ADVERTISEMENT

ರಸ್ತೆ ಕಾಮಗಾರಿಗೆ ₹ 5 ಕೋಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2017, 9:14 IST
Last Updated 17 ಅಕ್ಟೋಬರ್ 2017, 9:14 IST

ಚಿಕ್ಕನಾಯಕನಹಳ್ಳಿ: ‘ಕೇಂದ್ರ ರಸ್ತೆ ನಿಧಿ ಯೋಜನೆ ಅಡಿಯಲ್ಲಿ ವಿವಿಧ ಜಿಲ್ಲಾ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ 14 ಕಿ.ಮೀ ಡಾಂಬರು ರಸ್ತೆ ಕಾಮಗಾರಿಗಳಿಗೆ ₹ 5 ಕೋಟಿ ಬಿಡುಗಡೆಯಾಗಿದೆ’ ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದರು. ತಾಲ್ಲೂಕಿನ ಸಾಸಲು, ಸಾಲ್ಕಟ್ಟೆಕ್ರಾಸ್ ಹಾಗೂ ನಿರ್ಮಾಣೇಶ್ವರ ಗದ್ದುಗೆ ಬಳಿ ರಸ್ತೆ ನಿರ್ಮಾಣ ಕಾರ್ಯಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದರು.

‘ಜಿಲ್ಲಾ ಮುಖ್ಯರಸ್ತೆ ಜೆ.ಸಿಪುರ, ಅಗಸರಹಳ್ಳಿ, ಬ್ಯಾಡರಹಳ್ಳಿ ಸಾಸಲು ಹಾಗೂ ಕುಪ್ಪೂರು ಸೇರಿದಂತೆ ನಾನಾ ಭಾಗಗಳ 18 ಕಿ.ಮೀ ರಸ್ತೆ ಹಾಗೂ ಸಾಲ್ಕಟ್ಟೆ ಕ್ರಾಸ್‌ನಿಂದ ಬೆಳ್ಳಾರದ ವರೆಗೆ ಆಯ್ದ ಭಾಗಗಳಲ್ಲಿ ರಸ್ತೆ ವಿಸ್ತರಣೆ ಸೇರಿದಂತೆ ಅಭಿವೃದ್ಧಿ ಕೆಲಸಗಳಿಗೆ ₹ 9 ಕೋಟಿ ಹಣ ವ್ಯಯಿಸಲಾಗಿದೆ.

ಪಟ್ಟಣದ ಬಳಿ ಇರುವ ಶ್ರೀಗುರು ನಿರ್ವಾಣೇಶ್ವರ ಸ್ವಾಮಿ ಗದ್ದುಗೆಯಲ್ಲಿ ಸಚಿವ ಎಂ.ಆರ್ ಸೀತಾರಾಂ ಅವರ ಬಯಲು ಸೀಮೆ ಅಭಿವೃದ್ಧಿ ಯೋಜನೆ ಹಾಗೂ ಎಚ್.ಕೆ.ಡಿ.ಬಿ ವಿಶೇಷ ಅನುದಾನ ಅಡಿಯಲ್ಲಿ ₹ 1.10 ಕೋಟಿ ಹಾಗೂ ರಸ್ತೆ ಎರಡು ಬದಿಗಳಲ್ಲಿ ಜಂಗಲ್ ತೆಗೆಯುವುದು ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಗಳನ್ನು ₹ 2 ಕೋಟಿ ವೆಚ್ಚದಲ್ಲಿ ಮಾಡಲಾಗುವುದು’ ಎಂದು ವಿವರಿಸಿದರು.

ADVERTISEMENT

ಶಾಸಕ ಸಿ.ಬಿ.ಸುರೇಶ್‌ಬಾಬು ಮಾತನಾಡಿ, ‘ನಿರ್ವಾಣಸ್ವಾಮಿ ದೇವಾಲಯದಿಂದ ಭೂತರಾಯಸ್ವಾಮಿ ದೇವಾಲಯದವರೆಗೆ ಸಿ.ಸಿ.ರಸ್ತೆ ನಿರ್ಮಾಣಕ್ಕೆ ₹ 50 ಲಕ್ಷ, ಬಾವನಹಳ್ಳಿ ರಸ್ತೆಯಿಂದ ಕೋಡಿಹಳ್ಳಿ ರಸ್ತೆಯವರೆಗೆ ಡಾಂಬರೀಕರಣಕ್ಕೆ ₹ 35 ಲಕ್ಷ, ದಿಬ್ಬದಹಳ್ಳಿ ಗ್ರಾಮದಲ್ಲಿ ಸಿ.ಸಿ.ರಸ್ತೆ ನಿರ್ಮಾಣಕ್ಕೆ ₹20 ಲಕ್ಷ, ಜೋಡಿ ಹೊಸಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಮಹಡಿ ಕಟ್ಟಡ ನಿರ್ಮಾಣಕ್ಕೆ ₹ 5 ಲಕ್ಷ ಬಿಡುಗಡೆಯಾಗಿದೆ’ ಎಂದರು.

ಕನ್ನಡ ಸಂಘದ ವತಿಯಿಂದ ರೈಲ್ವೆ ಮಾರ್ಗ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಕಲ್ಲೇಶ್ ವೈ.ಸಿ.ಸಿದ್ದರಾಮಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಹೊನ್ನಮ್ಮ, ಉಪಾಧ್ಯಕ್ಷ ಆಲದಕಟ್ಟೆ ತಿಮ್ಮಯ್ಯ, ಸದಸ್ಯೆ ಜಯಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು, ಎಪಿಎಂಸಿ ಸದಸ್ಯ ಸಣ್ಣಯ್ಯ, ನಿರ್ವಾಣಸ್ವಾಮಿ ದೇವಾಲಯದ ಧರ್ಮದರ್ಶಿ ಗೋಪಾಲಗೌಡ, ರಮೇಶ್, ಮಾಜಿ ಪುರಸಭೆ ಅಧ್ಯಕ್ಷ ಎಂ.ಎನ್.ಸುರೇಶ್, ಪುರಸಭಾ ಸದಸ್ಯ ಕೆ.ಜಿ.ಕೃಷ್ಣೆಗೌಡ, ಬನಶಂಕರಿ ದೇವಾಲಯದ ಸಮಿತಿ ಅಧ್ಯಕ್ಷ ಬಸವರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.