ADVERTISEMENT

ರಾಸುಗಳಿಗೆ ಗೋಶಾಲೆ, ಕುರಿಗಳಿಲ್ಲ ಆಸರೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2012, 8:10 IST
Last Updated 14 ಆಗಸ್ಟ್ 2012, 8:10 IST

ಶಿರಾ: ಸಾಕು ಪ್ರಾಣಿಗಳ ವಿಷಯದಲ್ಲಿ ಸರ್ಕಾರ ತಾರತಮ್ಯವನ್ನೇಕೆ ಮಾಡುತ್ತಿದೆ ಎಂಬ ಪ್ರಶ್ನೆ ತಾಲ್ಲೂಕಿನ ಕುರಿಗಾಹಿಗಳನ್ನು ಕಾಡುತ್ತಿದೆ.

ಬರಗಾಲದಲ್ಲಿ ದನ, ಎಮ್ಮೆಗಳಿಗೆ ಗೋಶಾಲೆ ತೆರೆಯಲಾಗಿದೆ. ಆದರೆ ಕುರಿ ಮೇಕೆಗಳನ್ನು ನಿರ್ಲಕ್ಷಿಸಲಾಗಿದೆ. ದನ- ಎಮ್ಮೆಗಳಷ್ಟೇ ಪ್ರೀತಿಯಿಂದ ಗ್ರಾಮೀಣ ಪ್ರದೇಶದಲ್ಲಿ ಕುರಿ- ಮೇಕೆಗಳನ್ನೂ ಸಾಕಲಾಗುತ್ತಿದೆ. ಹೈನುಗಾರಿಕೆ ಉಪಕಸುಬಾದರೆ ಕುರಿಸಾಕಣೆ ಮುಖ್ಯ ಕಸುಬಾಗಿದೆ.

ಬರದ ಹೊಡೆತದಿಂದಾಗಿ ಮೇಕೆ- ಕುರಿ ಸಾಕಣೆದಾರರು ಮೇವಿಗಾಗಿ ಪರದಾಡುತ್ತಿದ್ದಾರೆ. ಜಾನುವಾರುಗಳಿಗೆ ಒಣ ಮೇವನ್ನಾದರೂ ತಿನ್ನಿಸಿ ಜೀವ ಉಳಿಸಬಹುದು. ಆದರೆ ಆಡು- ಕುರಿಗಳಿಗೆ ಅಡವಿಯ ಕುರುಚಲು ಕಾಡಿನ ಹಸಿ ಎಲೆಗಳೇ ಆಗಬೇಕು.

ಕಳೆದ ಎರಡು ವರ್ಷದಿಂದ ಮಳೆ ಇಲ್ಲದೆ ಅಡವಿಯಲ್ಲಿ ಹುಲ್ಲಿನ ಮಾತಿರಲಿ, ಕುರುಚಲು ಗಿಡಗಳು ನಾಶವಾಗಿವೆ. ಹೀಗಾಗಿ ಅಡವಿಯಲ್ಲಿ ಅಕ್ಷರಶಃ ಮೇವಿಲ್ಲ. ಹೊಂಗೆ ಸೊಪ್ಪು ಎಂದರೆ ಮಾರುದ್ದ ಓಡುವ ಕುರಿಗಳು ಹಸಿವಿನಿಂದ ಕಂಗೆಟ್ಟು ಅದನ್ನೂ ತಿನ್ನುತ್ತಿವೆ.

ಸರ್ಕಾರ ಜಾನುವಾರುಗಳಿಗೆ ಗೋಶಾಲೆ ತೆರೆದು ನೆರವಾಗಿದೆಯೇ ಹೊರತು, ಆಡು-ಕುರಿಗಳ ಆಹಾರದ ಹಾಹಾಕಾರದ ಬಗ್ಗೆ ಚಿಂತನೆಯನ್ನೇ ಮಾಡಿಲ್ಲ ಎಂದು ಕುರಿಗಾಹಿಗಳು ಬೇಸರ ವ್ಯಕ್ತಪಡಿಸುತ್ತಾರೆ.

ರಾಜ್ಯದಲ್ಲಿಯೇ ಅತಿ ಹೆಚ್ಚು ಕುರಿಗಳಿರುವ ಹೆಗ್ಗಳಿಕೆ ಶಿರಾ ತಾಲ್ಲೂಕಿಗಿದೆ. ತಾಲ್ಲೂಕಿನ ಆರ್ಥಿಕ ವಹಿವಾಟಿನಲ್ಲಿ ಕುರಿಗಳು ಪ್ರಮುಖ ಪಾತ್ರವಹಿಸುತ್ತಿವೆ. ಆದರೆ ಮೇವು ಸಂಕಷ್ಟ ಸೇರಿದಂತೆ ಹಲವು ಬವಣೆಗಳಿಂದ ಕುರಿಗಾಹಿಗಳು ಕುರಿ ಸಾಕಣೆ ಕಸುಬಿನಿಂದ ದೂರ ಸರಿಯುತ್ತಿದ್ದಾರೆ. ಬರದಿಂದ ಕಂಗೆಟ್ಟಿರುವ ಅವರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಕುರಿಗಾಹಿ ಅಜ್ಜಯ್ಯ ಆಗ್ರಹಿಸುತ್ತಾರೆ.

ಶಾಸಕರು ಸೇರಿದಂತೆ ಯಾರೊಬ್ಬರೂ ಈ ವಿಚಾರ ಪ್ರಸ್ತಾಪಿಸುತ್ತಿಲ್ಲ. ಕುರಿಗಳಿಗಾಗಿ ಗೋಶಾಲೆ ಮಾದರಿಯಲ್ಲಿಯೇ ಮೇವು ಕೇಂದ್ರ ಆರಂಭಿಸಿ ಮೆಕ್ಕೆಜೋಳ ಮುಂತಾದ ಪೌಷ್ಠಿಕ ಆಹಾರ ವಿತರಿಸಬೇಕು ಎಂಬುದು ಕುರಿಗಾಹಿಗಳ ಹಂಬಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.