ADVERTISEMENT

ಯೋಜನೆ ಸರ್ಕಾರದ್ದು, ಪರಿವರ್ತನೆ ನಮ್ಮದು

​ಪ್ರಜಾವಾಣಿ ವಾರ್ತೆ
Published 4 ಜುಲೈ 2012, 5:15 IST
Last Updated 4 ಜುಲೈ 2012, 5:15 IST

ತುಮಕೂರು: ಸರ್ಕಾರಗಳು ಯೋಜನೆ ರೂಪಿಸಿ ಹಣಕಾಸು ಬಿಡುಗಡೆ ಮಾಡಬಹುದು. ಆದರೆ ಅವು ಕಾರ್ಯರೂಪಕ್ಕೆ ಬರಬೇಕಾದರೆ ಜನರು ಮನಸು ಮಾಡಬೇಕು. ಅಭಿವೃದ್ಧಿಗೆ ಜನರ ಮನಸ್ಸನ್ನು ಪ್ರೇರೇಪಿಸುವ ಕೆಲಸವನ್ನು ಅಪ್ನಾದೇಶ್ ಮಾಡಲಿದೆ ಎಂದು ರಾಜ್ಯ ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಭರತ್ ಲಾಲ್ ಮೀನಾ ಹೇಳಿದರು.

ಮಂಗಳವಾರ ನಗರದಲ್ಲಿ ರಾಜ್ಯ ಕೃಷಿ ಇಲಾಖೆ ಮತ್ತು ಸರ್ಕಾರಿ ನೌಕರರ ಸಂಘ, `ಅಪ್ನಾದೇಶ್~ ಆಯೋಜಿಸಿದ ಕೃಷಿ ಕ್ಷೇತ್ರ- ಹೊಸ ಚಿಂತನೆ ಸಂವಾದ ಕಾರ್ಯಕ್ರಮದಲ್ಲಿ ಮಾತಾನಾಡಿದರು.

ಕಟ್ಟಡ ನಿರ್ಮಾಣ, ಯೋಜನೆ ರೂಪಿಸುವುದು ಸರ್ಕಾರಗಳ ಕೆಲಸವಾಗಿದೆ. ಇದನ್ನು ಹೊರತು ಪಡಿಸಿ ಸರ್ಕಾರ ಮಾಡಲು ಆಗದ ಜನರ ಮನ ಪರಿವರ್ತನಾ ಕೆಲಸವನ್ನು ನಾವು ಮಾಡಬೇಕಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಗೋವಿಂದರಾಜು ಮಾತಾನಾಡಿ, ಸರ್ಕಾರಿ ಅಧಿಕಾರಿಗಳು ಕೇವಲ ಲೆಕ್ಕಪತ್ರ, ಇಲಾಖೆ ನಿಗದಿಪಡಿಸಿದ ಗುರಿ ಬಗ್ಗೆ ಅಷ್ಟೇ ಯೋಚಿಸುವುದನ್ನು ಬಿಟ್ಟು ಸಾಮಾನ್ಯ ಜನರಂತೆ ಹಳ್ಳಿಗಳ ಉದ್ದಾರಕ್ಕೆ ತೊಡಗಬೇಕು ಎಂದರು.

ಜಿಲ್ಲಾಧಿಕಾರಿ ಆರ್.ಕೆ.ರಾಜು, ಅಪ್ನಾದೇಶ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಡಾ.ರಾಜನಾಯ್ಕ ಇದ್ದರು.

ಜಿಲ್ಲೆಗೆ ಕಾಲಿಟ್ಟ `ಅಪ್ನಾದೇಶ್~
ಗ್ರಾಮಾಭಿವೃದ್ಧಿಯಲ್ಲಿ ಮಹತ್ವದ ಸಾಧನೆ ಮಾಡಿ ತೋರಿಸಿರುವ `ಅಪ್ನಾದೇಶ್~ ಸ್ವಯಂ ಸೇವಾ ಸಂಘಟನೆ ಜಿಲ್ಲೆಗೆ ಕಾಲಿಟ್ಟಿದೆ. ಐಎಎಸ್ ಅಧಿಕಾರಿ, ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಭರತ್‌ಲಾಲ್ ಮೀನಾ ಸ್ಥಾಪಕರು.

ಜಿಲ್ಲೆಯಲ್ಲಿ 800 ಮಂದಿ ಸ್ವಯಂ ಸೇವಕರನ್ನು ಅಪ್ನಾದೇಶ್ ನೇಮಕ ಮಾಡಿದ್ದು, ಹಳ್ಳಿಗಳಲ್ಲಿ ಸರ್ಕಾರಿ ಯೋಜನೆಗಳ ಕುರಿತು ಜನರನ್ನು ಜಾಗೃತಗೊಳಿಸುವ ಕೆಲಸ ಮಾಡಲಿದೆ.

ಸ್ವಯಂ ಸೇವಕರು ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳ ಮಾಹಿತಿ ಪಡೆಯುವರು. ಈ ಯೋಜನೆಗಳ ನೆರವು ಪಡೆಯುವಲ್ಲಿ ತಮ್ಮ ಗ್ರಾಮದ ಜನರಿಗೆ ತಾವೇ ಮಾಹಿತಿ ನೀಡಲಿದ್ದಾರೆ. ಆಯಾ ಗ್ರಾಮದ ಕೆಲಸಗಳನ್ನು ಸಮುದಾಯ ಸಹಭಾಗಿತ್ವದೊಂದಿಗೆ ನಿರ್ವಹಿಸುವ ವಾತಾವರಣ ರೂಪಿಸಿರುವುದು ಅಪ್ನಾದೇಶ್ ಉದ್ದೇಶವಾಗಿದೆ.

ಜಿಲ್ಲೆಯ ಎಲ್ಲ ಹಳ್ಳಿಗಳನ್ನು ನಿರ್ಮಲ ಗ್ರಾಮ, ಮದ್ಯಪಾನ ರಹಿತ, ವ್ಯಾಜ್ಯರಹಿತ ಗ್ರಾಮಗಳನ್ನು ರೂಪಿಸುವ ಕನಸನ್ನು ಅಪ್ನಾದೇಶ್ ಹೊತ್ತಿದೆ. ಜಿಲ್ಲಾ ಪಂಚಾಯಿತಿ ಸಿಇಒ ಗೋವಿಂದರಾಜು ಅಪ್ನಾದೇಶ್ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ.

ಪ್ರವೇಶ ಮಿತಿ ಹೆಚ್ಚಿಸಲು ಆಗ್ರಹ
ತುಮಕೂರು: ಪಿಯುಸಿ ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣ ಹೆಚ್ಚಿರುವುದರಿಂದ ಜಿಲ್ಲೆಯ ಪದವಿ ಕಾಲೇಜುಗಳ ಪ್ರವೇಶ ಮಿತಿ ಹೆಚ್ಚಿಸಬೇಕೆಂದು ಎಬಿವಿಪಿ ನಗರ ಕಾರ್ಯದರ್ಶಿ ರೂಪೇಶ್ ಆಗ್ರಹಿಸಿದ್ದಾರೆ.

ಪದವಿ ಸೇರ ಬಯಸುವರರ ಸಂಖ್ಯೆ ಹೆಚ್ಚಾಗಿದೆ. ಪದವಿ ಕಾಲೇಜುಗಳಿಗೆ ದಾಖಲಾತಿಗಳು ಹೆಚ್ಚಿನ ಪ್ರಮಾಣದಲ್ಲಿ ಬಂದಿದ್ದರು ವಿಶ್ವವಿದ್ಯಾಲಯ  ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ಮಿತಿ ಹೆಚ್ಚಿಸದೆ ಇರುವುದು ದುರದೃಷ್ಟಕರವಾಗಿದೆ ಎಂದು ಖಂಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.