ADVERTISEMENT

ರಾಜಕಾರಣ; ದೇಶ ವಿಭಜಿಸುವುದಲ್ಲ

ಚಿಂತಕರ ಚಾವಡಿ ಸಂವಾದ; ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್‌ ನುಡಿ

​ಪ್ರಜಾವಾಣಿ ವಾರ್ತೆ
Published 7 ಮೇ 2018, 13:54 IST
Last Updated 7 ಮೇ 2018, 13:54 IST
ರಾಮ್‌ ಮಾಧವ್
ರಾಮ್‌ ಮಾಧವ್   

ತುಮಕೂರು: ‘ಎಲ್ಲ ಪಕ್ಷಗಳು ಒಂದೇ ರೀತಿಯಲ್ಲಿ ಯೋಚಿಸಿ ಒಂದೇ ದಾರಿಯಲ್ಲಿ ಸಾಗಿದಾಗ ದೇಶದ ಅಭಿವೃದ್ಧಿ ಸಾಧ್ಯ’ ಎಂದು ಲೇಖಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್‌ ಮಾಧವ್‌ ಅವರು ತಿಳಿಸಿದರು.

ನಗರದಲ್ಲಿ ಭಾನುವಾರ ‘ಚಿಂತಕರ ಚಾವಡಿ’ ಹಮ್ಮಿಕೊಂಡಿದ್ದ ರಾಮ್ ಮಾಧವ ಅವರೊಂದಿಗೆ ಮಾಹಿತಿಪೂರ್ಣ ಸಂವಾದದಲ್ಲಿ ಮಾತನಾಡಿದರು.

‘ರಾಜಕೀಯ ಎನ್ನುವುದು ದೇಶ ಕಟ್ಟುವ ಹಾಗೂ ಸಂಘಟಿಸುವ ಕೆಲಸ. ಅದರ ಹೊರತು ಅದನ್ನು ವಿಭಜಿಸುವ ಕಾರ್ಯವನ್ನು ಮಾಡಬಾರದು. ಆದರೆ ಇಂದು ಈ ವಿಭಜನೆಯೇ ರಾಜಕಾರಣ ಎನ್ನುವಂತೆ ಆಗಿದೆ’ ಎಂದು ನುಡಿದರು.

ADVERTISEMENT

ಭ್ರಷ್ಟಾಚಾರ ಅಭಿವೃದ್ಧಿಗೆ ಮಾರಕವಾಗಿದೆ. ಭ್ರಷ್ಟಾ‌ಚಾರ ನಿರ್ಮೂಲನೆ ಹೇಗೆ ಮಾಡಬೇಕು ಎನ್ನುವುದಕ್ಕೆ ಪೂರಕವಾದ ಮಾಹಿತಿ ನಮ್ಮಲ್ಲಿಯೇ ಇದೆ. ನಮ್ಮಲ್ಲಿ ಭ್ರಷ್ಟಾಚಾರ ಮನೋಭಾವ ಯಾವಾಗ ಮನಸ್ಸಿನಿಂದ ಹೊರ ಹೋಗುತ್ತದೆಯೋ ಅಂದು ಅದರ ನಿರ್ಮೂಲನೆ ಸಾಧ್ಯ ಎಂದು ತಿಳಿಸಿದರು.

ಭಾಷೆಗಳನ್ನು ಕಡೆಗಣಿಸು ತ್ತಿರುವುದು ಸಹ ದೇಶಕ್ಕೆ ಮಾರಕ. ಮಾತೃ ಭಾಷೆ ಹಾಗೂ ರಾಷ್ಟ್ರೀಯ ಭಾಷೆಯನ್ನು ಬಿಟ್ಟು ಆಂಗ್ಲ ಭಾಷೆಯ ಮೊರೆ ಹೋಗುತ್ತಿರುವುದು ಸಮಂಜಸ ಅಲ್ಲ. ಕನ್ನಡ ಬಹಳ ಪ್ರಾಚೀನ ಭಾಷೆ. ಅದಕ್ಕೆ ಒಂದು ಸ್ಥಾನಮಾನ ಇದೆ. ಅದನ್ನು ಕಾಪಾಡಿಕೊಂಡು ಹೋಗುವ ಕೆಲಸ ಮಾಡಬೇಕು ಎಂದರು.

‘ಸ್ವಚ್ಛ ಭಾರತ ಅಭಿಯಾನದ ಮೂಲಕ ಕೇಂದ್ರ ಸರ್ಕಾರ ದೇಶವನ್ನು ಸ್ವಚ್ಛ ಮಾಡಲು ಮುಂದಾಗಿದೆ. ಸುಮಾರು 6 ಕೋಟಿ ಶೌಚಾಲಯ ನಿರ್ಮಿಸಲಾಗಿದೆ.  ಆದರೆ ಅದರ ಸದ್ಬಳಕೆ ಮಾಡಿಕೊಳ್ಳದೆ ಇರುವುದು ಮಾರಕವಾಗುತ್ತಿದೆ’ ಎಂದರು.

ಹಸಿವು ಮುಕ್ತ ರಾಜ್ಯಕ್ಕಾಗಿ ಇಂದಿರಾ ಕ್ಯಾಂಟೀನ್‌, ಅಮ್ಮ ಕ್ಯಾಂಟೀನ್‌ ತೆರೆಯಲಾಗಿದೆ. ಇದು ಉತ್ತಮ ಕೆಲಸ. ಆದರೆ ಅದರಿಂದ ಯಾರಿಗೆ ಅನುಕೂಲ ಆಗಬೇಕೋ ಅವರಿಗೆ ದೊರೆಯುತ್ತಿಲ್ಲ ಎಂದು ಹೇಳಿದರು.

ದೇಶದ ಅಭಿವೃದ್ಧಿಗೆ ಮೊದಲು ನಿರುದ್ಯೋಗ ನಿರ್ಮೂಲನೆ ಮಾಡಬೇಕು. ಆದರೆ ಎಲ್ಲರಿಗೂ ಸರ್ಕಾರಿ ಕೆಲಸ ನೀಡಬೇಕು ಎನ್ನುವುದು ಕಷ್ಟದ ಸಂಗತಿ. ಆದ್ದರಿಂದ ಕೇಂದ್ರ ಸರ್ಕಾರ ಮುದ್ರಾ ಯೋಜನೆ ಜಾರಿಗೆ ತಂದು ಯುವಕ–ಯುವತಿಯರಿಗೆ ಸ್ವ ಉದ್ಯೋಗ ನೀಡುವಲ್ಲಿ ಮುಂದಾಗಿದೆ. ಇದರಿಂದ ನಿರುದ್ಯೋಗ ಹೋಗಲಾಡಿಸಲು ಸಾಧ್ಯ ಎಂದು ತಿಳಿಸಿದರು.

ಈ ಬಾರಿಯ ತ್ರಿಪುರ‌ದಲ್ಲಿ  ಚುನಾವಣೆಯಲ್ಲಿ ಶೇ 88, ನಾಗಾಲ್ಯಾಂಡ್‌ನಲ್ಲಿ ಶೇ 92 ಮತದಾನವಾಗಿದೆ. ಇಲ್ಲಿ ಶೇ 100ರಷ್ಟು ಮತದಾನ ಏಕೆ ಆಗಿಲ್ಲ ಅಂದರೆ ಈ ರಾಜ್ಯದ ಕೆಲವರು ವಿದೇಶ ಹಾಗೂ ಬೆಂಗಳೂರಿನಲ್ಲಿ ಬಂದು ವಾಸಿಸುತ್ತಿದ್ದಾರೆ. ಮತದಾನ ಎಲ್ಲರ ಹಕ್ಕು ಅದನ್ನು ಚಲಾಯಿಸಬೇಕು.  ಶೇ 100 ರಷ್ಟು ಮತದಾನ ಮಾಡಿ ನವಕರ್ನಾಟಕ ನಿರ್ಮಾಣದಲ್ಲಿ ಭಾಗವಹಿಸಿ ಎಂದು ಅವರು ತಿಳಿಸಿದರು.

ಬೆಂಗಳೂರು ಸಣ್ಣ ದೇಶ

ಬೆಂಗಳೂರು ಒಂದು ದೇಶದಂತೆಯೇ ಬೆಳೆದಿದೆ. ಇಡೀ ವಿಶ್ವದಾದ್ಯಂತ ಗಮನ ಸೆಳೆದಿದೆ. ಎಲ್ಲೆ ಹೋಗಿ ಯಾರನ್ನೇ ಕೇಳಿದರೂ ನನ್ನ ಮಗ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾನೆ. ಉತ್ತಮ ವೃತ್ತಿ ಮಾಡಿತ್ತಿದ್ದಾನೆ ಎನ್ನುವರು ಅಷ್ಟರ ಮಟ್ಟಿಗೆ ಬೆಂಗಳೂರು ಜನರ ಮನಸ್ಸಿನಲ್ಲಿ ಉಳಿದಿದೆ ಬೆಳೆದಿದೆ ಎಂದು ರಾಮ್ ಮಾಧವ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.