ADVERTISEMENT

ರಾಜಕೀಯ ನೆಲೆಗಾಗಿ ಜೆಡಿಎಸ್‌ನಲ್ಲಿ ಪೈಪೋಟಿ

ಕುಣಿಗಲ್ ವಿಧಾನಸಭಾ ಕ್ಷೇತ್ರ

ಕೆ.ಜೆ.ಮರಿಯಪ್ಪ
Published 19 ಜನವರಿ 2013, 6:55 IST
Last Updated 19 ಜನವರಿ 2013, 6:55 IST
ರಾಜಕೀಯ ನೆಲೆಗಾಗಿ ಜೆಡಿಎಸ್‌ನಲ್ಲಿ ಪೈಪೋಟಿ
ರಾಜಕೀಯ ನೆಲೆಗಾಗಿ ಜೆಡಿಎಸ್‌ನಲ್ಲಿ ಪೈಪೋಟಿ   

ತುಮಕೂರು: ಕುಣಿಗಲ್ ವಿಧಾನಸಭೆ ಕ್ಷೇತ್ರದಲ್ಲಿ ಈ ಬಾರಿ ಯಾರು ಆಯ್ಕೆಯಾಗಲಿದ್ದಾರೆ? ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ. ಚುನಾವಣೆ ಇನ್ನೂ ಮೂರ‌್ನಾಲ್ಕು ತಿಂಗಳು ಇರುವಾಗಲೇ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಆರಂಭವಾಗಿವೆ.

ಕ್ಷೇತ್ರಗಳ ಪುನರ್ ವಿಂಗಡಣೆ ನಂತರ ಹುಲಿಯೂರುದುರ್ಗ ಕ್ಷೇತ್ರ ಕುಣಿಗಲ್ ಕ್ಷೇತ್ರದಲ್ಲಿ ವಿಲೀನವಾಯಿತು. ಈ ಬೆಳವಣಿಗೆಯಿಂದಾಗಿ ತಾಲ್ಲೂಕಿನಲ್ಲಿ ರಾಜಕೀಯ ಮುಖಂಡರ ಸಂಖ್ಯೆ ಸಹ ಹೆಚ್ಚಾಗಿದೆ. ಕುಣಿಗಲ್ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ತುಮಕೂರು ತಾಲ್ಲೂಕಿನ ಹೆಬ್ಬೂರು, ನಾಗವಲ್ಲಿ ಭಾಗಗಳು ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಸೇರ್ಪಡೆಯಾಗಿವೆ. ಇದರಿಂದ ಕುಣಿಗಲ್ ತಾಲ್ಲೂಕಿನ ಎಲ್ಲ ಭಾಗಗಳು ಒಂದೇ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಂತಾಗಿದೆ. ಎರಡು ಕ್ಷೇತ್ರ ಪ್ರತಿನಿಧಿಸುತ್ತಿದ್ದ ನಾಯಕರು ಒಂದೇ ಕ್ಷೇತ್ರದ ವ್ಯಾಪ್ತಿಯಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಬೇಕಾಗಿರುವುದರಿಂದ ಸಹಜವಾಗಿಯೇ ಪೈಪೋಟಿ ಕಂಡುಬರುತ್ತಿದೆ.

ಕಾಂಗ್ರೆಸ್, ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆಗೆ ಹೆಚ್ಚಿನ ಕಸರತ್ತು ಬೇಕಿಲ್ಲ. ಆದರೆ ಜೆಡಿಎಸ್ ಬಗ್ಗೆ ಇದೇ ಮಾತು ಹೇಳಲು ಸಾಧ್ಯವಿಲ್ಲ. ಯಾರು ಅಭ್ಯರ್ಥಿ? ಎಂಬ ಪ್ರಶ್ನೆಗೆ ಕೊನೆಯ ಕ್ಷಣದವರೆಗೆ ಉತ್ತರ ಸಿಗುವುದು ಕಷ್ಟ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಶಾಸಕ ಎಸ್.ಪಿ.ಮುದ್ದಹನುಮೇಗೌಡ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗೆ ಪ್ರಯತ್ನ ನಡೆಸಿದ್ದು ಫಲ ನೀಡಲಿಲ್ಲ. ಟಿಕೆಟ್ ಗಿಟ್ಟಿಸಿಕೊಂಡು ಸ್ಪರ್ಧಿಸಿದ ಬಿ.ಬಿ.ರಾಮಸ್ವಾಮಿಗೌಡ ಶಾಸಕರಾಗಿ ಆಯ್ಕೆಯಾದರು. ಟಿಕೆಟ್ ಸಿಗದೆ ಬೇಸತ್ತ ಮುದ್ದಹನುಮೇಗೌಡ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದರು.

ಹಾಲಿ ಶಾಸಕರಿಗೆ ಟಿಕೆಟ್ ನೀಡುವುದಾಗಿ ಕಾಂಗ್ರೆಸ್ ಹೈಕಮಾಂಡ್ ಭರವಸೆ ನೀಡಿರುವುದರಿಂದ ರಾಮಸ್ವಾಮಿಗೌಡರಿಗೆ ಟಿಕೆಟ್ ಸಿಗುವುದು ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ. ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆ ಹೊಂದಿರುವ ಕುಣಿಗಲ್ ತಾಲ್ಲೂಕು ಅಮೃತೂರು ಹೋಬಳಿ ಚಂದನಹಳ್ಳಿ ಮೂಲದ ಸಿ.ಎನ್.ರವಿಕಿರಣ್ ಸಹ ಟಿಕೆಟ್‌ಗೆ ಯತ್ನಿಸುತ್ತಿದ್ದಾರೆ. ನಗರದಲ್ಲಿ ಸಿ.ಎಂ.ನಾಗರಾಜ್ ಫೌಂಡೇಷನ್ ಟ್ರಸ್ಟ್ ಕಚೇರಿ ತೆರೆದು ದಾನ- ಧರ್ಮದ ಕೆಲಸದಲ್ಲಿ ನಿರತರಾಗಿದ್ದರು.

ಹಾಲಿ ಶಾಸಕರಿಗೆ ಟಿಕೆಟ್ ನೀಡುವುದಾಗಿ ಕಾಂಗ್ರೆಸ್ ಹೈಕಮಾಂಡ್ ಹೇಳಿಕೆ ನೀಡುತ್ತಿರುವುದು ರವಿಕಿರಣ್‌ಗೆ ಸ್ವಲ್ಪ ಮಟ್ಟಿಗೆ ತಲೆ ಬಿಸಿ ಮಾಡಿದೆ. ಹೈಕಮಾಂಡ್ ಹೇಳಿಕೆ ನಂತರ ಕ್ಷೇತ್ರದಲ್ಲಿ ತಮ್ಮ ಚಟುವಟಿಕೆಗಳನ್ನು ಸ್ವಲ್ಪ ಕಡಿಮೆ ಮಾಡಿದ್ದಾರೆ. ಆದರೆ ತಮ್ಮ ನಾಯಕರ ಮೂಲಕ ಟಿಕೆಟ್ ಪಡೆಯಲು ಪ್ರಯತ್ನ ಮುಂದುವರಿಸಿದ್ದಾರೆ. ಶಾಸಕರಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದೇನೆ. ನನಗೆ ಟಿಕೆಟ್ ಸಿಗಲಿದೆ ಎಂದು ಶಾಸಕರು ಸಹ ಹೇಳುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ತನ್ನ ನಿರ್ಧಾರಕ್ಕೆ ಬದ್ಧವಾದರೆ ರಾಮಸ್ವಾಮಿಗೌಡರಿಗೆ ಟಿಕೆಟ್ ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ.

ಗೊಂದಲದಲ್ಲಿ ಜೆಡಿಎಸ್: ಜೆಡಿಎಸ್‌ನಲ್ಲಿ ಗೊಂದಲ ಮುಂದುವರಿದಿದೆ. ಮಾಜಿ ಶಾಸಕ ಎಸ್.ಪಿ.ಮುದ್ದಹನುಮೇಗೌಡ, ಡಿ.ನಾಗರಾಜಯ್ಯ ಅವರಲ್ಲಿ ಯಾರಿಗೆ ಟಿಕೆಟ್ ಸಿಗಲಿದೆ ಎಂಬ ಕುತೂಹಲ ಮೂಡಿದೆ. ಇಬ್ಬರೂ ತಮಗೆ ಟಿಕೆಟ್ ಸಿಗಲಿದೆ ಎಂದು ಹೇಳಿಕೊಂಡು ಕ್ಷೇತ್ರ ಸಂಚಾರ ನಡೆಸಿದ್ದಾರೆ.

ಕಾಂಗ್ರೆಸ್‌ನಿಂದ ಎರಡು ಬಾರಿ ಶಾಸಕರಾಗಿದ್ದ ಮುದ್ದಹನುಮೇಗೌಡರಿಗೆ ಕಳೆದ ಬಾರಿ ಪಕ್ಷ ಟಿಕೆಟ್ ನೀಡಲಿಲ್ಲ. ಇದರಿಂದ ಬೇಸತ್ತು ಜೆಡಿಎಸ್ ಸೇರಿ, ಲೋಕಸಭೆಗೆ ಸ್ಪರ್ಧಿಸಿ ಸೋತರು. ಚುನಾವಣೆ ಇನ್ನೂ ಒಂದು ವರ್ಷ ಇರುವಾಗಲೇ ಕುಣಿಗಲ್‌ನಲ್ಲಿ ಕಚೇರಿ ತೆರೆದು ಕಾರ್ಯಕರ್ತರ ಜತೆಯಲ್ಲಿ ಇದ್ದಾರೆ. ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡುವುದು, ಕಾರ್ಯಕರ್ತರ ಸಭೆ ನಡೆಸುವುದು ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಡಿ.ನಾಗರಾಜಯ್ಯ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಪಕ್ಷದಲ್ಲಿನ ನಂತರದ ರಾಜಕೀಯ ಬೆಳವಣಿಗೆಗಳು ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗಿದೆ. ನಾಗರಾಜಯ್ಯ ಪುತ್ರ ಡಾ.ರವಿ ಅವರಿಗೆ ಜಿಲ್ಲಾ ಪಂಚಾಯಿತಿ, ಮತ್ತೊಬ್ಬ ಮಗನಿಗೆ ತಾಲ್ಲೂಕು ಪಂಚಾಯಿತಿಗೆ ಟಿಕೆಟ್ ನೀಡಲಾಯಿತು. ಮೊದಲ ಅವಧಿಯಲ್ಲೇ ಡಾ.ರವಿ ಜಿ.ಪಂ. ಅಧ್ಯಕ್ಷ ಸ್ಥಾನಕ್ಕೂ ಏರಿದರು. ಅಧ್ಯಕ್ಷ ಸ್ಥಾನ ನೀಡುವುದಕ್ಕೆ ಪಕ್ಷದ ಸ್ಥಳೀಯ ಮುಖಂಡರದಲ್ಲಿ ವಿರೋಧವೂ ವ್ಯಕ್ತವಾಗಿತ್ತು.

ಡಾ.ರವಿಗೆ ಜಿ.ಪಂ. ಅಧ್ಯಕ್ಷ ಸ್ಥಾನ ನೀಡಿದರೆ ಮುಂದಿನ ಚುನಾವಣೆಯಲ್ಲಿ ಕುಣಿಗಲ್‌ನಿಂದ ಸ್ಪರ್ಧಿಸಲು ನಾಗರಾಜಯ್ಯ ಕುಟುಂಬದವರನ್ನು ಹೊರತುಪಡಿಸಿ ಬೇರೆಯವರಿಗೆ ಅವಕಾಶ ನೀಡಬೇಕು ಎಂಬ ಬೇಡಿಕೆಯನ್ನು ಜೆಡಿಎಸ್ ಮುಖಂಡರು ಇಟ್ಟಿದ್ದರು ಎನ್ನಲಾಗಿದೆ.

ಆ ನಂತರವೂ ಪಕ್ಷದ ಆಂತರಿಕ ವಲಯದಲ್ಲಿ ಟಿಕೆಟ್ ವಿಚಾರವಾಗಿ ಸಾಕಷ್ಟು ಸಲ ಚರ್ಚೆಗಳು ನಡೆದಿದ್ದು, ಮುದ್ದಹನುಮೇಗೌಡರಿಗೆ ಟಿಕೆಟ್ ಸಿಗಬಹುದು ಎಂಬ ಅಲ್ಪ ಮಟ್ಟಿನ ಸುಳಿವು ಸಿಕ್ಕಿದೆ. ಹಾಗಾಗಿ ಅವರೂ ಕ್ಷೇತ್ರದ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದಾಗ, ಸಮಯ ಸಿಕ್ಕಾಗಲೆಲ್ಲ ಟಿಕೆಟ್ ಯಾರಿಗೆ ಎಂಬುದನ್ನು ಖಚಿತಪಡಿಸುವಂತೆ ನಾಗರಾಜಯ್ಯ ಒತ್ತಡ ಹಾಕಿದ್ದಾರೆ. ಕೊನೆಗೆ ಎಲ್ಲರೂ ದೊಡ್ಡ ಗೌಡರ ಕಡೆಗೆ ಕೈತೋರಿಸುತ್ತಿದ್ದಾರೆ. ಪಕ್ಷದ ಹಿರಿಯ ಮುಖಂಡರಾಗಿದ್ದು, ಸಚಿವರಾಗಿಯೂ ಕೆಲಸ ಮಾಡಿದ ಅನುಭವವಿದೆ. ತಮಗೆ ಟಿಕೆಟ್ ನೀಡುತ್ತಾರೆ ಎಂಬ ಆಶಾಭಾವನೆಯಲ್ಲಿ ನಾಗರಾಜಯ್ಯ ಇದ್ದಾರೆ.

ಒಂದು ವೇಳೆ ಟಿಕೆಟ್ ನೀಡದಿದ್ದರೆ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಹೇಳುವ ಮೂಲಕ ವರಿಷ್ಠರನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನವೂ ನಡೆದಿದೆ. ಟಿಕೆಟ್ ಸಿಗದೆ ಜೆಡಿಎಸ್‌ಗೆ ಪಾಠ ಕಲಿಸಲೆಂಬ ಹಠಕ್ಕೆ ಬಿದ್ದರೆ ಪಕ್ಷೇತರರಾಗಿ, ಇಲ್ಲವೆ ಮತ್ತೊಂದು ಹೊಸ ಪಕ್ಷದಿಂದ ಸ್ಪರ್ಧಿಸಲಾಗುವುದು. ಆಗ ಪಕ್ಷಕ್ಕೆ ನಷ್ಟ ಎಂಬ ಪರೋಕ್ಷ ಎಚ್ಚರಿಕೆಯನ್ನೂ ರವಾನಿಸಿದ್ದಾರೆ ಎನ್ನಲಾಗಿದೆ.

ಯಾರಿಗೆ ಟಿಕೆಟ್ ನೀಡಬೇಕು ಎಂದು ನಿರ್ಧರಿಸುವುದು ಪಕ್ಷದ ಮುಖಂಡರಿಗೂ ತಲೆನೋವಾಗಿದೆ. ಇಬ್ಬರಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಮತ್ತೊಬ್ಬರಿಂದ ಪ್ರತಿರೋಧ ಎದುರಿಸಬೇಕಾಗುತ್ತದೆ. ಯಾರನ್ನು ಸಮಾಧಾನ ಮಾಡುವುದೆಂದು ತಲೆ ಬಿಸಿ ಮಾಡಿಕೊಂಡಿದ್ದಾರೆ. ನಾಮಪತ್ರ ಸಲ್ಲಿಸುವ ಕೊನೆ ಕ್ಷಣದವರೆಗೂ ಈ ವಿಚಾರ ಇತ್ಯರ್ಥಪಡಿಸುವುದು ಕಷ್ಟಕರ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಬಿಜೆಪಿ- ಕೃಷ್ಣಕುಮಾರ್: ಡಿ.ನಾಗರಾಜಯ್ಯ ಸಹೋದರ ಡಿ.ಕೃಷ್ಣಕುಮಾರ್ ಬಿಜೆಪಿಯಿಂದ ಸ್ಪರ್ಧಿಸುವುದು ಬಹುತೇಕ ಖಚಿತ. ತನ್ನ ಅಣ್ಣ ನಾಗರಾಜಯ್ಯ ಜತೆಯಲ್ಲೇ ರಾಜಕೀಯವಾಗಿ ಬೆಳೆದು ಬಂದ ಕೃಷ್ಣಕುಮಾರ್ ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಟಿಕೆಟ್‌ಗೆ ಪ್ರಯತ್ನ ನಡೆಸಿದರು. ಟಿಕೆಟ್ ಸಿಗದಿದ್ದಾಗ ಸಂಬಂಧ ಕಡಿದುಕೊಂಡು ಬಿಜೆಪಿ ಸೇರಿ ಸ್ಪರ್ಧೆಗಿಳಿದರು.

ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ನಾಗರಾಜಯ್ಯ ಅವರಿಗೆ ಸಾಕಷ್ಟು ಪೈಪೋಟಿ ನೀಡಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಚುನಾವಣೆಯಲ್ಲಿ ಸೋತ ನಂತರವೂ ಪಕ್ಷದಲ್ಲೇ ಇದ್ದುಕೊಂಡು ಕಾರ್ಯಕರ್ತರ ಒಡನಾಟದಲ್ಲಿ ಇದ್ದಾರೆ. ಕಳೆದ ತಿಂಗಳು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಇತರರನ್ನು ಕರೆಸಿ ಕಾರ್ಯಕರ್ತರ ಸಭೆ ಮಾಡಿಸುವ ಮೂಲಕ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.
ಇನ್ನೂ ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಪಕ್ಷಗಳಲ್ಲಿ ಯಾವ ಚಟುವಟಿಕೆಗಳೂ ಕಾಣುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.