ADVERTISEMENT

ಯಡಿಯೂರಪ್ಪ ಹಣ ಹೊರ ಬರಲಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2011, 10:05 IST
Last Updated 25 ಜನವರಿ 2011, 10:05 IST

ತುರುವೇಕೆರೆ: ಬಿಜೆಪಿ ರಾಷ್ಟ್ರೀಯ ಮುಖಂಡರು ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪು ಹಣ ತೆಗೆಸುವ ಮೊದಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಮಕ್ಕಳು ನಾಡಿನ ಬ್ಯಾಂಕುಗಳಲ್ಲಿಟ್ಟಿರುವ ಕಳ್ಳ ಹಣ ಹೊರತೆಗೆಸಬೇಕು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಇಲ್ಲಿ ಸೋಮವಾರ ಆಗ್ರಹಿಸಿದರು.

ಪಟ್ಟಣದಲ್ಲಿ ಜೆಡಿಎಸ್ ವತಿಯಿಂದ ಜಿಲ್ಲಾ, ತಾಲ್ಲೂಕು ಪಂಚಾಯತಿ ನೂತನ ಸದ್ಯಸರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಬಿಜೆಪಿ ರಾಷ್ಟ್ರೀಯ ನಾಯಕರು ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ. ಎಲ್.ಕೆ.ಅಡ್ವಾನಿ ಅವರಂತಹ ನಾಯಕರೂ ಯಡಿಯೂರಪ್ಪ ಅವರಿಗೆ ಕುಮ್ಮಕ್ಕು ನೀಡುವ ಮೂಲಕ ತಮ್ಮ ಮೇರು ವ್ಯಕ್ತಿತ್ವಕ್ಕೆ ಧಕ್ಕೆ ಉಂಟು ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿಗಳು ಜಾತಿ, ಮಠಾಧೀಶರ ಬೆಂಬಲ ಹಾಗೂ ಧನದ ಮದದಿಂದ ತಮ್ಮ ಸ್ಥಾನದ ಘನತೆಗೆ ಅಗೌರವ ತರುವಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿಗೆ ಕೊಟ್ಟ ಅಧಿಕಾರದ ಶಕ್ತಿಯನ್ನು ಹಿಂದೆ ಪಡೆದು ಮತ್ತೆ ವಿಧಾನಸೌಧದಲ್ಲಿ ಜೆಡಿಎಸ್ ಅಧಿಕಾರ ಹಿಡಿಯುವಂತೆ ಮಾಡಲು ತಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಘೋಷಿಸಿದರು.

ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಮಾತನಾಡಿ, ಯಡಿಯೂರಪ್ಪ ಅವರಂತಹ ಭಂಡ ಮುಖ್ಯಮಂತ್ರಿಯನ್ನು ನನ್ನ ಜೀವಮಾನದಲ್ಲೇ ಕಂಡಿಲ್ಲ. ಯಡಿಯೂರಪ್ಪ ಭಸ್ಮಾಸುರನ ತರಹ ಬಿಜೆಪಿಯನ್ನು ನಿರ್ನಾಮಗೊಳಿಸಲಿದ್ದು ಶೀಘ್ರವೇ ವಿಧಾನಸಭೆಗೆ ಚುನಾವಣೆ ಬರಲಿದೆ. ಬಿಜೆಪಿ ಸುಮಾರು 50 ಸ್ಥಾನಗಳಲ್ಲಷ್ಟೇ ಗೆಲುವು ಸಾಧಿಸಬಹುದು ಎಂದು ಭವಿಷ್ಯ ನುಡಿದರು.

ತಮಗೆ ಮುಖ್ಯಮಂತ್ರಿ ಸ್ಥಾನದ ಆಸೆಯಿಲ್ಲ. ಕುಮಾರಸ್ವಾಮಿಯನ್ನು ಮತ್ತೆ ಮುಖ್ಯಮಂತ್ರಿ ಮಾಡುವುದೇ ತಮ್ಮ ಗುರಿ ಎಂದು ಪ್ರಕಟಿಸಿದರು.ಇತ್ತೀಚೆಗೆ ನಡೆದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಗಳಲ್ಲಿ ಜೆಡಿಎಸ್ ವತಿಯಿಂದ ಸ್ಪರ್ಧಿಸಿದ್ದ ಹಾಗೂ ವಿಜಯಿಯಾದ ಅಭ್ಯರ್ಥಿಗಳನ್ನು ಸಂಸದ ಎನ್.ಚೆಲುವರಾಯಸ್ವಾಮಿ ಅಭಿನಂದಿಸಿದರು. ಬಿಜೆಪಿ ಮತ್ತು ಕಾಂಗ್ರೆಸ್‌ನ ಹಲವಾರು ನಾಯಕರು ಪಕ್ಷ ತೊರೆದು ಜೆಡಿಎಸ್ ಸೇರಿದರು.

ಶಾಸಕ ಎಂ.ಟಿ.ಕೃಷ್ಣಪ್ಪ ಪ್ರಾಸ್ತಾವಿಕ ಭಾಷಣ ಮಾಡಿದರು. ಮಾಜಿ ಸಚಿವ ಎಂ.ಶಿವಣ್ಣ, ಶಾಸಕ ಎಂ.ಟಿ.ಕೃಷ್ಣಪ್ಪ,  ವಿಧಾನಪರಿಷತ್ ಸದಸ್ಯರಾದ ಹುಲಿನಾಯ್ಕರ್, ಅಬ್ದುಲ್ ಅಜೀಂ, ಜೆಡಿಎಸ್ ಜಿಲ್ಲಾಧ್ಯಕ್ಷ ಎಚ್.ನಿಂಗಪ್ಪ, ಶಾಸಕ ಸಿ.ಎಸ್.ಪುಟ್ಟಸ್ವಾಮಿ. ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಸ್ವಾಮಿ, ಪ.ಪಂ. ಅಧ್ಯಕ್ಷ ಆರ್.ಮಲ್ಲಿಕಾರ್ಜುನ್, ಡಿ.ಆರ್.ಬಸವರಾಜ್, ಲೀಲಾವತಿ ಗಿಡ್ಡಯ್ಯ, ಕೊಂಡಜ್ಜಿ ವಿಶ್ವನಾಥ್, ಎ.ಬಿ.ಜಗದೀಶ್, ರೇಣುಕಾರಾದ್ಯ, ಡಿ.ಎನ್.ಶಂಕರೇಗೌಡ, ಸೋಮಶೇಖರ್, ರಾಜ್ ಕಿಶನ್, ತಾತಯ್ಯ ಉಪಸ್ಥಿತರಿದ್ದರು. ವಕೀಲ ಮುದ್ದೇಗೌಡ ಸ್ವಾಗತಿಸಿದರು. ಕುಶಾಲ್ ಕುಮಾರ್ ವಂದಿಸಿದರು. ಶಂಕರೇಗೌಡ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.