ADVERTISEMENT

ಮುದ್ದಹನುಮೇಗೌಡ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 6:31 IST
Last Updated 22 ಮಾರ್ಚ್ 2014, 6:31 IST

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಶುಕ್ರವಾರ ನಾಮಪತ್ರ ಸಲ್ಲಿಸಿದರು. ಪತ್ನಿ ಕಲ್ಪನಾ ಮತ್ತು ಕುಟುಂಬ ವರ್ಗದೊಂದಿಗೆ ಆಗಮಿಸಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.

3 ಕೋಟಿ ಆಸ್ತಿ ಒಡೆಯ
ಮುದ್ದಹನುಮೇಗೌಡ ಅವರು ಸುಮಾರು ₨ 3 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಇದರಲ್ಲಿ ಸ್ಥಿರಾಸ್ತಿ ₨ 2.5 ಕೋಟಿ ಮತ್ತು ₨ 40.48 ಲಕ್ಷ ಮೌಲ್ಯದ ಚರ ಆಸ್ತಿ ಇದೆ ಎಂದು ಅವರು ಘೋಷಿಸಿಕೊಂಡಿದ್ದಾರೆ.

ಪತ್ನಿ ಕಲ್ಪನಾ ಬಳಿ 500 ಗ್ರಾಂ ಚಿನ್ನ, 500 ಗ್ರಾಂ ಬೆಳ್ಳಿ (ಬೆಲೆ ₨ 12.25 ಲಕ್ಷ) ಇದೆ. ಮುದ್ದಹನುಮೇಗೌಡರು ನಗದು ₨ 22 ಲಕ್ಷ ಮತ್ತು ಬ್ಯಾಂಕ್‌ನಲ್ಲಿ ₨ 11.23 ಲಕ್ಷ ಠೇವಣಿ ಇಟ್ಟಿದ್ದಾರೆ. ₨ 5.75 ಲಕ್ಷ ಮೌಲ್ಯದ ಮಹೇಂದ್ರ ಸ್ಕಾರ್ಪಿಯೋ ಮತ್ತು ಸ್ಯಾಂಟ್ರೊ ಕಾರು ಹೊಂದಿದ್ದಾರೆ.

ತುಮಕೂರು ತಾಲ್ಲೂಕಿನ ಕಲ್ಕೆರೆಯಲ್ಲಿ 11 ಎಕರೆ ಮತ್ತು ರಾಮೇನಹಳ್ಳಿ 12.12 ಎಕರೆ ಕೃಷಿ ಭೂಮಿ ಹೊಂದಿದ್ದು, ಇದರ ಮೌಲ್ಯ ₨ 25 ಲಕ್ಷ. ಬೆಂಗಳೂರಿನ ಸಂಜಯನಗರದಲ್ಲಿ ₨ 1.75 ಕೋಟಿ ಮೌಲ್ಯದ ಮನೆ ಇದೆ.

ಇದೆಲ್ಲವೂ ಸೇರಿ ₨ 2 ಕೋಟಿ ಪಿತ್ರಾರ್ಜಿತ ಆಸ್ತಿ ಮತ್ತು ಬೆಂಗಳೂರು ಮಠದಹಳ್ಳಿಯಲ್ಲಿ ₨ 50 ಲಕ್ಷ ಮೌಲದ್ಯ 4 ಸಾವಿರ ಚದರಡಿ ಸ್ವಯಾರ್ಜಿತ ನಿವೇಶನ ಇರುವುದಾಗಿ ಅವರು ಘೋಷಿಸಿದ್ದಾರೆ. ಬಿಎ, ಎಲ್‌ಎಲ್‌ಬಿ ವಿದ್ಯಾರ್ಹತೆ ಹೊಂದಿರುವುದಾಗಿ ತಿಳಿಸಿದ್ದಾರೆ.

ಕರುನಾಡು ಪಕ್ಷದಿಂದ ವೆಂಕಟೇಶ್‌ ನಾಮಪತ್ರ
ಕರುನಾಡು ಪಕ್ಷದ ಅಭ್ಯರ್ಥಿಯಾಗಿ ಬಿ.ವೆಂಕಟೇಶ್‌ ಶುಕ್ರವಾರ ನಾಮಪತ್ರ ಸಲ್ಲಿಸಿದರು.

ಅಭ್ಯರ್ಥಿ ಮತ್ತು ಪತ್ನಿ ಹೆಸರಿನಲ್ಲಿ ಒಟ್ಟು ₨ 50 ಲಕ್ಷ ಮೌಲ್ಯದ ಆಸ್ತಿ ಇದ್ದು, ₨ 44 ಲಕ್ಷ ಬ್ಯಾಂಕ್‌ ಸಾಲವಿದೆ ಎಂದು ಘೋಷಿಸಿದ್ದಾರೆ.

ಹಿರಿಯೂರಿನ ಕನಗನಹಳ್ಳಿಯಲ್ಲಿ ₨ 9.75 ಲಕ್ಷ ಮೌಲ್ಯದ 15 ಎಕರೆ ಕೃಷಿ ಭೂಮಿ ಮತ್ತು ಬೆಂಗಳೂರಿನ ಪಣತ್ತೂರಿನಲ್ಲಿ ₨ 25 ಲಕ್ಷ ಬೆಲೆಯ 10 ಗುಂಟೆ ಭೂಮಿ ಇದೆ. ₨ 9.5 ಲಕ್ಷ ಬೆಲೆಯ ಕಾರು ಮತ್ತು ₨ 50 ಸಾವಿರ ನಗದು ಇದೆ. ಪತ್ನಿ ಹೆಸರಿನಲ್ಲಿ ಬೆಂಗಳೂರಿನ ಬೋಗನಹಳ್ಳಿಯಲ್ಲಿ ₨ 16 ಲಕ್ಷ ಬೆಲೆಯ ಮನೆ ಇದೆ. ಅಲ್ಲದೆ ₨ 7.5 ಲಕ್ಷ ಬೆಲೆಯ ಚಿನ್ನಾಭರಣ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.