 3 ಸೆಪ್ಟೆಂಬರ್ 2011, 10:20 IST

ತುಮಕೂರು: ನಗರದ ವಿವಿಧ ಬಡಾವಣೆಗಳಲ್ಲಿ ಕಸದ ರಾಶಿಯ ಎತ್ತರ ಮತ್ತು ವಿಸ್ತಾರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೊಳೆತ ಕಸದ ವಾಸನೆ ಸಹ ವಿಪರೀತ ಅಸಹ್ಯ ತರುತ್ತಿದ್ದು, ನಗರ ವ್ಯಾಪ್ತಿಯಲ್ಲಿ ಬದುಕುತ್ತಿರುವವರ ಬದುಕು ಅಸಹನೀಯ ಪರಿಸ್ಥಿತಿ ಮುಟ್ಟಿದೆ.

ಸಂಗ್ರಹವಾದ ಕಸವನ್ನು ಹೊತ್ತೊ ಯ್ಯಲು ನಗರಸಭೆ ಸನ್ನದ್ಧ ಸ್ಥಿತಿಯಲ್ಲಿದೆ. ಆದರೆ ಸಂಗ್ರಹವಾದ ಕಸ ವನ್ನು ಎಲ್ಲಿ ವಿಲೇವಾರಿ ಮಾಡಬೇಕು? ಎಂಬ ಪ್ರಶ್ನೆಗೆ ಕಳೆದ ಮೂರ‌್ನಾಲ್ಕು ತಿಂಗಳಿನಿಂದ ಉತ್ತರವೇ ಸಿಗುತ್ತಿಲ್ಲ.
ಆಧುನಿಕ ತಂತ್ರಜ್ಞಾನ ಅಳವಡಿಸಿದ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಯಾಗದೆ ಸಮಸ್ಯೆ ಪರಿಹಾರ ವಾಗುವಂತಿಲ್ಲ. ಜಿಲ್ಲಾಧಿಕಾರಿ ಸ್ವತಃ ನಗರಾಭಿವೃದ್ಧಿ ಸಚಿವ ಎಸ್.ಸುರೇಶ್‌ಕುಮಾರ್, ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಈ ವಿಚಾರ ವನ್ನು ಹಲವು ಬಾರಿ ತಂದಿದ್ದರೂ ಕಿಂಚಿತ್ತೂ ಪ್ರಯೋಜನ ವಾಗಿಲ್ಲ.

ವಿರೋಧ: ಅಜ್ಜಗೊಂಡನಹಳ್ಳಿ ಗ್ರಾಮದ ಸಮೀಪ ನಿರ್ಮಾಣವಾಗ ಬೇಕಿದ್ದ ತ್ಯಾಜ್ಯ ವಿಲೇವಾರಿ ಘಟಕವನ್ನು ಸ್ಥಳೀಯರು ಮತ್ತು ಶಾಶಕರ ವಿರೋಧದಿಂದಾಗಿ ಶಿರಾ ರಸ್ತೆಯ ಸೀಬಿ ಗ್ರಾಮದ ಸಮೀಪವಿರುವ ಸರ್ಕಾರಿ ಭೂಮಿಗೆ ಸ್ಥಳಾಂತರಿಸಲಾ ಯಿತು. ಇದೀಗ ಅಲ್ಲಿಯೂ ಸ್ಥಳೀಯರ ವಿರೋಧ ವ್ಯಕ್ತವಾಗುತ್ತಿದೆ.


`ಸೀಬಿ ಸಮೀಪ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಜಿಲ್ಲಾಡಳಿತ ಗುರುತಿಸಿರುವ ಸ್ಥಳ ಸಂಪೂರ್ಣ ಅರಣ್ಯ ಭೂಮಿ. ಅಲ್ಲಿ ಉತ್ತಮ ಅರಣ್ಯವಿದೆ. ಅದು ಕಂದಾಯ ಇಲಾಖೆಗೆ ಸೇರಿಲ್ಲ. ಕಳ್ಳಂಬೆಳ್ಳ, ಶಿರಾ ಕೆರೆಗಳಿಗೆ ನೀರುಣಿಸುವ ಹೇಮಾವತಿ ಕಾಲುವೆಯೂ ಸಮೀಪದಲ್ಲಿ (ತಗ್ಗು ಪ್ರದೇಶದಲ್ಲಿ) ಹರಿದು ಹೋಗುತ್ತದೆ. ಎತ್ತದ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಿದರೆ ಕಾಲುವೆ ನೀರು ಮತ್ತು ಅಂತರ್ಜಲ ಕಲುಷಿತಗೊಳ್ಳುತ್ತದೆ. ಈ ಪ್ರದೇಶ ವಾಸ್ತವದಲ್ಲಿ ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ. ಕಡತಗಳಲ್ಲಿಯೂ ಈ ಪ್ರದೇಶವನ್ನು ಸಂಪೂರ್ಣವಾಗಿ ಅರಣ್ಯ ಇಲಾಖೆಗೆ ವರ್ಗಾಯಿಸಬೇಕು~ ಎಂದು ಆಗ್ರಹಿಸುತ್ತಾರೆ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮುದ್ದಮಡು ರಂಗಸ್ವಾಮಿ.

ಪರ್ಯಾಯ: ಇದೀಗ ನಗರಸಭೆ ಮೆಳೆಕೋಟೆ- ಗಂಗಸಂದ್ರ- ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್ ಸಮೀಪ ತ್ಯಾಜ್ಯ ವಿಲೇವಾರಿಗೆ ಸ್ಥಳ ದೊರಕಿಸಿಕೊಳ್ಳಲು ಯತ್ನಿಸುತ್ತಿದೆ. ಪ್ರತಿ ಟನ್‌ಗೆ ಇಂತಿಷ್ಟು ಶುಲ್ಕ ಎಂಬ ನಿಯಮದಡಿ ತ್ಯಾಜ್ಯ ವಿಲೇವಾರಿಗೆ ಒಪ್ಪಂದ ಮಾಡಿಕೊಳ್ಳಲು ನಗರಸಭೆ ಗಂಭೀರ ಯತ್ನ ಪ್ರಾರಂಭಿಸಿದೆ ಎನ್ನುತ್ತಾರೆ ನಗರಸಭೆ ಉಪಾಧ್ಯಕ್ಷ ಅಸ್ಲಾಂ ಪಾಷ.

ಮೊದಲೇ ನಗರದಲ್ಲಿ ಕಸ ತುಂಬಿ ತುಳುಕುತ್ತಿತ್ತು. ಇದೀಗ ಗೌರಿ- ಗಣೇಶ- ರಂಜಾನ್ ಸಾಲು ಸಾಲು ಹಬ್ಬಗಳಿಂದಾಗಿ ಕಸ ಸಂಗ್ರಹಣೆಯ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ. ಸೀಬಿ ಸಮೀಪ ಸರ್ಕಾರಿ ಜಾಗ ಸಿಕ್ಕರೆ ಅನುಕೂಲ. ಜಿಲ್ಲಾಧಿಕಾರಿ ಈ ಕುರಿತು ತಕ್ಷಣ ಶಿರಾ ಶಾಸಕರು ಮತ್ತು ಸಾರ್ವಜನಿಕರ ಜತೆಗೆ ಮಾತನಾಡಬೇಕು ಎಂದು ಪಾಷ ಅಭಿಪ್ರಾಯಪಡುತ್ತಾರೆ.

ಹಾನಿಯಿಲ್ಲ: ಶೀಬಿ ಗ್ರಾಮದ ಸಮೀಪ ನಿರ್ಮಿಸುವ ಘನತ್ಯಾಜ್ಯ ವಿಲೇವಾರಿ ಘಟಕ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುತ್ತದೆ. ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ. ವಿಲೇವಾರಿ ಘಟಕದಲ್ಲಿ ಶಿರಾ ಪಟ್ಟಣ ಸೇರಿದಂತೆ ಸುತ್ತಲಿನ ಮುಖ್ಯ ಗ್ರಾಮ ಮತ್ತು ಪಟ್ಟಣಗಳಲ್ಲಿ ಸಂಗ್ರಹವಾಗುವ ತ್ಯಾಜ್ಯ ವಿಲೇವಾರಿಗೂ ಅವಕಾಶ ಕಲ್ಪಿಸಲಾಗುವುದು. ಘಟಕದ ಕಾರ್ಯನಿರ್ವಹಣೆಯಿಂದ ಪರಿಸರ ಮೇಲೆ ಆಗುವ ಪರಿಣಾಮಗಳ ಮೌಲ್ಯ ಮಾಪನವನ್ನು ಮೂರನೇ ವ್ಯಕ್ತಿ, ಏಜೆನ್ಸಿಯಿಂದ ಮಾಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಸಿ. ಸೋಮಶೇಖರ್ ಹೇಳಿದರು.

ಚಿತ್ರದುರ್ಗದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕ ಇಡೀ ರಾಜ್ಯಕ್ಕೇ ಮಾದರಿಯಾಗಿ ಕಾರ್ಯನಿರ್ವಹಿಸು ತ್ತಿದೆ. ಶೀಬಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ವಿರೋಧಿಸುತ್ತಿರುವ ವರ ತಂಡವನ್ನು ಒಮ್ಮೆ ಚಿತ್ರದುರ್ಗಕ್ಕೆ ಕರೆದೊಯ್ದು ತಂತ್ರಜ್ಞಾನದ ಪರಿಚಯ ಮಾಡಿಕೊಟ್ಟು ಮನವೊಲಿಸ ಬೇಕೆಂದು ನಗರಾಭಿವೃದ್ಧಿ ಸಚಿವ ಎಸ್.ಸುರೇಶ್‌ಕುಮಾರ್ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.