ADVERTISEMENT

ಮೂಡಲ್ ಕುಣಿಗಲ್ ಕೆರೆಯ ಆರ್ತನಾದ

ಪ್ರಜಾವಾಣಿ ವಿಶೇಷ
Published 10 ಜುಲೈ 2013, 13:41 IST
Last Updated 10 ಜುಲೈ 2013, 13:41 IST

ಕುಣಿಗಲ್: ಒಂದು ಕಾಲದಲ್ಲಿ ಮೂಡಲ್ ಕುಣಿಗಲ್ ಕೆರೆಯ `ವೈಭೋಗ' ನೋಡಲು `ಚಂದಿರಾಮ'ನೇ ಬರುತ್ತಿದ್ದನಂತೆ. ನೂರಾರು ಕವಿಗಳಿಗೆ ಸ್ಫೂರ್ತಿಯಾಗಿದ್ದ ಅದೇ ಕುಣಿಗಲ್ ಕೆರೆ ಇಂದು ಹಲ ಕಾರಣಗಳಿಂದ ಕಳೆಗುಂದಿದೆ. `ಚಂದಿರಾಮ' ಮುಖ ತಿರುಗಿಸಿ ಮುಂದೆ ಹೋಗುವ ಸ್ಥಿತಿಗೆ ತಲುಪಿದೆ.

ಜಿಲ್ಲೆಯ ಕೆರೆಗಳ ಪೈಕಿ ಕುಣಿಗಲ್ ದೊಡ್ಡಕೆರೆಗೆ ವಿಶಿಷ್ಟ ಸ್ಥಾನವಿದೆ. ಈ ಹಿಂದೆ ಶಿವಗಂಗೆ ಬೆಟ್ಟದ ಕಡೆಯಿಂದ ನಾಗಿನಿ, ನಳಿನಿ, ಕಮಲ ನದಿಗಳು ಹರಿದು ಬಂದು ಸಂಗಮವಾಗುತ್ತಿದ್ದವು. ಬೃಹತ್ ಜಲಸಿರಿ ನೋಡುಗರ ಮನಸೂರೆಗೊಳ್ಳುತ್ತಿತ್ತು. ಶಿವಗಂಗೆ ಬೆಟ್ಟದಿಂದ ಹರಿದು ಬರುವ ಮೂರು ನದಿಗಳು ಕೆಂಪುಮಣ್ಣಿನ ಭೂಮಿಯ ಮೇಲೆ ಹಾದು, ಕೆರೆಯ ನೀರು ಸಹ ಕೆಂಬಣ್ಣಕ್ಕೆ ತಿರುಗಿ ದೊಡ್ಡಕೆರೆಯ ಜಲಸಿರಿ ಕೆಂಬಣ್ಣದಿಂದ ಕಂಗೊಳಿಸತ್ತಿತ್ತು.

ದೊಡ್ಡಕೆರೆಯ ಹಿಂದಿನ ಒಂಬತ್ತು ಕೆರೆಗಳು ಸಂಪೂರ್ಣ ಭರ್ತಿಯಾಗಿ ಕೋಡಿಯಾದ ನಂತರ 10ನೇ ಕೆರೆಯಾಗಿ ಕುಣಿಗಲ್ ದೊಡ್ಡಕೆರೆ ತುಂಬುತ್ತಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಹಿಂದಿನ ಕೆರೆಗಳ ಕೋಡಿ ನೀರು ಸರಾಗವಾಗಿ ದೊಡ್ಡಕೆರೆಗೆ ಬರುತ್ತಿಲ್ಲ. ರಾಜಕಾಲುವೆಗಳ ಸರಪಣಿ ಮಾಯವಾಗಿರುವ ಕಾರಣ ದೊಡ್ಡಕೆರೆ ತುಂಬಲು `ಹೇಮೆ'ಯ ಕರುಣೆ ಬೇಕಿದೆ.

ಜನಪದ ಗೀತೆಗಳ ಪ್ರಕಾರ ದೊಡ್ಡಕೆರೆಯ ಸುತ್ತಳತೆ 14 ಮೈಲಿ. ಕಂದಾಯ ಇಲಾಖೆ ದಾಖಲೆಗಳ ಪ್ರಕಾರ ಇಂದು ದೊಡ್ಡಕೆರೆಯ ವಿಸ್ತೀರ್ಣ ಕೇವಲ 1026 ಎಕರೆಗೆ ಇಳಿದಿದೆ. ಪಟ್ಟಣದ ಮಧ್ಯಭಾಗದಲ್ಲಿರುವ ದೊಡ್ಡಕೆರೆಯ ಒಂದು ಬದಿ ರಾಷ್ಟ್ರೀಯ ಹೆದ್ದಾರಿ ಮತ್ತೊಂದು ಬದಿ ರಾಜ್ಯ ಹೆದ್ದಾರಿ ಹಾದುಹೋಗಿದೆ. ಹೀಗಾಗಿ ಆಸುಪಾಸಿನ ಭೂಮಿಗೆ ಚಿನ್ನದ ಬೆಲೆ ಇದೆ. ಕೆರೆ ಪ್ರದೇಶದ ಒತ್ತುವರಿಗೆ ಇದು ಮುಖ್ಯ ಕಾರಣ.

ಕುಣಿಗಲ್ ಕೆರೆ ಉಳಿಸುವ ಉದ್ದೇಶದಿಂದ 2008ರಿಂದ 2010ರವರೆಗೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸಾರ್ವಜನಿಕರು ಹೋರಾಟ ನಡೆಸಿದ ಪರಿಣಾಮ ಸರ್ಕಾರ ಒತ್ತುವರಿ ತೆರವುಗೊಳಿಸಿ, ಕೆರೆಯ ಜಾಗ ಗುರುತಿಸಿ ಬೇಲಿ ಹಾಕಿತು.

ಆದರೆ ಕೆರೆಯ ಮತ್ತೊಂದು ಬದಿಯಲ್ಲಿರುವ ಹೌಸಿಂಗ್ ಬೋರ್ಡ್, ನೀಲತ್ತಹಳ್ಳಿ, ಅರಸರಪಾಳ್ಯ, ಕಪಿನಿಪಾಳ್ಯ, ಸೊಬಗಾನಹಳ್ಳಿ, ಬಾಗೇನಹಳ್ಳಿ ಪ್ರದೇಶದಲ್ಲಿ ಕೆರೆ ಪ್ರದೇಶದ ಅತಿಕ್ರಮಣ ಮುಂದುವರೆದಿದೆ. ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಹೌಸಿಂಗ್ ಬೋರ್ಡ್ ಪ್ರದೇಶದಲ್ಲಿ ಕೆರೆಗೆ ದೊಡ್ಡ ಬಂಡೆಗಳನ್ನು ಹಾಕಿ, ಕೆರೆ ಪ್ರದೇಶವನ್ನು ರಿಯಲ್ ಎಸ್ಟೆಟ್ ದಂಧೆಗೆ ಬಳಸಿಕೊಳ್ಳುತ್ತಿರುವ ಆರೋಪಗಳು ಕೇಳಿ ಬರುತ್ತಿವೆ.

ಪಟ್ಟಣದ ಗುಜ್ಜಾರಿಮೊಹಲ್ಲ, ಉಪ್ಪಾರರ ಬಡಾವಣೆ ಪ್ರದೇಶಕ್ಕೆ ಹೊಂದಿಕೊಂಡಿರುವ ಚಿಕ್ಕಕೆರೆಯು ಭೂ ಕಬಳಿಕೆದಾರರ ಕಬಂಧ ಬಾಹುಗಳಿಗೆ ಸಿಕ್ಕಿ, ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಸ್ಥಿತಿ ತಲುಪಿದೆ. ಪುರಸಭೆಯ ಘನತ್ಯಾಜ್ಯ ವಿಲೇವಾರಿಯಿಂದಾಗಿ ಚಿಕ್ಕಕೆರೆಯ ಕೋಡಿಯ ಒಂದು ಭಾಗ ಮುಚ್ಚಿಹೋಗಿದೆ. ಮತ್ತೊಂದು ಬದಿಯನ್ನು ಕೆಲ ಪ್ರಭಾವಿಗಳು ವ್ಯವಸ್ಥಿತವಾಗಿ ಮುಚ್ಚಿ, ಪೆಟ್ಟಿಗೆ ಅಂಗಡಿಗಳನ್ನಿಟ್ಟುಕೊಂಡಿದ್ದಾರೆ. ಕೆರೆಯ ಕೋಡಿ ಪ್ರದೇಶ ವಾಹನ, ಆಟೊ ದುರಸ್ತಿ ಮಾಡುವ ಸ್ಥಳವಾಗಿ ಬಳಕೆಯಾಗುತ್ತಿದೆ.

ಒಟ್ಟು ಕೆರೆಗಳು 151: ತಾಲ್ಲೂಕಿನಲ್ಲಿ ಒಟ್ಟು 151 ಕೆರೆಗಳಿವೆ. ಇವುಗಳ ಪೈಕಿ ಹೇಮಾವತಿ ನಾಲಾ ವಲಯಕ್ಕೆ 9 ಕೆರೆಗಳು ಒಳಪಡಲಿವೆ. ಸಣ್ಣ ನೀರಾವರಿ ಹಾಗೂ ಜಿ.ಪಂ.ನ ಬಹುತೇಕ ಕೆರೆಗಳು ಒತ್ತುವರಿಯಾಗಿವೆ. ಸರ್ವೇ ನಡೆಸಿ `ಹದ್ದುಬಸ್ತು' ನಿಗದಿಗೊಳಿಸಬೇಕು ಎಂದು ಅಧಿಕಾರಿಗಳು ತಹಶೀಲ್ದಾರ್‌ಗೆ ಮನವಿ ಮಾಡಿದ ಮೇರೆಗೆ ಕೆಲ ಕೆರೆಗಳಲ್ಲಿ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ.

ಎಡೆಯೂರು ಹೇಮಾವತಿ ನಾಲಾ ವಲಯಕ್ಕೆ ಮಂಗಳಾ, ಮಾರ್ಕೋನಹಳ್ಳಿ ಜಲಾಶಯದ ಅಚ್ಚುಕಟ್ಟು ಪ್ರದೇಶದ ಕೆರೆಗಳು ಸೇರಲಿದೆ. ಇದರ ಜತೆಯಲ್ಲಿ ಅಮೃತೂರು ಹೋಬಳಿ ಕೀಲಾರದವೆರಗಿನ 15ಕ್ಕೂ ಹೆಚ್ಚು ಕೆರೆಗಳು ಜಲಾಶಯದ ವ್ಯಾಪ್ತಿಯಲ್ಲಿದೆ. ಈ ಕೆರೆ ಸರಪಣಿಯ ಕಾಲುವೆಗಳ ನಿರ್ವಹಣೆ ಸರಿಯಾಗಿ ನಡೆಯದೆ ಕೆರೆಗಳಿಗೆ ನೀರು ಹರಿಯುತ್ತಿಲ್ಲ. ಕಾಲುವೆಗಳ ಕಾಂಕ್ರೀಟ್ ಲೈನಿಂಗ್, ತೂಬುಗಳನ್ನು ದುರಸ್ತಿಗೊಳಿಸಿದರೆ ಎಲ್ಲ 15 ಕೆರೆಗಳಿಗೂ ಸಮರ್ಪಕವಾಗಿ ನೀರು ಹರಿಯಲಿದೆ.

ಅಮೃತೂರು ಹೋಬಳಿಯ ಕುಪ್ಪೆ ಕೆರೆಯ ಒತ್ತುವರಿ ತೆರವುಗೊಳಿಸಿ ಹೂಳೆತ್ತಲಾಗಿದೆ. ಬಂಡೀಹಳ್ಳಿ, ದೊಡ್ಡಕೊಪ್ಪಲು, ಮುತ್ತರಾಯನ ಕೆರೆ, ದೀಪಾಂಬುದಿಕೆರೆ, ಶಿವನಹಳ್ಳಿ ಕೆರೆಗಳು ಒತ್ತುವರಿಯಾಗಿವೆ. ಗಣೇಶಕಡ್ಡಿಗಳಿಂದ ಆವೃತ್ತವಾಗಿರುವ ಈ ಕೆರೆಗಳಲ್ಲಿ ಮರಳು ಸಾಗಣೆ ದಂಧೆ ಎಗ್ಗಿಲ್ಲದೆ ಸಾಗಿದೆ. ಶಿವನಹಳ್ಳಿ ಕೆರೆ ತಾಲ್ಲೂಕಿನ ಗಡಿಭಾಗದಲ್ಲಿರುವುದರಿಂದ ಕೆರೆ ಮಣ್ಣು ಸೇರಿದಂತೆ ಕೆಳಭಾಗದಲ್ಲಿನ ಮರಳು ಸಹ ವ್ಯಾಪಕವಾಗಿ ಸಾಗಾಣೆಯಾಗುತ್ತಿದೆ.

ಹುಲಿಯೂರುದುರ್ಗ ಕೆರೆಯಿಂದ ದೊಡ್ಡಕೊಪ್ಪಲು, ಬಂಡಿಹಳ್ಳಿ ಕೆರೆಗೆ ಸಾಗುವ ರಾಜಗಾಲುವೆ ಸಂಪೂರ್ಣ ಕಳೆಗಿಡಗಳಿಂದ ಆವೃತ್ತವಾಗಿದೆ. ನೀರು ಹರಿಯಲು ಸಾಧ್ಯವಾಗುತ್ತಿಲ್ಲವೆಂದು ಬಂಡೀಹಳ್ಳಿ ಗ್ರಾಮಸ್ಥರು ಹೇಳುತ್ತಾರೆ.

ನಿರ್ವಹಣೆ ಮತ್ತು ನಿಗಾದ ಕೊರತೆಯಿಂದ ಸಾರ್ವಜನಿಕ ಸ್ವತ್ತುಗಳು ಅನಾಥವಾಗುತ್ತಿದೆ. ಸಮಾಜದಲ್ಲಿ ಈ ಕುರಿತು ಶೀಘ್ರ ಜಾಗೃತಿ ಮೂಡದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ. ನಮ್ಮೂರಿನ ಕೆರೆಗಳನ್ನು ವಿದೇಶದಿಂದ ಬಂದವರು ಒತ್ತುವರಿ ಮಾಡಿಕೊಂಡಿಲ್ಲ. ಒತ್ತುವರಿ ಮಾಡಿಕೊಂಡಿರವ ಸ್ಥಳೀಯರು ಅಧಿಕಾರಿಗಳ ಸ್ವತಂತ್ರ ಕಾರ್ಯ ನಿರ್ವಹಣೆಗೂ ಅವಕಾಶ ಕೊಡುತ್ತಿಲ್ಲ. ರಾಜಕಾರಣಿಗಳು ಸಹ ತಮ್ಮ ಪ್ರಭಾವದ ಅಭಯ ಹಸ್ತವನ್ನು ಒತ್ತುವರಿದಾರರಿಗೆ ನೀಡಿದ್ದಾರೆ. ಹೀಗಾಗಿ ಕೆರೆಗಳ ಭವಿಷ್ಯ ನೆನಸಿಕೊಂಡರೆ ಭಯವಾಗುತ್ತದೆ ಎಂದು ಪಟ್ಟಣದ ರಾಮಕೃಷ್ಣಯ್ಯ, ಗಂಗಾಧರಪ್ಪ, ಮರಿಯಪ್ಪ ಆತಂಕ ವ್ಯಕ್ತಪಡಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.