ADVERTISEMENT

ರಾಮಕೃಷ್ಣ ಸೇವಾಶ್ರಮದಿಂದ 32 ಗ್ರಾಮಗಳಿಗೆ ಉಚಿತ ಮೇವು

​ಪ್ರಜಾವಾಣಿ ವಾರ್ತೆ
Published 7 ಜುಲೈ 2012, 9:40 IST
Last Updated 7 ಜುಲೈ 2012, 9:40 IST

ತುಮಕೂರು: ಬರಗಾಲ ಹಿನ್ನೆಲೆಯಲ್ಲಿ ಪಾವಗಡ ತಾಲ್ಲೂಕಿನ ನಾಗಲಮಡಿಕೆ ಹೋಬಳಿಯ 32 ಗ್ರಾಮಗಳ ರೈತರಿಗೆ ಉಚಿತವಾಗಿ ಮೇವು ವಿತರಣೆ ಮಾಡಲಾಗುವುದು ಎಂದು ಪಾವಗಡ ರಾಮಕೃಷ್ಣ ಸೇವಾಶ್ರಮದ ಜಪಾನಂದಜೀ ತಿಳಿಸಿದರು.

ಬೇಸಿಗೆಯಲ್ಲಿ ರೈತರಿಗೆ 120 ಟನ್ ಮೇವು ವಿತರಣೆ ಮಾಡಲಾಗಿದೆ. ಮುಂಗಾರು ಮಳೆ ಬಾರದಿರುವುದಿದ್ದರೆ ಜುಲೈ, ಆಗಸ್ಟ್‌ನಲ್ಲಿ ಮತ್ತೆ ಮೇವು ವಿತರಿಸಲಾಗುವುದು. ಗ್ರಾಮಗಳಿಗೆ ತೆರಳಿ ಜಾನುವಾರು ಸಂಖ್ಯೆಗೆ ಅನುಗುಣವಾಗಿ ಮೇವು ವಿತರಿಸಲು ನಿರ್ಧರಿಸಲಾಗಿದೆ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮೇವು ವಿತರಣೆ ಕಾರ್ಯಕ್ಕೆ ತಮ್ಮಂದಿಗೆ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಸಹ ಕೈಜೋಡಿಸಿದ್ದಾರೆ. ಆಂಧ್ರಪ್ರದೇಶದ ಅನಂತಪುರ, ದಾವಣಗೆರೆ, ಹೊನ್ನಾಳಿ ಮುಂತಾದ ಕಡೆಯಿಂದ ಮೇವು ತರಿಸಲಾಗುತ್ತಿದೆ. ಈ ವಾರದಲ್ಲಿ ಮೇವು ವಿತರಣೆ ಆರಂಭವಾಗಲಿದೆ. ಜಿಲ್ಲಾಡಳಿತ ಸಹಕಾರ ನೀಡಿದರೆ ಇಡೀ ತಾಲ್ಲೂಕಿಗೆ ಮೇವು ವಿತರಣೆಗೆ ಸಿದ್ಧ.
 
ಅಲ್ಲದೆ ಇಲ್ಲಿ ಗೋಶಾಲೆ ತೆರೆಯಲು ಮುಂದಾದರೆ ಆಶ್ರಮದ ವತಿಯಿಂದ ಸೌಲಭ್ಯ ಒದಗಿಸಲು ಸಿದ್ಧ. ಈ ಬಗ್ಗೆ ಜಿಲ್ಲಾಧಿಕಾರಿಯನ್ನು ಕೋರಲಾಗುವುದು ಎಂದು ಅವರು ಹೇಳಿದರು.ನಾಗಲಮಡಿಕೆ ಹೋಬಳಿಯ ರಾಯಚರ‌್ಲು, ವಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 300 ಮಂದಿ ವೃದ್ಧರನ್ನು ಗುರುತಿಸಿಲಾಗಿದ್ದು, ಅವರಿಗೆ ಧಾನ್ಯ ವಿತರಿಸಲಾಗುತ್ತಿದೆ. ಅಲ್ಲದೆ 210 ಮಂದಿ ಕ್ಷಯ, ಕುಷ್ಠ,  ಏಡ್ಸ್ ರೋಗಿಗಳಿಗೆ ಆಶ್ರಮದ ವತಿಯಿಂದ ಪ್ರತಿ ವಾರಕ್ಕೆ ತಲಾ 5 ಕೆ.ಜಿ. ಧಾನ್ಯ ನೀಡಲಾಗುತ್ತಿದೆ ಎಂದರು.

ಕುಡಿಯುವ ನೀರು: ಪಾವಗಡ ಪಟ್ಟಣದ ಅತ್ಯಂತ ಹಿಂದುಳಿದ ಸೌಲಭ್ಯ ರಹಿತ ಪ್ರದೇಶಗಳಿಗೆ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಉಚಿತವಾಗಿ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಲಾರಿ ಮತ್ತು 600 ಲೀಟರ್ ಸಾಮರ್ಥ್ಯದ ಟ್ಯಾಂಕರ್ ಖರೀದಿಸಲಾಗಿದೆ. ಪ್ರತಿದಿನ ಬಡಾವಣೆಗಳಿಗೆ ನೀರು ನೀಡಲಾಗುವುದು ಎಂದರು. ಆಶ್ರಮದ ವ್ಯವಸ್ಥಾಪಕರಾದ ನಾಗರಾಜು, ಚಂದ್ರಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.