ಶಿರಾ: ಈವರೆಗೆ ಬ್ಯಾಂಕ್‌ಗಳಿಂದ ಯಾವುದೇ ರೀತಿಯ ಸಾಲ ಪಡೆದಿಲ್ಲದ ರೈತರಿದ್ದರೆ ಸೆ. 30ರೊಳಗೆ ಸಾಲ ಕೊಡುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಆದೇಶಿಸಿದೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಶ್ರಿನಿವಾಸ್ ಹೇಳಿದರು.
ಸರ್ಕಾರದ ವಿವಿಧ ಯೋಜನೆಗಳಿಗೆ ಬಿಡುಗಡೆಯಾಗುವ ಸಹಾಯಧನ ಸೇರಿದಂತೆ ವಿವಿಧ ರೀತಿಯ ಹಣವನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಬ್ಯಾಂಕ್‌ಗಳು ವಿಫಲವಾಗುತ್ತಿರುವ ಬಗ್ಗೆ ತಾಲ್ಲೂಕು ಪಂಚಾಯಿತಿ ಸಭಾಂಗಣ ದಲ್ಲಿ ಗುರುವಾರ ನಡೆದ ಬ್ಯಾಂಕ್ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ಸಾಲ ಪಡೆಯದ ರೈತರಿದ್ದರೆ ಅಂಥವರ ಪಟ್ಟಿಯನ್ನು ಬ್ಯಾಂಕ್‌ಗಳಿಗೆ ನೀಡುವಂತೆ ತಹಶೀಲ್ದಾರ್ ಸೇರಿದಂತೆ ಇತರೆ ಅಧಿಕಾರಿಗಳಿಗೆ ಮನವಿ ಮಾಡಿದರು.
ಸಾಲ ಪಡೆಯದ ರೈತರು ಸಾಲ ನೀಡುವಂತೆ ಕೋರಿ ಬ್ಯಾಂಕ್‌ಗಳಿಗೆ ಬಂದರೆ ಅಂಥವರನ್ನು ಯಾವುದೇ ಕಾರಣಕ್ಕೂ ವಾಪಸ್ ಕಳಹಿಸದೆ ಹಸು, ಕುರಿ, ಬೆಳೆ ಸಾಲ ಸೇರಿದಂತೆ ಯಾವುದೇ ಸಾಲ ನೀಡುವುದು ಕಡ್ಡಾಯ ಎಂದು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ಅದೇ ರೀತಿ ಶೈಕ್ಷಣಿಕ ಸಾಲ ನೀಡುವುದು ಕಡ್ಡಾಯವಾಗಿದೆ. ವಿದ್ಯಾರ್ಥಿಯ ಅಪ್ಪ, ಅಮ್ಮನ ಸಾಲ ಇದೆ ಎಂದು ಬ್ಯಾಂಕ್‌ಗಳು ಸಾಲ ನೀಡುವುದನ್ನು ತಿರಸ್ಕರಿಸುವಂತಿಲ್ಲ. ಅಂತಹ ಪ್ರಕರಣಗಳಿದ್ದರೆ ತಮ್ಮ ಗಮನಕ್ಕೆ ತನ್ನಿ ಎಂದು ಹೇಳಿದರು.
ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿ, ಸರ್ಕಾರಿ ಯೋಜನೆಗಳ ಫಲಾನುಭವಿಗಳು 10- 15 ಸಾವಿರ ಸಹಾಯಧನ ಪಡೆಯಲು ವಿವಿಧ ಕಚೇರಿ, ಬ್ಯಾಂಕ್‌ಗಳಿಗೆ ಅಲೆದು ಕೊನೆಗೆ ಅಷ್ಟನ್ನು ಅಲೆದಾಟದಲ್ಲೇ ವ್ಯಯಿಸುವಂತೆ ಆಗುತ್ತಿದೆ. ಇದಕ್ಕೆ ಪ್ರಮುಖವಾಗಿ ಬ್ಯಾಂಕ್ ಅಧಿಕಾರಿಗಳು ಕಾರಣ ಎಂದು ದೂರಿದರು.
ಸಭೆಯಲ್ಲಿ ತಹಶೀಲ್ದಾರ್ ವಿ. ಪಾತರಾಜು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ. ತಮ್ಮಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಕೆ.ಬಡೀರಣ್ಣ, ಎಸ್‌ಬಿಎಂ ಅಧಿಕಾರಿ ಕುಂಬಯ್ಯ ಮತ್ತಿತರರು ಇದ್ದರು.
ಕೃಷಿ ಅಧಿಕಾರಿಗೆ ತರಾಟೆ
ಶಿರಾ: ಏಯ್ ಯಾಕೆ ಬಂದಿ ದ್ದೀಯಾ...? ಕಾಫಿ ಕುಡಿದು ಹೋಗಲಿಕ್ಕೆ ಬಂದಿದ್ದೀಯಾ...? ನಾಚಿಕೆ ಆಗೋದಿಲ್ವಾ...? ಸಭೆಗೆ ಬರ ಬೇಕಾದರೆ ಮಾಹಿತಿ ಜೊತೆ ಬರಬೇಕು ಅಂತ...!
ಶಾಸಕ ಟಿ.ಬಿ.ಜಯಚಂದ್ರ ಕೃಷಿ ಇಲಾಖೆ ಅಧಿಕಾರಿಯೊಬ್ಬರನ್ನು ಏಕವಚನದಲ್ಲಿ ತರಾಟೆಗೆ ತೆಗೆದು ಕೊಂಡ ಪ್ರಸಂಗ ಗುರುವಾರ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ನಡೆಯಿತು.
ತಾಲ್ಲೂಕಿನ ಸುವರ್ಣ ಭೂಮಿ ಫಲಾನುಭವಿಗಳ ಪಟ್ಟಿ ನೀಡುವಂತೆ ಕೃಷಿ ಇಲಾಖೆ ಅಧಿಕಾರಿಗೆ ಕೇಳಿದಾಗ ಪಟ್ಟಿ ತನ್ನ ಬಳಿ ಇಲ್ಲ. ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಬೇರೆ ಕಾರ್ಯನಿಮಿತ್ತ ಹೋಗಿದ್ದಾರೆ ಎಂದು ಹೇಳಿದರು.
ಇದು ಶಾಸಕರ ಕೋಪಕ್ಕೆ ಕಾರಣವಾಯಿತು. ಹಾಗಿದ್ದರೆ ನೀನೇಕೆ ಸಭೆಗೆ ಬಂದೆ? ಬೇಗ ಸುವರ್ಣಭೂಮಿ ಫಲಾನುಭವಿಗಳ ಪಟ್ಟಿ ತರಿಸಬೇಕು ಎಂದು ತಾಕೀತು ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.