ADVERTISEMENT

ರಸ್ತೆಯಲ್ಲಿ ಚೆಲ್ಲಾಡಿದ ದನದ ಮೂಳೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 9:45 IST
Last Updated 13 ಜನವರಿ 2012, 9:45 IST

ಹುಳಿಯಾರು: ಪಟ್ಟಣದಲ್ಲಿ ಹಾದು ಹೋಗುವ ಬೀದರ್- ಶ್ರಿರಂಗಪಟ್ಟಣ ಮುಖ್ಯ ಹೆದ್ದಾರಿ ಚಿಕ್ಕಬಿದರೆ ಸಮೀಪದ ರಸ್ತೆಯಲ್ಲಿ ಗುರುವಾರ ಬೆಳಿಗ್ಗೆ ಸಾಕಷ್ಟು ಪ್ರಮಾಣದ ದನದ ಮೂಳೆ ಬಿದ್ದಿದ್ದರಿಂದ ದಾರಿ ಹೋಕರು ಹಾಗೂ ಗ್ರಾಮಸ್ಥರಲ್ಲಿ ಕೆಲ ಕಾಲ ಅತಂಕದ ಸ್ಥಿತಿ ನಿರ್ಮಾಣವಾಗಿತ್ತು.

ಚಿಕ್ಕಬಿದರೆ ಗ್ರಾಮದ ಬಳಿಯಿಂದ ಅಂಕನಬಾವಿ ಗೇಟ್‌ನ  6 ಕಿ.ಮೀ ದೂರದವರೆಗೆ ಸುಮಾರು ಒಂದು ಕ್ಯಾಂಟರ್ ಲಾರಿಯಲ್ಲಿ ಸಾಗಿಸುತ್ತಿದ್ದ ಲೋಡಿನಷ್ಟು ದನದ ಮೂಳೆ ನಡು ರಸ್ತೆಯಲ್ಲಿ ಬಿದ್ದಿದ್ದರಿಂದ ದಾರಿಹೋಕರಿಗೆ ತೊಂದರೆಯಾಯಿತು. ಅಲ್ಲದೆ ವಾಹನ ಚಾಲಕರಿಗೆ ಮೂಳೆಗಳನ್ನು ತಪ್ಪಿಸಿಕೊಂಡು ಹೋಗುವುದು ಸವಾಲಾಗಿತ್ತು. ಹುಳಿಯಾರು ಕಡೆಯಿಂದ ಬಂದ ಕ್ಯಾಂಟರ್‌ನಿಂದ ಮೂಳೆ ಬೀಳುತ್ತಿತ್ತು. ಲಾರಿಯನ್ನು ಹಿಡಿಯುವ ಪ್ರಯತ್ನ ಸಪಲವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಲಾರಿಯಲ್ಲಿ ದನದ ಮೂಳೆಯನ್ನು ಎಲ್ಲಿಂದ- ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿಲ್ಲ. ತೀವ್ರ ಬರಗಾಲದ ಪರಿಣಾಮ ರೈತರು ತಮ್ಮ ರಾಸುಗಳನ್ನು ಮಾರುತ್ತಿದ್ದು, ಸರ್ಕಾರ ಗೋಶಾಲೆ ತೆರೆದು ರೈತರ ನೆರವಿಗೆ ಬರಬೇಕು ಎಂದು ತಾಲ್ಲೂಕು ಸಾವ ಯವ ಕೃಷಿ ಪರಿವಾರದ ಅಧ್ಯಕ್ಷ ಕಲ್ಲಹಳ್ಳಿ ಮಲ್ಲೇಶಯ್ಯ ಅಗ್ರಹಿಸಿದರು. ಪೋಲಿಸರು ದೊಡ್ಡಬಿದರೆ ಗ್ರಾಮ ಪಂಚಾಯಿತಿ ನೆರವಿನೊಂದಿಗೆ ರಸ್ತೆಯಲ್ಲಿದ್ದ ಮೂಳೆಗಳನ್ನು ತೆರವುಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.