ADVERTISEMENT

ರಾಜಕೀಯಕ್ಕೆ ಕರೆತಂದ ಸಮಾಜವಾದಿ ಚಳವಳಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2018, 7:15 IST
Last Updated 28 ಫೆಬ್ರುವರಿ 2018, 7:15 IST
ಮಾಧುಸ್ವಾಮಿ
ಮಾಧುಸ್ವಾಮಿ   

ತುಮಕೂರು: ‘1989ರ ವಿಧಾನಸಭಾ ಚುನಾವಣೆ. ಜನತಾ ಪರಿವಾರದ ಒಡಕಿನ ಲಾಭ ಪಡೆಯುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಅಂದಿನ ವೀರಶೈವ–ಲಿಂಗಾಯತರ ಪ್ರಬಲ ನಾಯಕ ವೀರೇಂದ್ರ ಪಾಟೀಲ್ ಅವರಿಗೆ ಪಕ್ಷ ಮುನ್ನಡೆಸುವ ಜವಾಬ್ದಾರಿ ನೀಡಿತು. ಕಾಂಗ್ರೆಸ್ 178 ಸ್ಥಾನಗಳಲ್ಲಿ ಗೆಲುವು ಸಾಧಿಸಿತು. ಕಾಂಗ್ರೆಸ್‌ ಮತ್ತು ಪಾಟೀಲರ ಆ ತೀವ್ರ ಅಲೆಯ ನಡುವೆಯೂ ಜನತಾ ಪಕ್ಷದಿಂದ ನಾನು ಗೆದ್ದು ಬಂದೆ’.

ಹೀಗೆ ‘ಪ್ರಜಾವಾಣಿ’ ಜತೆ ತಮ್ಮ ರಾಜಕೀಯ ಇತಿಹಾಸವನ್ನು ನೆನಪಿಸಿಕೊಂಡರು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಜೆ.ಸಿ.ಮಾಧುಸ್ವಾಮಿ.

‘ಜೆಸಿಎಂ’ ಎಂದು ಪರಿಚಿತರಾಗಿರುವ ಅವರು, ಇಲ್ಲಿಯವರೆಗೆ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ರಾಮಕೃಷ್ಣ ಹೆಗಡೆ, ದೇವೇಗೌಡ, ಬೊಮ್ಮಾಯಿ, ಜೆ.ಎಚ್‌.‍ಪಟೇಲ್ ಹೀಗೆ ಜನತಾದಳದಲ್ಲಿ ಮುತ್ಸದ್ಧಿಗಳ ಸಂಪರ್ಕದಲ್ಲಿ ಬೆಳೆದವರು ಮಾಧುಸ್ವಾಮಿ. ರಾಮಕೃಷ್ಣ ಹೆಗಡೆ ಆಪ್ತ ವಲಯದಲ್ಲಿ ಇದ್ದವರು. ವಿಧಾನಸಭೆಯಲ್ಲಿ ‘ಉತ್ತಮ ಸಂಸದೀಯ ಪಟು’ ಎನಿಸಿಕೊಂಡವರು.

ADVERTISEMENT

ಸಮಾಜವಾದಿ ಚಳವಳಿಯಿಂದ ಪ್ರೇರೇಪಿತನಾಗಿ ವಿದ್ಯಾರ್ಥಿ ದಿಸೆಯಲ್ಲಿಯೇ ಹೋರಾಟಗಳಲ್ಲಿ ಪಾಲ್ಗೊಂಡಿದ್ದೆ. 1983ರ ಚುನಾವಣೆಯಲ್ಲಿಯೇ ಜನತಾಪಕ್ಷದಿಂದ ಟಿಕೆಟ್ ದೊರೆಯಬೇಕಿತ್ತು. ಆಗ ಸಚಿವರಾಗಿದ್ದ ಎನ್‌.ಬಸವಯ್ಯ ಅವರ ವಿರುದ್ಧ ಸ್ಪರ್ಧಿಸಬೇಕಿತ್ತು. ಜನತಾ ಪಕ್ಷ ಮತ್ತು ಬಿಜೆಪಿ ನಡುವೆ ಹೊಂದಾಣಿಕೆ ಆಗಿ ಬಿಜೆಪಿಯ ಎಸ್‌.ಜಿ.ರಾಮಲಿಂಗಯ್ಯ ಅವರಿಗೆ ಟಿಕೆಟ್ ನೀಡಿದರು. ರಾಮಲಿಂಗಯ್ಯ ಗೆಲುವು ಸಾಧಿಸಿದರು.

ಕಾಂಗ್ರೆಸ್ ಪ್ರಾಬಲ್ಯದ ನಡುವೆ 89ರ ಚುನಾವಣೆಯಲ್ಲಿ ಜನತಾ‍ದಳದಿಂದ 24 ಶಾಸಕರು ಆಯ್ಕೆಯಾದರು. ಹಳೇ ಮೈಸೂರಿನಲ್ಲಿ ಏಕಾಂತಯ್ಯ, ಚಂದ್ರೇಗೌಡ ಹೀಗೆ ಬೆರಳಣಿಕೆಯಷ್ಟು ಮಂದಿ. ಜಿಲ್ಲೆಯಿಂದ ಆಯ್ಕೆಯಾದವನಲ್ಲಿ ನಾನೂ ಒಬ್ಬ.

84ರಲ್ಲಿಯೇ ರಾಜ್ಯ ಹಾಲು ಒಕ್ಕೂಟದ (ಕೆಎಂಎಫ್‌) ಅಧ್ಯಕ್ಷ, ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದೆ. 1977–78ರಿಂದಲೇ ನಾನು ಚುನಾವಣಾ ಪ್ರಚಾರಗಳಲ್ಲಿ ಸಕ್ರಿಯನಾಗಿದ್ದೆ. ಜನತಾಪಕ್ಷದ ಚಿಕ್ಕನಾಯಕನಹಳ್ಳಿ ತಾಲ್ಲೂಕು ಘಟಕದ ಕಾರ್ಯದರ್ಶಿಯಾಗಿದ್ದೆ. ಮೊದಲ ಬಾರಿ ಶಾಸನಸಭೆಗೆ ಕಾಲಿಟ್ಟಾಗ ಅಲ್ಲಿ ಎಂ.ರಾಜಶೇಖರ ಮೂರ್ತಿ, ಎಂ.ವೈ.ಘೋರ್ಪಡೆ, ನಾಗರತ್ನಮ್ಮ ಹೀಗೆ ಘಟಾನುಘಟಿ ಸಚಿವರು ಇದ್ದರು. ಕಾಂಗ್ರೆಸ್‌ ಗಾಳಿಯ ನಡುವೆಯೇ ನಮ್ಮ ಧ್ವನಿಯನ್ನು ಮೊಳಗಿಸಬೇಕಿತ್ತು.

ತುರ್ತು ಪರಿಸ್ಥಿತಿ ತಂದು ಕೊಟ್ಟ ಸಂಪರ್ಕ: ಸಮಾಜವಾದಿ ಚಳವಳಿಯಲ್ಲಿದ್ದ ನನ್ನಂತಹ ಯುವಕರು ತುರ್ತು ಪರಿಸ್ಥಿತಿಯನ್ನು ಪ್ರಬಲವಾಗಿ ವಿರೋಧಿಸಿದ್ದೆವು. ಆಗ ಮೈಸೂರಿನಲ್ಲಿ ನನ್ನ ಕಾರ್ಯಚಟುವಟಿಕೆ’ ಎಂದು 1975ರ ತಮ್ಮ ಚಟುವಟಿಕೆಗಳನ್ನು ಸ್ಮರಿಸುವರು ಜೆಸಿಎಂ.

ಸುರೇಂದ್ರ ಮೋಹನ್, ಜಾರ್ಜ್ ಫರ್ನಾಂಡಿಸ್, ಮಧುಲಿಮೆ ಅವರಂತಹ ಸಮಾಜವಾದಿ ನಾಯಕರ ಸಂಪರ್ಕ ದೊರೆತಿದ್ದು ಈ ಸಂದರ್ಭದಲ್ಲಿಯೇ. ಭೂಗತ ಚಟುವಟಿಕೆಗಳಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದೆವು ಅಲ್ಲಿಂದ ಸಂಪರ್ಕಗಳು ಗಟ್ಟಿಗೊಂಡವು.

ಜೆಡಿಎಸ್‌ನಿಂದ ರಾಜ್ಯಸಭಾ ಚುನಾವಣೆಗೆ ರಾಜಶೇಖರ ಮೂರ್ತಿ ಸ್ಪರ್ಧಿಸಿದರು. ‘ನಿಮ್ಮ ಪಕ್ಷದ ಅಭ್ಯರ್ಥಿ ಇಲ್ಲ. ಯಾರಿಗೆ ಓಟು ಹಾಕುತ್ತೀರಾ’ ಎಂದು ಹಲವರು ಕೇಳಿದರು. ನಾನು ರಾಜಶೇಖರ ಮೂರ್ತಿ ಅವರಿಗೆ ಎಂದು ಹೇಳಿದೆ. ಮತ್ತೊಮ್ಮೆ ಬಿಜೆಪಿಯಿಂದ ಶಕುಂತಲಾ ಹೆಗಡೆ ಸ್ಪರ್ಧೆ ಮಾಡಿದ್ದರು. ಆಗ ಅವರನ್ನು ಜೆಡಿಯು ಶಾಸಕರು ಬೆಂಬಲಿಸಿದ್ದೆವು. ಇದನ್ನು ಏಕೆ ನೆನಪು ಮಾಡಿಕೊಳ್ಳುವೆ ಅಂದರೆ ಆ ರಾಜ್ಯಸಭಾ ಚುನಾವಣೆಗಳಲ್ಲಿ ಬಹಳಷ್ಟು ಆಸೆ–ಆಮಿಷಗಳು ಮತಕ್ಕಾಗಿ ಇತ್ತು. ಆದರೆ ಉತ್ತಮ ಅಭ್ಯರ್ಥಿ ಆಯ್ಕೆ ಮಾಡಬೇಕು ಎನ್ನುವುದಷ್ಟೇ ನಮ್ಮ ದೃಷ್ಟಿಯಲ್ಲಿ ಇದಿದ್ದು. ಇಂದಿನ ಹಣದ ಥೈಲಿಯ ರಾಜಕಾರಣದ ನಡುವೆ ನನ್ನಂತಹವನು ಇಲ್ಲಿ ಉಳಿಯಲು ಸಾಧ್ಯವಾಗಿದೆ ಅಂದರೆ ಅದಕ್ಕೆ ಕಾರಣ ರಾಮಕೃಷ್ಣ ಹೆಗಡೆ, ಜಾರ್ಜ್ ಫರ್ನಾಂಡಿಸ್. ಆ ಮೌಲ್ಯಾಧಾರಿತ ರಾಜಕಾರಣಿಗಳ ಸಖ್ಯ ನನ್ನನ್ನು ಬೆಳೆಸಿತು.

₹ 2 ಲಕ್ಷದಲ್ಲಿ ಗೆಲುವು

‘ಮೊದಲ ಚುನಾವಣೆಯಲ್ಲಿ ನಾನು ಮಾಡಿದ ವೆಚ್ಚ ₹ 2 ಲಕ್ಷ. ಆ ಹಣ ನನ್ನ ಕೈಯಿಂದ ಹಾಕಿದ್ದಲ್ಲ. ಜನರೇ ಕೊಟ್ಟಿದ್ದು. ನನಗೆ ಅಚ್ಚರಿ ಎನಿಸುವುದು ಅಂದು ಕಾಂಗ್ರೆಸ್‌ ಪಕ್ಷದಿಂದ ಬಿ.ಫಾರಂ ಸಿಕ್ಕಿದರೆ ಯಾರಾದರೂ ಗೆಲ್ಲುವ ಸ್ಥಿತಿ ಇತ್ತು’ ಎಂದು ಚುನಾವಣಾ ದಿನಗಳ ಬಗ್ಗೆ ಹೇಳುವರು.

‘ನಾನು ರಾಜಕಾರಣಕ್ಕೆ ಬಂದ ದಿನಗಳಿಗೂ ಇಂದಿಗೂ ಅಜಗಜಾಂತರ ವ್ಯತ್ಯಾಸ ಇದೆ. ಅದರಲ್ಲಿಯೂ ಕಳೆದ ಎರಡು ಚುನಾವಣೆಗಳಿಂದ ಹಣವೇ ಪ್ರಧಾನ ಎನ್ನುವಂತೆ ಆಗಿದೆ. ಹಣ ಇದ್ದರೆ ಹೇಗಾದರೂ ಮತ ಖರೀದಿಸಬಹುದು ಎನ್ನುವ ಸ್ಥಿತಿ ಇದೆ. 70–80ರ ದಶಕದ ರಾಜಕಾರಣವನ್ನು ಈಗ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ’ ಎಂದು ಇಂದಿನ ರಾಜಕಾರಣ ಮತ್ತು ಹಣ ಚಲಾವಣೆಯ ಬಗ್ಗೆ ಮಾತಿಗೆ ಹೊರಳುವರು.

ಮಾಧುಸ್ವಾಮಿ ರಾಜಕೀಯ ಹಾದಿ

1989: ಜನತಾದಳದಿಂದ ಸ್ಪರ್ಧೆ; ಗೆಲುವು

1994: ಜನತಾದಳದಿಂದ ಸ್ಪರ್ಧೆ; ಸೋಲು

1997: (ಉಪಚುನಾವಣೆ) ಜನತಾದಳದಿಂದ ಸ್ಪರ್ಧೆ; ಗೆಲುವು

1999: ಜನತಾದಳ (ಯು) ಸ್ಪರ್ಧೆ; ಸೋಲು

2004: ಜನತಾದಳ (ಯು) ಸ್ಪರ್ಧೆ; ಗೆಲುವು

2008: ಜನತಾದಳ (ಯು) ಸ್ಪರ್ಧೆ; ಸೋಲು

2013: ಕೆಜೆಪಿಯಿಂದ ಸ್ಪರ್ಧೆ; ಸೋಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.