ADVERTISEMENT

ಲೋಕಾಯುಕ್ತ ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2012, 3:55 IST
Last Updated 21 ಮಾರ್ಚ್ 2012, 3:55 IST

ತಿಪಟೂರು: ನಗರಸಭೆ ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿಯಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ಅವ್ಯವಹಾರವನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸಬೇಕು ಎಂದು ನಗರಸಭೆಯ 22 ಸದಸ್ಯರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಶೇಖರ್, ಉಪಾಧ್ಯಕ್ಷ ಟಿ.ಎನ್.ಪ್ರಕಾಶ್ ಹಾಗೂ ಕೆಲ ಸದಸ್ಯರೊಂದಿಗೆ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಎಂ.ಆರ್.ದಿನೇಶ್‌ಕುಮಾರ್ ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಚೆಗೆ ಬೆಳಕಿಗೆ ಬಂದ ತೆರಿಗೆ ಹಣ ವಂಚನೆ ಪ್ರಕರಣದಲ್ಲಿ ನಗರಸಭೆಗೆ 2 ಕೋಟಿ ರೂಪಾಯಿಗೂ ಹೆಚ್ಚು ನಷ್ಟವಾಗಿದೆ. ಆದರೆ ಇಷ್ಟೊಂದು ದೊಡ್ಡ ಮೊತ್ತದ ವಂಚನೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ದೂರಿದರು.

ಇದುವರೆವಿಗೂ ಜಿಲ್ಲಾಧಿಕಾರಿ ಸಮಗ್ರ ಪರಿವೀಕ್ಷಣಾ ತಂಡ ಕಳುಹಿಸಿಲ್ಲ. ನಗರಸಭೆ ಸಿಬ್ಬಂದಿ ಮಾತ್ರ ಹಳೆ ಕಡತ ಬಿಚ್ಚಿಕೊಂಡು ಪರಿಶೀಲನೆಯ ಸರ್ಕಸ್ ಮಾಡುತ್ತಿದ್ದಾರೆ. ಇದರಿಂದ ಸತ್ಯ ಹೊರಬರುವ ನಂಬಿಕೆ ಇಲ್ಲ ಎಂದರು.
ನಗರಸಭೆ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿ ಪ್ರಕರಣದ ತನಿಖೆ ಕುರಿತು ದಿಟ್ಟ ನಿರ್ಧಾರ ತಾಳುವರೆಂಬ ನಂಬಿಕೆಯಿಂದ ನಗರಸಭೆ ಸದಸ್ಯರು ಈವರೆಗೆ ಸಂಯಮದಿಂದ ಕಾಯ್ದಿದ್ದರು.
 
ಆ ನಂಬಿಕೆ ಹುಸಿಯಾಗಿದ್ದರಿಂದ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಕರಣವನ್ನು ಮೇಲ್ಮಟ್ಟದ ತನಿಖೆಗೆ ಒಪ್ಪಿಸಬೇಕೆಂಬುದು ತಮ್ಮ ಆಗ್ರಹವಾಗಿದೆ. ಈ ಕುರಿತು ನಗರಾಡಳಿತ ಇಲಾಖೆ ಕಾರ್ಯದರ್ಶಿ, ಪೌರಾಡಳಿತ ಇಲಾಖೆ ನಿರ್ದೇಶಕರಿಗೆ ಈ ಬಗ್ಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು. ನಗರಸಭೆ ಸದಸ್ಯರಾದ ಇಸ್ಮಾಯಿಲ್, ನಾಜೀರ್ ಖಾನ್, ನದೀಂ, ನಸರತ್ತುಲ್ಲಾ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.