ADVERTISEMENT

ರಿಯಲ್‌ಎಸ್ಟೇಟ್ ಉದ್ಯಮಿ ಕೊಲೆ: ಬಂಧನ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2011, 10:10 IST
Last Updated 19 ಅಕ್ಟೋಬರ್ 2011, 10:10 IST

ತುಮಕೂರು: ನಗರದ ಶಿರಾ ಗೇಟ್‌ಬಳಿ ಈಚೆಗೆ ಹಾಡಹಗಲೆ ನಡೆದಿದ್ದ ರಿಯಲ್ ಎಸ್ಟೇಟ್ ಉದ್ಯಮಿ ನರಸಿಂಹಮೂರ್ತಿ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಚಾಂದ್ ತಲೆಮರೆಸಿಕೊಂಡಿದ್ದಾನೆ.

ಆರೋಪಿಗಳನ್ನು ಸೋಮಣ್ಣ (42), ರಾಜೀವಲೋಚನಬಾಬು (45), ಯೋಗೀಶ್ (40), ಪಾನಿಪೂರಿ ಯದು ಕುಮಾರ್ (42), ಹೆಬ್ಬಾಕ ಸಿದ್ದಲಿಂಗಪ್ಪ (58) ಎಂದು ಗುರುತಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಟಿ.ಆರ್‌ಸುರೇಶ್ ಮಂಗಳವಾರ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.

ಕೊಲೆಗೆ ಜಮೀನು, ಕೇಬಲ್ ವಿವಾದ ಕಾರಣವಾಗಿದ್ದು ಆರೋಪಿಗಳಾಗಿರುವ 6 ಜನರೊಂದಿಗೆ ಕೊಲೆಯಾದ ನರಸಿಂಹ ಮೂರ್ತಿ ಹಣಕಾಸು, ಭೂಮಿ ವಿಚಾರದಲ್ಲಿ ವೈಷಮ್ಯ ಕಟ್ಟಿಕೊಂಡಿದ್ದನು. ಶಿರಾಗೇಟ್ ನಿವೇಶನವೊಂದನ್ನು ಮಾರಾಟ ಮಾಡಿದ ಹಣದಲ್ಲಿ ನರಸಿಂಹ ಮೂರ್ತಿ ತನ್ನ ಹೆಂಡತಿಯ ಅಕ್ಕನ ಗಂಡನಾದ ಆರೋಪಿ ಸೋಮಣ್ಣನಿಗೆ ಕೊಡಬೇಕಾಗಿದ್ದ ಪಾಲು ಕೊಟ್ಟಿರಲಿಲ್ಲ.

ರಾಜೀವಲೋಚನಾ ಬಾಬು ಜತೆ ಕೇಬಲ್ ವ್ಯವಹಾರದಲ್ಲಿ ಜಗಳವಾಗಿತ್ತು. ಆರೋಪಿ ಯೋಗೀಶ್‌ನ ಜೊತೆಯೂ ನಿವೇಶನದ ವಿಚಾರದಲ್ಲಿ ವೈಷಮ್ಯ ಬೆಳೆದಿತ್ತು. ಈ ಎಲ್ಲ ಕಾರಣಗಳಿಂದ ಆರೋಪಿಗಳೆಲ್ಲರೂ ಒಟ್ಟಾಗಿ ಕೊಲೆ ಮಾಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಬಂಧಿತ ಆರೋಪಿಗಳ ಮೇಲೆ ಹಲವು ಪ್ರಕರಣಗಳಿವೆ. ಜಮೀನು, ಸೈಟು, ಕೇಬಲ್ ವ್ಯವಹಾರವನ್ನು ಜೊತೆಯಾಗಿ ಮಾಡುತ್ತಿದ್ದರು. ಜಗಳ- ತಕರಾರು ಇರುವ ಜಮೀನುಗಳನ್ನು ತೆಗೆದುಕೊಂಡು ಅದನ್ನು ಬೇರೆಯವರಿಗೆ ಮಾರಿ ಬಂದ ಲಾಭದಲ್ಲಿ ಹಣ ಹಂಚಿಕೊಳ್ಳುತ್ತಿದ್ದರು. 2010ರಲ್ಲಿ ರಮೇಶ್ ಎಂಬುವರಿಂದ ಶಿರಾಗೇಟ್ ಸಮೀಪ ತಕರಾರು ಇದ್ದ 3 ಎಕರೆ ಭೂಮಿಯನ್ನು ಖರೀದಿಸಿದ್ದರು.

ಈ ಭೂಮಿಯ ತಕರಾರು ಬಗೆಹರಿಸಿ ಮಾರಾಟ ಮಾಡುವ ಹೊಣೆಯನ್ನು ನರಸಿಂಹಮೂರ್ತಿ ಹಾಗೂ ಅವರ ತಾಯಿಗೆ ವಹಿಸಲಾಗಿತ್ತು. ಅದರಂತೆ ಮೂರು ಎಕರೆ ಜಮೀನು ಮಾರಿದ್ದರು. ಆದರೆ ಇದರಲ್ಲಿ ಹೆಚ್ಚುವರಿಯಾಗಿ ಇದ್ದ 16 ಗುಂಟೆ ಭೂಮಿಯನ್ನು ನರಸಿಂಹಮೂರ್ತಿ ಇಟ್ಟುಕೊಂಡಿದ್ದರು. ಈ ಭೂಮಿಗೆ ಸಂಬಂಧಿಸಿದಂತೆ ತಕರಾರು ಇತ್ತು ಎಂದು ಅವರು ಹೇಳಿದರು.

ಆರೋಪಿಗಳೇ ನೇರವಾಗಿ ಕೊಲೆ ಮಾಡಿದ್ದಾರೆಯೇ ಅಥವಾ ಹೊರ ಗಿನವರೂ ಸುಫಾರಿ ನೀಡಿದ್ದರೆ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಕೊಲೆಗೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದು ತನಿಖೆ ಇನ್ನು ಮುಂದುವರೆದಿದೆ. ತಲೆಮರೆಸಿಕೊಂಡಿ ರುವ ಪ್ರಮುಖ ಚಾಂದ್ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಸೋಮಣ್ಣ, ರಾಜೀವಲೋಚನ ಬಾಬು, ಯೋಗೀಶ್ ಸೇರಿಕೊಂಡು ದಾರಿಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ನರಸಿಂಹಮೂರ್ತಿಯನ್ನು ತಡೆದು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದರು. ಆದರೆ ಕೊಲೆಗೂ ಮುನ್ನ ಮಧ್ಯಾಹ್ನ 3 ಗಂಟೆಗೆ ಗುಪ್ತ ಸಭೆ ನಡೆಸಿದ್ದು, ಈ ಸಭೆಯಲ್ಲಿ ಪ್ರಕರಣದ ಆರು ಆರೋಪಿಗಳು ಭಾಗವಹಿಸಿದ್ದರು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ತಿಳಿಸಿದರು.

ಆರೋಪಿಗಳ ಬಂಧನಕ್ಕೆ ನಗರ ಡಿವೈಎಸ್‌ಪಿ ಎಸ್.ಆರ್. ವಿಜಯಕುಮಾರ್ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಎಲ್.ಕುಮಾರಪ್ಪ, ಸಬ್‌ಇನ್ಸ್‌ಪೆಕ್ಟರ್‌ಗಳಾದ ಮುನಿರಾಜು, ಶ್ರೀಕಂಠಮೂರ್ತಿ ಅವರನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.